Advertisement

ದಿಢೀರ್‌ ಸಿರಿವಂತಿಕೆ ಆಸೆಗೆ ಬಿದ್ದವರೀಗ ಕಂಬಿ ಹಿಂದೆ

12:06 PM Oct 24, 2017 | |

ಬೆಂಗಳೂರು: ದಿಢೀರ್‌ ಕೋಟ್ಯಾಧೀಶರಾಗುವ ಆಸೆಗೆಬಿದ್ದು, ಕೆಲಸ ಮಾಡುತ್ತಿದ್ದ ಬ್ಯಾಂಕ್‌ಗೆ 12 ಕೋಟಿ ರೂ. ವಂಚಿಸಿ, ಐಷಾರಾಮಿ ಜೀವನ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಾರತ್‌ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Advertisement

ಮಾರುತಿ (22) ಮತ್ತು ಸುರೇಶ್‌ಬಾಬು (28) ಬಂಧಿತರು. ಆರೋಪಿಗಳು ಮೂರು ವರ್ಷಗಳಿಂದ ಮಾರತ್‌ಹಳ್ಳಿಯ ಜೆ.ಪಿ.ಮೋರ್ಗನ್‌ ಬ್ಯಾಂಕ್‌ನ ಹಣಕಾಸು ವಿಭಾಗದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದು, ವಿದೇಶಿ ಗ್ರಾಹಕರೊಬ್ಬರಿಗೆ ವರ್ಗವಾಗಬೇಕಿದ್ದ 12.15 ಕೋಟಿ ರೂ.ಗಳನ್ನು ತಮ್ಮದೇ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು.

ಪ್ರಸ್ತುತ ಆರೋಪಿಗಳಿಂದ 31.50 ಲಕ್ಷ ರೂ. ನಗದು, 470 ಗ್ರಾಂ ಚಿನ್ನಾಭರಣ, 4 ಕೆ.ಜಿ. ಬೆಳ್ಳಿ ಹಾಗೂ ವಂಚಿಸಿದ ಹಣದಿಂದ ದೊಡ್ಡಬಳ್ಳಾಪುರದ ಬಳಿ ಖರೀದಿಸಿದ್ದ 3 ಎಕರೆ ಜಮೀನು, ವಾಣಿಜ್ಯ ಸಂಕೀರ್ಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ಖಾತೆಯಲ್ಲಿದ್ದ 8 ಕೋಟಿ ರೂ. ಸಹ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಿದೇಶಿ ಕಂಪನಿಗಳ ಹಣದ ವ್ಯವಹಾರ ನಿರ್ವಹಿಸುವ ಜಿ.ಪಿ.ಮೋರ್ಗನ್‌ ಬ್ಯಾಂಕ್‌ನಲ್ಲಿ ನಿತ್ಯ ನೂರಾರು ಕೋಟಿ ರೂ. ವರ್ಗಾವಣೆಯಾಗುತ್ತದೆ.

ಹಣಕಾಸು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು ಉತ್ತಮ ಕೆಲಸದ ಮೂಲಕ ಎಲ್ಲರ ವಿಶ್ವಾಸಗಳಿಸಿದ್ದರು. ಈ ನಡುವೆ ಹಣ ದೋಚಲು ಸಂಚು ರೂಪಿಸಿದ ಲೆಕ್ಕಾಧಿಕಾರಿ ಮಾರುತಿ, ಸ್ನೇಹಿತ ಸುರೇಶ್‌ಬಾಬುಗೂ ವಿಷಯ ತಿಳಿಸಿದ್ದ. ನೂರಾರು ಕೋಟಿ ವಹಿವಾಟಿನಲ್ಲಿ ಹತ್ತಾರು ಕೋಟಿ ಎಗರಿಸಿದರೆ ಯಾರಿಗೂ ತಿಳಿಯುವುದಿಲ್ಲ ಎಂಬುದು ಇಬ್ಬರ ಆಲೋಚನೆಯಾಗಿತ್ತು.

