Advertisement

Belthangady: ರಸ್ತೆ ಶೋಚನೀಯ; ನಿರ್ವಹಣೆಯ ಕೊರತೆ; ರಸ್ತೆಯಲ್ಲಿ ಇಂಗು ಗುಂಡಿ ತರಹದ ಹೊಂಡ

12:40 PM Oct 18, 2024 | Team Udayavani |

ಬೆಳ್ತಂಗಡಿ: ತಾಲೂಕು ವ್ಯಾಪ್ತಿಯ ರಾಜ್ಯ, ರಾಷ್ಟ್ರೀಯ ಹೆದ್ದಾರಿ ಹದಗೆಟ್ಟು ಸಂಚಾರ ಕಷ್ಟವಾಗಿರುವುದರ ನಡುವೆ ಬೆಳ್ತಂಗಡಿ ಪಟ್ಟಣ ಪಂಚಾಯತ್‌ ವ್ಯಾಪ್ತಿಗೆ ಒಳಪಟ್ಟಂತೆ ನಗರ ರಸ್ತೆಗಳೂ ಅಲ್ಲಲ್ಲಿ ಹೊಂಡಗುಂಡಿಗಳಿಂದ ತುಂಬಿವೆ.

Advertisement

ಮುಖ್ಯ ರಸ್ತೆಯಿಂದ ಮೆಸ್ಕಾಂ ಇಲಾಖೆ ಪಕ್ಕದಿಂದ ಹುಣ್ಸೆಕಟ್ಟೆಯಾಗಿ ಗೇರು ಕಟ್ಟೆ ಸಂಕರ್ಪ ಸಾಧಿಸುವ ರಸ್ತೆಯಲ್ಲಿ ಹೊಂಡಗಳಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಕಳೆದ ಮಳೆಗಾಲದಲ್ಲಿ ಅಲ್ಪಸ್ವಲ್ಪ ಎದ್ದುಹೋಗಿದ್ದ ರಸ್ತೆಯಲ್ಲಿ ಈಗ ಇಂಗು ಗುಂಡಿ ಸ್ವರೂಪದ ಹೊಂಡಗಳಾಗಿವೆ. ಈ ರಸ್ತೆಯು ನಿರ್ವಹಣೆಯಿಲ್ಲದೆ ದ್ವಿಚಕ್ರ ಮತ್ತು ಘನ ವಾಹನ ಸಂಚಾರಕ್ಕೆ ಭಾರೀ ಸಮಸ್ಯೆ ಉಂಟುಮಾಡುತ್ತಿದೆ. ಜನರಿಗೆ ನಡೆದಾಡಲೂ ಕಷ್ಟದ ಸ್ಥಿತಿ ಇದೆ.

ತಾ|ಕೇಂದ್ರ ಸ್ಥಾನಕ್ಕೆ ಸಾರ್ವಜನಿಕರು ಕಚೇರಿ ಕೆಲಸಕ್ಕೆ, ದಿನ ನಿತ್ಯದ ವ್ಯವಹಾರಕ್ಕೆ ಈ ರಸ್ತೆಯನ್ನೇ ಅವಲಂಬಿಸಿದ್ದು, ಶಾಲಾ ಮಕ್ಕಳು, ಕೃಷಿಕರು, ದಿನಗೂಲಿ ನೌಕರರು, ಹೈನುಗಾರರಿಗೆ ಬಹಳ ಅಗತ್ಯದ ರಸ್ತೆ ಇದಾಗಿದೆ. ರಸ್ತೆಯ ಪಕ್ಕದಲ್ಲಿ ಕೆಲವೊಂದು ಕಡೆಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲಿಯೇ ಮಳೆ ನೀರು ಹರಿದು ಕೆಸರು ಮಣ್ಣು ರಸ್ತೆ ಸೇರಿದೆ.


ಪಟ್ಟಣ ಪಂಚಾಯತ್‌ ವ್ಯಾಪ್ತಿಗೆ ಒಳಪಟ್ಟ ಗುರುವಾಯನಕೆರೆಯಿಂದ ಲಾೖಲ ಸೇತುವೆ ವರೆಗಿನ ರಾಷ್ಟ್ರೀಯ ಹೆದ್ದಾರಿ ಸ್ಥಿತಿ ಅಂತು ಹೇಳ ತೀರದಂತಾಗಿದೆ. ಇದರ ಪರಿಣಾಮ ಪೇಟೆಯಲ್ಲಿ ನಿತ್ಯ ಸಂಚಾರ ದಟ್ಟಣೆ ಎದುರಾಗಿದೆ.

ಇನ್ನು ಪೇಟೆಯಿಂದ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ವಿವಿಧ ವಾರ್ಡ್‌ಗಳಿಗೆ ಸಂಪರ್ಕ ಕಲ್ಪಿಸುವ ಕೆಲವು ರಸ್ತೆಗಳು ಅಲ್ಲಲ್ಲಿ ಹದಗೆಟ್ಟು ಸಮಸ್ಯೆ ಎದುರಾಗಿದೆ. ಪ್ರತೀ ವರ್ಷ ಜಂಗಲ್‌ ಕಟ್ಟಿಂಗ್‌ ಹಾಗೂ ಹೂಳು ತೆರವಿಗೆ ಅನುದಾನ ಇರಿಸಲಾಗುತ್ತದೆ. ಆದರೆ ಹೂಳೆತ್ತುವ ಕೆಲಸ ಸರಿಯಾಗಿ ನಡೆಯುತ್ತಿಲ್ಲ ಎಂದು ಜನರು ದೂರುತ್ತಿದ್ದಾರೆ. ಪೇಟೆ ವ್ಯಾಪ್ತಿಯಲ್ಲಿ ರಸ್ತೆ ಹಾಳಾಗಿರುವ ಸಮಸ್ಯೆ ಒಂದು ಕಡೆಯಾದರೆ ಮೂರು ಮಾರ್ಗದ ಸಮೀಪ ಕೊಳಚೆ ನೀರಿನ ಸಮಸ್ಯೆಯೂ ಇದೆ.

Advertisement

ಹದಗೆಟ್ಟಿರುವ ರಸ್ತೆ ವಿಚಾರವಾಗಿ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯತ್‌ ಮುಖ್ಯಾಧಿ ಕಾರಿ ರಾಜೇಶ್‌ ತಿಳಿಸಿದ್ದಾರೆ.

ಪಟ್ಟಣದ ಒಳಗೆ ಮುಖ್ಯ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟ ರಸ್ತೆಯಾದ್ದರಿಂದ ಸಂಬಂಧಪಟ್ಟವರಿಗೆ ಮನವಿ ನೀಡಲಾಗುವುದು. ಅನುದಾನದ ಕೊರತೆಯಿದ್ದು ಪಟ್ಟಣದ ವ್ಯಾಪ್ತಿಯ ಹದಗೆಟ್ಟ ರಸ್ತೆ ದುರಸ್ತಿಗೆ ತಾತ್ಕಾಲಿಕ ಕ್ರಮ ವಹಿಸಲಾಗುವುದು.
-ಜಯಾನಂದ ಗೌಡ, ಅಧ್ಯಕ್ಷರು, ಪ.ಪಂ.

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next