ಬೀಜಿಂಗ್: ಕೋವಿಡ್-19ನ ಉಗಮ ಸ್ಥಳವಾದ ಚೀನದಲ್ಲಿ ಇದೀಗ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆ, ಕೋವಿಡ್-19 ಚಿಕಿತ್ಸೆಗೆಂದು ನಿರ್ಮಿಸಿದ್ದ ವಿಶೇಷ ಆಸ್ಪತ್ರೆಗಳನ್ನು ಮುಚ್ಚಲು ಚೀನ ಸಿದ್ಧವಾಗಿದೆ.
ಸದ್ಯ ದೇಶದಲ್ಲಿ ಇತ್ತೀಚೆಗೆ ಆರು ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 40 ರೋಗಲಕ್ಷಣಗಳಿಲ್ಲದ ಪ್ರಕರಣಗಳು ವರದಿಯಾಗಿವೆ. ಈ ಎಲ್ಲಾ ಪ್ರಕರಣಗಳನ್ನು ತೆರವುಗೊಳಿಸಿದ ಅನಂತರ ಕೋವಿಡ್-19 ವಿಶೇಷ ಆಸ್ಪತ್ರೆಗಳನ್ನು ಮುಚ್ಚಲಿದ್ದೇವೆ ಎಂದು ಚೀನದ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಚೀನದ ಸೋಂಕಿನ ಮೂಲ ಕೇಂದ್ರವಾದ ವುಹಾನ್, ತಾತ್ಕಾಲಿಕವಾಗಿ ನಿರ್ಮಿಸಿದ್ದ 16 ಆಸ್ಪತ್ರೆಗಳನ್ನು ಮುಚ್ಚಿದೆ. ರವಿವಾರದಂದು ಕೊನೆಯ ರೋಗಿಯೊಬ್ಬನನ್ನು ಡಿಸಾcರ್ಜ್ ಮಾಡಿದ ಅನಂತರ ಆಸ್ಪತ್ರೆಯನ್ನು ಸಂಪೂರ್ಣವಾಗಿ ಬಂದ್‌ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
2003ರಲ್ಲಿ ಸಾರ್ಸ್ ರೋಗಿಗಳಿಗೆ ಚಿಕಿತ್ಸೆಗೆಂದು ಬಳಸಲಾಗಿದ್ದ ಬೀಜಿಂಗ್‌ನ ಕ್ಸಿಯೋಟಾಂಗ್‌ಶಾನ್ ಆಸ್ಪತ್ರೆಯನ್ನು ಇದೀಗ ಕೋವಿಡ್-19 ಚಿಕಿತ್ಸೆಗೆ ಬಳಸಲಾಗಿದ್ದು, ಮುಂದಿನ ದಿನಗಳಲ್ಲಿ ಕೊರೊನಾ ಪ್ರಕರಣಗಳನ್ನು ತೆರವುಗೊಳಿಸಿ ಈ ವಿಶೇಷ ಆಸ್ಪತ್ರೆಗಳನ್ನೂ ಮುಚ್ಚಲಾಗುವುದು ಎಂದು ಚೀನದ ಮಾಧ್ಯಮಗಳು ವರದಿ ಮಾಡಿವೆ.
ಚೀನದಲ್ಲಿ ಈಗ ಕೋವಿಡ್ ಪ್ರಕರಣಗಳು ಕಡಿಮೆಯಾಗಿದ್ದು, ಬಹುತೇಕ ಪ್ರದೇಶಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಸುಮಾರು 82 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿತ್ತು. ಆ ಪೈಕಿ 4, 633 ಮಂದಿ ಸಾವಿಗೀಡಾಗಿದ್ದರು. ಪ್ರಸ್ತುತ 600 ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಬಹುತೇಕ ಮಂದಿ ಆಪಾಯದ ಸ್ಥಿತಿಯಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಹೊಸ ಸೋಂಕು ಪ್ರಕರಣಗಳೂ ಕಡಿಮೆಯಾಗಿವೆ.