Advertisement
ಅರವತ್ತು ವರ್ಷಗಳ (1964) ಹಿಂದೆ ಪ್ರಕಟ ಗೊಂಡ, 50 (1974) ವರ್ಷಗಳ ಹಿಂದೆ ಜ್ಞಾನಪೀಠ ಪ್ರಶಸ್ತಿ ಪಡೆದ ವರಕವಿ ದ. ರಾ. ಬೇಂದ್ರೆಯವರ ಕೃತಿ “ನಾಕು ತಂತಿ’ಗೆ ಈ ವರ್ಷ ಸುವರ್ಣ ಮಹೋತ್ಸವ ವರ್ಷ. ಬೇಂದ್ರೆಯವರು ಒರಿಯಾ ಕಾದಂಬರಿಕಾರ ಗೋಪಿನಾಥ ಮೊಹಂತಿ ಅವರೊಡನೆ ಈ ಪ್ರಶಸ್ತಿ ಹಂಚಿಕೊಂಡರು. 1973ನೇ ವರ್ಷದ ಪ್ರಶಸ್ತಿ ಇದು. 1962-1966ರ ಅವಧಿಯಲ್ಲಿ ಪ್ರಕಟವಾದ ಅತ್ಯುತ್ತಮ ಸಾಹಿತ್ಯ ಕೃತಿಗಾಗಿ ದೊರೆತ 9 ನೇ ವರ್ಷದ ಜ್ಞಾನಪೀಠ ಪ್ರಶಸ್ತಿ ಇದು. ಕನ್ನಡ ಸಾಹಿತ್ಯಕ್ಕೆ ನೀಡಿದ ಎರಡನೆಯ ಪ್ರಶಸ್ತಿಯೂ ಹೌದು. ಕುವೆಂಪು ಅವರು 1967ರಲ್ಲಿ ಗುಜರಾತಿ ಸಾಹಿತಿ ಉಮಾಶಂಕರ ಜೋಶಿ ಅವರ ಜೊತೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದರು. ಗರಿ, ಸಖಿಗೀತ, ನಾದಲೀಲೆ, ಮೇಘದೂತ, ಅರಳುಮರಳು ಮೊದಲಾದ ಕವನ ಸಂಕಲನಗಳಷ್ಟು ವ್ಯಾಪಕ ಪ್ರಮಾಣದ ವಿಮರ್ಶೆ ಅಥವಾ ಸಂವಾದಕ್ಕೆ “ನಾಕುತಂತಿ’ ಕವನ ಸಂಕಲನ ಒಳಪಟ್ಟಿರಲಿಲ್ಲವಾದರೂ, ಸಂಕಲನದ “ಮತ್ತೆ ಶ್ರಾವಣಾ-ಅ’, “ಮತ್ತೆ ಶ್ರಾವಣಾ ಬಂದಾ-ಆ’, “ನಾಕುತಂತಿ’, “ಚೈತನ್ಯದ ಪೂಜೆ’ ಮೊದಲಾದ ಕವನಗಳು ವಿಮರ್ಶಕರ ಗಮನ ಸೆಳೆದಿದ್ದವು.
