ಬೆಳ್ತಂಗಡಿ: ರಾಜ್ಯ ರಾಜಕೀಯದಲ್ಲಿ ಚುನಾವಣೆ ಬಿಸಿ ತಾಪಮಾನದಂತೆ ದಿನೇ ದಿನೆ ಏರಿಕೆ ಕಾಣುತ್ತಿರುವಂತೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲೂ ಪಕ್ಷಗಳ ಮಧ್ಯೆ ಕೆಸರೆರಚಾಟದ ರಾಜಕೀಯ ಆರಂಭಗೊಂಡಿದೆ. ಪಕ್ಷಗಳಲ್ಲೂ ಟಿಕೆಟ್ ಆಕಾಂಕ್ಷಿಗಳ ಪ್ರಯತ್ನವೂ ಮುಂದು ವರಿದಿದೆ. ಬಿಜೆಪಿ ಯಲ್ಲಿ ಹಾಲಿ ಶಾಸಕ ಹರೀಶ್ ಪೂಂಜಾ ಅವರು ಮತ್ತೆ ಸ್ಪರ್ಧಿ ಸುವ ಸಾಧ್ಯತೆ ಇದೆ.
ಹಾಗೆಂದು ಪಕ್ಷದಲ್ಲಿ ಬೇರೆ ಆಕಾಂಕ್ಷಿಗಳಿಲ್ಲ ಎಂದಲ್ಲ, ಈ ಹಿಂದೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಆರ್.ಎಸ್.ಎಸ್. ಹಿನ್ನೆಲೆಯುಳ್ಳ ಸಂಪತ್ ಬಿ.ಸುವರ್ಣ ಅವರು ತಾವೂ ಆಕಾಂಕ್ಷಿ ಎಂದು ಹೇಳಿದ್ದಾರೆ. ಉಳಿದಂತೆ ಉದ್ಯಮಿ ಶಶಿಧರ್ ಶೆಟ್ಟಿ ಹೆಸರೂ ಕೇಳಿಬರುತ್ತಿದೆ. ಕಾಂಗ್ರೆಸ್ ಪಾಳಯದಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ, ಎರಡು ಬಾರಿ ಶಾಸಕರಾಗಿ, ಒಂದು ಬಾರಿಗೆ ಸಚಿವರಾಗಿದ್ದ ಗೌಡ ಸಮುದಾಯದ ಹಿರಿಯ ಕಾಂಗ್ರೆಸ್ ಮುಖಂಡ ಕೆ. ಗಂಗಾಧರ ಗೌಡ ಮತ್ತು ಮೂಲತಃ ಬೆಳ್ತಂಗಡಿಯವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದ ರಕ್ಷಿತ್ ಶಿವರಾಂ ಹೆಸರು ತೀವ್ರ ಚರ್ಚೆಯಲ್ಲಿದೆ. ಕಾಂಗ್ರೆಸ್ ನಲ್ಲಿ ವಲಸಿಗರಿಗೆ ಟಿಕೆಟ್ ನೀಡಬಾರದೆಂಬ ಕೂಗು ಒಂದೆಡೆ ಯಾದರೆ, ಯುವಕರಿಗೆ ಅವಕಾಶ ನೀಡಬೇಕು ಎಂಬ ಧ್ವನಿ ಮತ್ತೂಂದೆಡೆ ಕೇಳಿಬರುತ್ತಿದೆ. ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬುದೇ ಕುತೂಹಲ.
