Advertisement

ಬೆಳಗಾವಿ: ಕೋಟಿ ದಾಟಿದ ಯಲ್ಲಮ್ಮದೇವಿ ಭಕ್ತರ ಸಂಖ್ಯೆ

11:43 AM Dec 01, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಇತಿಹಾಸ ಪ್ರಸಿದ್ಧ ಸವದತ್ತಿ ರೇಣುಕಾ ಯಲ್ಲಮ್ಮದೇವಿ ಕ್ಷೇತ್ರ ಪ್ರಗತಿಯ ವಿಷಯದಲ್ಲಿ ಹೊಸ ಹೆಜ್ಜೆ ಇಡುತ್ತಿರುವಂತೆ ಭಕ್ತರ ಸಂಖ್ಯೆಯಲ್ಲೂ ಗಮನಾರ್ಹ ಮೈಲಿಗಲ್ಲು ಸ್ಥಾಪಿಸಿದೆ. ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವಂತೆ ಸಂಚಾರ ವ್ಯವಸ್ಥೆ, ಸೌಲಭ್ಯದಲ್ಲಿ ಹೊಸ ಬೇಡಿಕೆಗಳು ಹುಟ್ಟಿಕೊಂಡಿವೆ.

Advertisement

ಕಳೆದ ಕೆಲವು ವರ್ಷಗಳಿಂದ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆ ಕೋಟಿ ಸಂಖ್ಯೆ ದಾಟುತ್ತಿದ್ದಂತೆ ಇದಕ್ಕೆ ಪೂರಕವಾಗಿ ನೂತನ ರೈಲು ಮಾರ್ಗಕ್ಕೆ ಬೇಡಿಕೆ ಬಲವಾಗಿದೆ. ಮುಂದಿನ ವರ್ಷದ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಯ ಘೋಷಣೆ ಮತ್ತು ಅನುದಾನ ನಿಗದಿ ಮಾಡುವಂತೆ ರೈಲ್ವೆ ಸಚಿವರ ಮೇಲೆ ಒತ್ತಡ ಹೇರುವ ಪ್ರಕ್ರಿಯೆ ಸಹ ಆರಂಭವಾಗಿದೆ.

ಕಳೆದ ಹತ್ತು ವರ್ಷಗಳ ಚಿತ್ರಣ ಅವಲೋಕನ ಮಾಡಿದರೆ ಸವದತ್ತಿ ಯಲ್ಲಮ್ಮ ದೇವಿ ಕ್ಷೇತ್ರದ ಚಿತ್ರ ಸಾಕಷ್ಟು ಬದಲಾಗಿದೆ. ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ಹೊಸ ಗಾಳಿ ಬೀಸುತ್ತಲೇ ಇದೆ. ಸರ್ಕಾರಗಳು ಸಹ ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿವೆ.

ಪ್ರವಾಸೋದ್ಯಮ ದೃಷ್ಟಿಯಿಂದ ಇದನ್ನು ಅಭಿವೃದ್ಧಿಪಡಿಸಬೇಕು ಎಂಬ ಚಿಂತನೆ ಸರ್ಕಾರಕ್ಕೆ ಇದೆ. ಇದರ ಫಲವಾಗಿ ಸವದತ್ತಿ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಮಂಡಳಿಗಳು ರಚನೆಯಾಗಿವೆ. ವಿಶೇಷವೆಂದರೆ ಈ ದೇವಾಲಯವು ದಕ್ಷಿಣ ಭಾರತದಾದ್ಯಂತ ಅಸಂಖ್ಯಾತ ಭಕ್ತರನ್ನು ಹೊಂದಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಆಂಧ್ರ ಪ್ರದೇಶದಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ದೇವಾಲಯವಾಗಿದೆ. ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ದೂರದ ಊರುಗಳಿಂದ ಭಕ್ತರು ವಾಹನ, ಎತ್ತಿನಗಾಡಿ ಹಾಗೂ ಕಾಲ್ನಡಿಗೆ ಮೂಲಕ ಬರುತ್ತಾರೆ.

Advertisement

ಸಾಂಪ್ರದಾಯಿಕವಾಗಿ ಭಕ್ತರು ಒಂದು ಅಥವಾ ಎರಡು ದಿನಗಳ ಕಾಲ ಸ್ಥಳದಲ್ಲಿ ತಂಗಿ, ಎಡೆ ಮಾಡಿ ದೇವರಿಗೆ ಅರ್ಪಿಸುತ್ತಾರೆ. ವಿಶೇಷವಾಗಿ ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆಗಳಲ್ಲಿ ಯಲ್ಲಮ್ಮದೇವಿಯ ಸನ್ನಿಧಾನದಲ್ಲಿ ಜನಸಾಗರವನ್ನೇ ಕಾಣಬಹುದು. ಜಾತಿ, ಮತ, ಭಾಷೆ ಬೇಧ ಮರೆತು ಎಲ್ಲ ಭಕ್ತರು ಇಲ್ಲಿ ಮೇಳೈಸುತ್ತಾರೆ. ದೇವಿಗೆ ತಮ್ಮ ಹರಕೆ ಸಲ್ಲಿಸುತ್ತಾರೆ.