Related Articles
Advertisement
ಎಲ್ಲರೂ ಹಾಕಿದ ಹಾರಗಳನ್ನು ತೆಗೆದು ಒಂದು ಕಡೆಗೆ ಇಡಲಾಗಿತ್ತು. ಕೆಲವರು ಹಾರ ಹಾಕಲು ಬಯಸಿದ್ದರಾದರೂ ಗಡಿಬಿಡಿಯಲ್ಲಿ ತರಲು ಆಗಿರಲಿಲ್ಲ ಅಥವಾ ಪೇಟೆಯಲ್ಲಿ ಸಿಕ್ಕಿರಲಿಕ್ಕಿಲ್ಲ. ಅವರು ತಮ್ಮ ಗೌರವ ತೋರಿಸುವುದಕ್ಕೋಸ್ಕರ ಅಲ್ಲಿ ರಾಶಿಯಾಗಿ ಒಂದುಗೂಡಿಸಿ ಇಟ್ಟಿದ್ದ ಹಾರದೊಳಗಿಂದ ಒಬ್ಬರು ಒಂದು ಹಾರವನ್ನು ಎತ್ತಿಕೊಂಡು ಕವಿಗಳಿಗೆ ಹಾಕಿ ಸಂಭ್ರಮಿಸಿದರು. ಇದನ್ನು ಕಂಡು ಮತ್ತೆ ಕೆಲವು ಜನರು ಹಾಗೆಯೇ ಅಲ್ಲಿದ್ದ ಹಾರ ತೆಗೆದುಕೊಂಡು ಹಾಕುತ್ತಿದ್ದರು. ಇದನ್ನು ಬೇಂದ್ರೆಯವರು ಸಹ ಗಮನಿಸಿದ್ದರು. ಹೊರಗಡೆ ಜೋರು ಮಳೆ. ಬೇಂದ್ರೆಯವರು ಅಭಿಮಾನಿಗಳ ಈ ವರ್ತನೆಗೆ ಬೇಜಾರು ಸಹ ಮಾಡಿಕೊಳ್ಳಲಿಲ್ಲವಂತೆ. ಮಕರ ಸಂಕ್ರಾಂತಿ ಮರುದಿನ ಕರಿದಿನ. ಅಂದು ಚಿಕ್ಕ ಚಿಕ್ಕ ಮಕ್ಕಳಿಗೆ ಕುಸುರೆಳ್ಳಿನ ಹಾರ, ಅಲಂಕಾರ ಮಾಡಿ, ಚುರುಮುರಿ, ಬೆಂಡು, ಬತ್ತಾಸುಗಳ ಜತೆ ಎರೆಯುತ್ತಾರೆ ಮತ್ತು ಆರತಿ ಮಾಡುತ್ತಾರೆ. ಮುಗ್ಧ ಮಗು ಬೆರಗು, ಸಂತಸದಿಂದ ಈ ಎಲ್ಲಾ ಕ್ರಿಯೆಗಳನ್ನು ನೋಡುತ್ತಿರುತ್ತದೆ. ಅಂದು ಬೇಂದ್ರೆಯವರು ಕೂಡ ಮಕರ ಸಂಕ್ರಾಂತಿಯೆಂದು ಕರಿ ಎರೆಸಿಕೊಳ್ಳುತ್ತಿದ್ದ ಮಗು, ಮುಗ್ಧ ಕೂಸಿನ ಹಾಗೆ ಕಂಡರು ಎಂದು ಬಿದರಕುಂದಿಯವರು ಭಾವುಕರಾಗಿ ಹೇಳಿದರು.
ಹಬ್ಬದಂತೆ ನಡೆದ ಸನ್ಮಾನ ಕಾರ್ಯಕ್ರಮಗಳು: ಆಗ ಗದಗದಿಂದ “ಪಂಚಾಮೃತ’ ಎನ್ನುವ ಮಾಸಿಕ ಪ್ರಕಟವಾಗುತ್ತಿತ್ತು. “ಗಂಗಾ ಲಹರಿ’ ಅನುವಾದಕರಾದ ವಿದ್ವಾಂಸ ಪಂಢರಿನಾಥಾಚಾರ್ಯ ಗಲಗಲಿಯವರು ಸಂಪಾದಕರಾಗಿದ್ದರು. ಅನಿವಾರ್ಯ ಕಾರಣಗಳಿಗಾಗಿ ಅವರು “ಪಂಚಾಮೃತ’ ಡೈಜೆಸ್ಟ್ ನಿಲ್ಲಿಸಬೇಕಾಯಿತು. ಕೊನೆಯ ಸಂಚಿಕೆಯನ್ನು ಆಗಷ್ಟೇ ಜ್ಞಾನಪೀಠ ಪ್ರಶಸ್ತಿ ಪಡೆದ ಬೇಂದ್ರೆಯವರಿಗಾಗಿಯೇ ಮೀಸಲಿಟ್ಟರು. ಅನೇಕ ಲೇಖಕರಿಂದ ಬೇಂದ್ರೆಯವರ ಕುರಿತು, ಅವರ ಕೃತಿಗಳ ಕುರಿತು ಲೇಖನಗಳನ್ನು ಬರೆಸಿ ಪ್ರಕಟಿಸಿದರು. ಸ್ವತಃ ತಾವೂ ಕೂಡ ಬೇಂದ್ರೆಯವರ ಮೇಲೆ 20 ನುಡಿಗಳಲ್ಲಿ, ಅದೂ ಸಂಸ್ಕೃತದಲ್ಲಿ, ಕಾವ್ಯವೊಂದನ್ನು ರಚಿಸಿದರು. ಬೇಂದ್ರೆಯವರ ಸನ್ಮಾನ ಸಮಾರಂಭದಲ್ಲಿ ಆ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಬೆಂಗಳೂರು, ಮೈಸೂರು, ಉಡುಪಿ ಹೀಗೆ ಅನೇಕ ಊರುಗಳಲ್ಲಿ ಕೆಲವು ಕಡೆ ವಿಚಾರ ಗೋಷ್ಠಿಗಳು, ನಾಕುತಂತಿ ಕುರಿತು ಸಂವಾದಗಳು ನಡೆದು, ನಂತರದಲ್ಲಿ ಸನ್ಮಾನಗಳ ಮೂಲಕ ಅವರನ್ನು ಗೌರವಿಸಲಾಯಿತು. ಬೆಂಗಳೂರು ಮಹಾನಗರ ಪಾಲಿಕೆ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೂಡ ಅದ್ದೂರಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿ.ಕೃ. ಗೋಕಾಕ, ಕೀರ್ತಿನಾಥ ಕುರ್ತಕೋಟಿ, ಬನ್ನಂಜೆ ಗೋವಿಂದಾಚಾರ್ಯ, ಆರ್.ಜಿ. ಕುಲಕರ್ಣಿ, ಕೆ.ಎಸ್. ಶರ್ಮಾ, ಜಿ.ವಿ. ಕುಲಕರ್ಣಿ ಮೊದಲಾದ ಪ್ರಮುಖ ಲೇಖಕರು “ನಾಕುತಂತಿ’ ಕುರಿತು ವಿಶೇಷ ಲೇಖನಗಳನ್ನು ಬರೆದರು.
ಈ ಸಂಭ್ರಮ ಎಲ್ಲರದು…
8-11-1974ರಂದು ದಿಲ್ಲಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ ಬೇಂದ್ರೆಯವರು ಹೇಳಿದರು: “ಒಂದಾನೊಂದು ಸತ್-ಕೃತಿಗೋ ಸದ್ಗುಣಕ್ಕೋ ಗೌರವದ ಮನ್ನಣೆ ದೊರೆತಾಗೆಲ್ಲಾ ಕೆಲವೊಂದು ಜನರು ಎದುರೆದ್ದು ಪ್ರತಿಭಟಿಸುತ್ತ ಆಪಾದಿಸುವುದುಂಟು; ಆಗ ಸಂಬಂಧಿಸಿದ ವ್ಯಕ್ತಿ ಆರೋಪಿಯೆನಿಸಿಕೊಂಡವನು, ಆತ್ಮವು ಅಮರವಿದೆಯೆಂದು ಉಲ್ಲೇಖೀಸುತ್ತಾ ಎದ್ದ ವಿವಾದವನ್ನು ಬಗೆಹರಿಸಬೇಕಾಗುತ್ತದೆ. ಅಂತಹದನ್ನೇನೂ ನಾನಿಂದು ಹೇಳಬಯಸುವುದಿಲ್ಲ. ಆದರೆ, ಒಳ್ಳೇ ಕಾವ್ಯವನ್ನು ಮೆಚ್ಚಿ ಸ್ವಾಗತಿಸುವ ಹೃದಯವೂ ಆತ್ಮವೂ ಇನ್ನೂ ಜೀವಂತವಿದೆ ಎಂಬ ಒಂದು ಮಾತನ್ನು ಮಾತ್ರ ಉಸುರದೆ ಇರಲಾರೆ.’ ಪಂಪ, ಕುಮಾರವ್ಯಾಸ ಕವಿಗಳ ತವರು ಎನಿಸಿಕೊಂಡಿರುವ “ಧಾರವಾಡ ಸೀಮೆಯವ ನಾನು’ ಎಂದು ತಮ್ಮ ಭಾಷಣದಲ್ಲಿ ಅವರು ತುಂಬಾ ಅಭಿಮಾನದಿಂದ ಹೇಳಿಕೊಂಡರು. ತಮಗಿಂತ 5 ವರ್ಷ ಮೊದಲು ಪ್ರಶಸ್ತಿ ಪಡೆದ ಕುವೆಂಪು ಅವರನ್ನು ಆತ್ಮೀಯವಾಗಿ ನೆನಪಿಸಿಕೊಂಡರು. ಈ ಪ್ರಶಸ್ತಿ ಪಡೆದ ಭಾರತೀಯ ಮೊದಲ ಹತ್ತು ಮಕ್ಕಳಲ್ಲಿ ತಾವೂ ಒಬ್ಬರಾಗಿದ್ದಕ್ಕೆ ಅತೀವ ಸಂತಸಪಟ್ಟರು. ಮನೆ ಮಾತು ಅಲ್ಲದ ಒಂದು ಭಾಷೆಯಲ್ಲಿ ಬರೆದು ಈ ಗೌರವ ಪಡೆದವರಲ್ಲಿ ನಾನೇ ಮೊದಲ ಕನ್ನಡಿಗ ಎಂಬ ಹೆಮ್ಮೆಯೂ ನನಗಿದೆ ಎಂದು ಸಂಭ್ರಮಿಸಿದರು. ತಮಗಿಂತಲೂ ಹೆಚ್ಚು ಸಂತಸಪಟ್ಟ ಕನ್ನಡ ಜನತೆಗೆ ಕೃತಜ್ಞತೆ ಸಲ್ಲಿಸಿದರು.
ಟೀಕಿಸುವವರೂ ಇದ್ದರು!:
ಬೇಂದ್ರೆಯವರಿಗೆ ದೊರಕಿದ ಪ್ರಶಸ್ತಿ ಕೆಲವರಿಗೆ ಸಮಾಧಾನ ಕೊಡಲಿಲ್ಲ ಎನ್ನುವುದು! ಟೀಕೆ, ಟಿಪ್ಪಣಿಗಳು ಆ ವೇಳೆಯಲ್ಲಿ ಸಾಕಷ್ಟು ಹರಿದಾಡಿದವು. ಕೆಲವರಂತೂ ಲೇಖನಗಳ ಮೂಲಕ ತಮ್ಮ ಅಸಮಾಧಾನ ತೋಡಿಕೊಂಡರು. “ನಾಕುತಂತಿ’ ಪ್ರಶಸ್ತಿಗೆ ಸಿಕ್ಕ ಮೊತ್ತ 50 ಸಾವಿರವಾಗಿತ್ತು. ಪ್ರಶಸ್ತಿಯ ಮೊತ್ತಕ್ಕೂ ಕೃತಿಯ ಹೆಸರಿನ ಅರ್ಥಕ್ಕೂ ಸಮೀಕರಣ ಮಾಡಿ “ಒಂದು ತಂತಿಗೆ ಹನ್ನೆರಡುವರೆ ಸಾವಿರ’ ಎಂದು ಬೆಲೆ ಕಟ್ಟಿದರು! ಬನ್ನಂಜೆ ಗೋವಿಂದಾಚಾರ್ಯರು ಬರೆಯುತ್ತಾರೆ : “ಪ್ರಶಸ್ತಿ ಬಂದಿದೆ ಎನ್ನುವುದಕ್ಕಾಗಿ ಬಹಳ ಜನ ಅದನ್ನು ಓದಿದರು. ಮರಳಿ ಮರಳಿ ಓದಿದರು. ಕೆಲವರು ಇದು ತಮಗೆ ಅರ್ಥವಾಗುವ ಮಾತಲ್ಲ ಎಂದು ತೆಪ್ಪಗೆ ಕುಳಿತರೆ, ಕೆಲವರು ಇದು ಕವಿತೆಯೇ ಅಲ್ಲ, ಬೇಂದ್ರೆಯವರ ವಯೋದೊಷದ ಪರಿಣಾಮ ಎಂದು ಕಟಕಿಯಾಡಿದರು.
-ಡಾ.ಹ.ವೆಂ. ಕಾಖಂಡಿಕಿ ಹಿರಿಯ ಸಾಹಿತಿ, ಧಾರವಾಡ