ಜೆಡಿಎಸ್‌ನಲ್ಲಿ ಈವರೆಗೆ ಬೆಳ್ತಂಗಡಿ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಗತಿ ಚರ್ಚೆಗೆ ಬಂದಿಲ್ಲ. ಬಹುತೇಕ ನಾಯಕರು ಬಿಜೆಪಿ, ಕಾಂಗ್ರೆಸ್ ಪಾಳಯದಲ್ಲಿ ಸಮ್ಮಿಳಿತಗೊಂಡಿದ್ದಾರೆ. ಈ ಮಧ್ಯೆ ಎಸ್.ಡಿ.ಪಿ.ಐ. ಈಗಾಗಲೇ ಅಕ್ಬರ್ ಬೆಳ್ತಂಗಡಿ ಯನ್ನು ಅಭ್ಯರ್ಥಿಯೆಂದು ಘೋಷಿಸಿದೆ. ಹಾಗೆಯೇ ತುಳುನಾಡ ಪಕ್ಷದ ಅಭ್ಯರ್ಥಿಯಾಗಿ ಶೈಲೇಶ್ ಆರ್.ಜೆ. ಸ್ಪರ್ಧೆಗೆ ಸಜ್ಜಾಗುತ್ತಿದ್ದಾರೆ. ಬೆಳ್ತಂಗಡಿಯಲ್ಲಿ ಪಕ್ಷಗಳಿಗೇನು ಕಮ್ಮಿ ಇಲ್ಲ ಎಂಬಂತೆ ಸರ್ವೋದಯ ಕರ್ನಾಟಕ ಪಕ್ಷವೂ ಆದಿತ್ಯ ನಾರಾಯಣ ಕೊಲ್ಲಾಜೆಯನ್ನು ಅಭ್ಯರ್ಥಿಯಾಗಿಸಿದೆ. ಕೆ.ಎಸ್.ಆರ್. ಪಕ್ಷವೂ ಅಲ್ಪಪ್ರಮಾಣದ ಪ್ರಚಾರದಲ್ಲಿ ತೊಡಗಿ ಅಶೋಕ್ ಭಟ್ ಅವರ ಹೆಸರನ್ನು ತೇಲಿಬಿಟ್ಟಿತ್ತು. ಆದರೆ ಅವರು ಪಕ್ಷದಿಂದ ನಿರ್ಗಮಿಸಿದ ಬಳಿಕ ಆ ಪಕ್ಷದ ಹುಮ್ಮಸ್ಸು ಕೊಂಚ ಕಡಿಮೆಯಾಗಿದೆ.
ಇನ್ನು ಸಿಪಿಐ(ಎಂ) ಪಕ್ಷವು ಕಾಂಗ್ರೆಸ್‌ನ ಅಭ್ಯರ್ಥಿ ಘೋಷಣೆ ಬಳಿಕ ತನ್ನ ಉಮೇದುವಾರಿಕೆ ಕುರಿತು ಪ್ರಕಟಿಸುವ ಸಾಧ್ಯತೆ ಇದೆ. ಕ್ಷೇತ್ರದಲ್ಲಿ ಒಟ್ಟು 2,22,144 ಮಂದಿ ಮತದಾರರಿದ್ದಾರೆ. ಕ್ಷೇತ್ರದಲ್ಲಿ ಏನಿದ್ದರೂ ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರಾನೇರ ಪೈಪೋಟಿ. ಉಳಿದವು ಈ ಎರಡೂ ಪಕ್ಷಗಳ ಮತವನ್ನು ಎಷ್ಟರಮಟ್ಟಿಗೆ ವಿಭಜಿಸ ಬಹುದೆಂಬುದೂ ದೊಡ್ಡ ಕುತೂಹಲ.
ಪ್ರಸಕ್ತ ಬಿಜೆಪಿ 44 ಗ್ರಾ.ಪಂ.ಗಳ ಮೇಲೆ ಹಿಡಿತ ಸಾಧಿಸಿದ್ದರೆ ಕಾಂಗ್ರೆಸ್ ಪಾರಮ್ಯದಲ್ಲಿ 4 ಗ್ರಾ.ಪಂ.ಗಳಿವೆ. ಬಿಜೆಪಿಯ ಹರೀಶ್ ಪೂಂಜ ಕಳೆದ ಬಾರಿ 22,974 ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿ 50,000 ಮತಗಳ ಅಂತರದ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಒಂದಾದರೂ ಗೌಡ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಗಂಗಾಧರ ಗೌಡ ಬಣ ಆಗ್ರಹಿಸುತ್ತಿದೆ.ಆದರೆ ಕಾಂಗ್ರೆಸ್‌ನಲ್ಲಿ ರಕ್ಷಿತ್ ಶಿವರಾಂಗೆ ಟಿಕೆಟ್ ನೀಡಿದರೆ ಜಾತಿವಾರು ಲೆಕ್ಕಾಚಾರ ಫಲ ನೀಡಬಹುದೇ? ಎಂಬ ಚರ್ಚೆಯೂ ಪಕ್ಷದ ಆಂತರಿಕ ವಲಯದಲ್ಲಿ ನಡೆಯುತ್ತಿವೆ. ಬಿಜೆಪಿ ತನ್ನ ಶಾಸಕರ ಕ್ಷೇತ್ರ ಅಭಿವೃದ್ಧಿಯನ್ನೇ ಪ್ರಚಾರಕ್ಕೆ ಬಳಸುತ್ತಿದೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದಿದ್ದು, ಮತದಾರರು ಅದನ್ನು ಮರೆಯುವುದಿಲ್ಲ ಎನ್ನುತ್ತಾರೆ ಕಾಂಗ್ರೆಸ್ಸಿಗರು.
*ಚೈತ್ರೇಶ್ ಇಳಂತಿಲ