ದಾಖಲೆಯ ಭಕ್ತರ ಭೇಟಿ: ಕೊರೊನಾ ಕಾಲಘಟ್ಟದ ನಂತರ 2022ರಲ್ಲಿ ಯಲ್ಲಮ್ಮದೇವಿಯ ಕ್ಷೇತ್ರಕ್ಕೆ ಭೇಟಿ ನೀಡಿದ
ಭಕ್ತರ ಸಂಖ್ಯೆ ಕೋಟಿ ದಾಟುವ ಮೂಲಕ ದಾಖಲೆಯನ್ನೇ ಸೃಷ್ಟಿಸಿದೆ. 2017ರಿಂದ ಐದು ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಭಕ್ತರ ಸಂಖ್ಯೆ 50 ಲಕ್ಷ ತಲುಪಿರಲಿಲ್ಲ. 2021ರ ಕೊರೊನಾ ಅವಧಿಯಲ್ಲಿ ದೇವಸ್ಥಾನಗಳು ಸಂಪೂರ್ಣ ಮುಚ್ಚಿದ್ದರೂ ಈ ಅವಧಿಯಲ್ಲಿ 11 ಲಕ್ಷ ಭಕ್ತರು ಯಲ್ಲಮ್ಮದೇವಿಯ ಕ್ಷೇತ್ರಕ್ಕೆ ಬಂದು ದೇವಿಯ ದರ್ಶನ ಪಡೆದಿರುವದು ವಿಶೇಷ. 2022ರಲ್ಲಿ ಕ್ಷೇತ್ರದ ಮಟ್ಟಿಗೆ ಒಂದು ದಾಖಲೆ ಎನ್ನಬಹುದು. ಈ ಅವಧಿಯಲ್ಲಿ ಸುಮಾರು 1.16 ಕೋಟಿ ಜನರು ಕ್ಷೇತ್ರಕ್ಕೆ ಭೇಟಿ ನೀಡಿ
ರೇಣುಕಾಯಲ್ಲಮ್ಮ ದೇವಿಯ ದರ್ಶನ ಪಡೆದಿದ್ದಾರೆ.

ಅದರಂತೆ 2023ರಲ್ಲಿ ಅಗಸ್ಟ್‌ವರೆಗೆ 32 ಲಕ್ಷ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ವಿದೇಶಿ ಜನರು ಸಹ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದರಿಂದ ಪ್ರವಾಸೋದ್ಯಮ ದೃಷ್ಟಿಯಿಂದ ಇದು ಮಹತ್ವ ಪಡೆದುಕೊಂಡಿದೆ.

ಪ್ರತಿದಿನ 40 ಸಾವಿರ ಜನ: ಸಾಮಾನ್ಯವಾಗಿ ಹುಣ್ಣಿಮೆ ದಿನ, ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿರುತ್ತಿತ್ತು. ಈಗ ವಾರದ ಎಲ್ಲ ದಿನವೂ ಕನಿಷ್ಟ 50 ಸಾವಿರ ಸಂಖ್ಯೆ ತಲುಪಿದೆ. ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಒಂದು ಲಕ್ಷ ಜನರು ದೇವಿಯ ದರ್ಶನಕ್ಕೆ ಬಂದರೆ ಉಳಿದ ನಾಲ್ಕು ದಿನ ಕನಿಷ್ಟ 30ರಿಂದ 40 ಸಾವಿರ ಜನರು ಕ್ಷೇತ್ರಕ್ಕೆ ಬರುತ್ತಿದ್ದಾರೆ. ಇದಲ್ಲದೆ ಸಾಮಾನ್ಯ ಹುಣ್ಣಿಮೆ ದಿನಗಳಂದು 3ರಿಂದ 5 ಲಕ್ಷ ಭಕ್ತರು ಬರುತ್ತಿದ್ದಾರೆ. ಬನದ ಹುಣ್ಣಿಮೆ ದಿನ 10 ಲಕ್ಷ ಜನರು ಹಾಗೂ ಭಾರತ್‌ ಹುಣ್ಣಿಮೆ ದಿನದಂದು 15 ಲಕ್ಷ ಜನರು ಕ್ಷೇತ್ರಕ್ಕೆ ಬರುತ್ತಿದ್ದಾರೆ.

ಭಕ್ತರ ಆರಾಧ್ಯ ದೈವ ಕ್ಷೇತ್ರ ಸವದತ್ತಿ ಯಲ್ಲಮ್ಮ ಕ್ಷೇತ್ರವನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಪಡಿಸಬೇಕು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸಿ ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಸವದತ್ತಿ ಯಲ್ಲಮ್ಮದೇವಿ ಪ್ರವಾಸೋದ್ಯಮ ಮಂಡಳಿ ಸಹ ಸ್ಥಾಪಿಸಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು
ಕೈಗೊಂಡಿದೆ. ಇದು ಮುಂಬರುವ ದಿನಗಳಲ್ಲಿ ಸುಮಾರು ಎರಡು ಕೋಟಿ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುವ ವಿಶ್ವಾಸ ಮೂಡಿಸಿದೆ.

ವರ್ಷದಿಂದ ವರ್ಷಕ್ಕೆ ಯಲ್ಲಮ್ಮದೇವಿಯ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಮುಖ್ಯವಾಗಿ
ಸರ್ಕಾರದ ಶಕ್ತಿ ಯೋಜನೆ ಭಕ್ತರಿಗೆ ಬಹಳ ಅನುಕೂಲ ಕಲ್ಪಿಸಿದೆ. ಹೀಗಾಗಿ ವಾರದ ಎಲ್ಲ ದಿನವೂ ಸುಮಾರು 50ರಿಂದ 1 ಲಕ್ಷ ಜನರು ಕ್ಷೇತ್ರಕ್ಕೆ ಬಂದು ದರ್ಶನ ಪಡೆಯುತ್ತಿದ್ದಾರೆ. ಭಕ್ತರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.
ಮಹೇಶ, ಸವದತ್ತಿ ಯಲ್ಲಮ್ಮ ಅಭಿವೃದ್ಧಿ
ಪ್ರಾಧಿಕಾರದ ಕಾರ್ಯದರ್ಶಿ

*ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next