Advertisement

ನಿತ್ಯ ಬ್ಯಾಂಕ್‌ನಿಂದ ವರ್ಗಾವಣೆಯಾಗುವ ಹಣದ ಕುರಿತು ಇಚಿಂಚೂ ಅರಿತಿದ್ದ ಮಾರುತಿ, ಕೃತ್ಯಕ್ಕೂ 15 ದಿನ ಮೊದಲು ಸುರೇಶ್‌ಬಾಬು ಹೆಸರಿನಲ್ಲಿ ಆಕ್ಸಿಸ್‌ ಬ್ಯಾಂಕ್‌ನಲ್ಲಿ ಖಾತೆ ತೆರೆದು, ಈ ಖಾತೆಗೆ ಆ.24ರಂದು 12.15 ಕೋಟಿ ರೂ. ವರ್ಗಾವಣೆ ಮಾಡಿದ್ದ. ಬಳಿಕ 15 ದಿನಗಳ ಕಾಲ ಕೆಲಸ ಮಾಡಿದ ಇಬ್ಬರೂ, ರಾಜೀನಾಮೆ ನೀಡಿದ್ದರು.

ಕೆಲ ದಿನಗಳ ಬಳಿಕ ಅಮೆರಿಕ ಮೂಲದ ಕಂಪನಿ ಹಣ ವರ್ಗಾವಣೆ ಮಾಡುವಂತೆ ಈ-ಮೇಲ್‌ ಮೂಲಕ ಬ್ಯಾಂಕ್‌ಗೆ ಸಂದೇಶ ಕಳುಹಿಸಿತ್ತು. ಇದರಿಂದ ಗಾಬರಿಗೊಂಡ ಬ್ಯಾಂಕ್‌ನ ಎಂಡಿ, ಕೂಡಲೆ ಮೂರು ತಿಂಗಳ ಬ್ಯಾಂಕ್‌ ವಿವರಗಳನ್ನು ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಅಷ್ಟರಲ್ಲಿ ಆರೋಪಿಗಳ ಪೈಕಿ ಮಾರುತಿ ಚೆನ್ನೈನಲ್ಲಿ, ಸುರೇಶ್‌ ಬಾಬು ಕೋಲಾರದ ಮುಳಬಾಗಿಲಿನಲ್ಲಿ ತಲೆಮರೆಸಿಕೊಂಡಿದ್ದು, ತಮ್ಮ ಮೊಬೈಲ್‌ ಮತ್ತು ಸಿಮ್‌ಕಾರ್ಡ್‌ಗಳನ್ನು ಬದಲಿಸಿಕೊಂಡಿದ್ದರು. ಈ ಸಂಬಂಧ ಮಾರತ್‌ಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬಲೆಗೆ ಬಿದ್ದ ಸುರೇಶ್‌: ಪ್ರಕರಣದ ತನಿಖೆ ಆರಂಭಿಸಿದ ಮಾರತ್‌ಹಳ್ಳಿ ಪೊಲೀಸರು, ಸುರೇಶ್‌ ಬಾಬು ಮೊದಲು ಬಳಸುತ್ತಿದ್ದ ಮೊಬೈಲ್‌ ನಂಬರ್‌ನಿಂದ ಈತನ ಮಾವನ ನಂಬರ್‌ ಪತ್ತೆ ಹಚ್ಚಿದರು. ಬಳಿಕ ಪೊಲೀಸ್‌ ಸಿಬ್ಬಂದಿಯೊಬ್ಬರು ತೆಲುಗು ಭಾಷೆಯಲ್ಲಿ ಪರಿಚಯಸ್ಥರಂತೆ ಇವರೊಂದಿಗೆ ಮಾತನಾಡಿ ಸುರೇಶ್‌ಬಾಬುನ ಹೊಸ ನಂಬರ್‌ ಪಡೆದುಕೊಂಡಿದ್ದಾರೆ.

ನಂತರ ಮುಳಬಾಗಲಿನಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಈತನ ಮಾಹಿತಿ ಮೇರೆಗೆ ಚೆನ್ನೈನಲ್ಲಿ ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ಮಾರುತಿ ಬಂಧನಕ್ಕೆ ಬಲೆಬೀಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅವನಿಗೆ ಬಂಧನದ ಸುಳಿವು ಸಿಕ್ಕಿತ್ತೇ?: ಇತ್ತ ಮಾರುತಿಯ ಬಂಧನಕ್ಕೆ ಬಲೆ ಎಣಿದ ಪೊಲೀಸರು, ಸುರೇಶ್‌ಬಾಬು ಮೂಲಕವೇ ಮಾರುತಿಗೆ ಕರೆ ಮಾಡಿಸಿ, “ಕೃತ್ಯ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಕೆಲ ದಿನಗಳ ಕಾಲ ನಿನ್ನೊಂದಿಗೆ ಇದ್ದು ನಂತರ ಬೇರೆಡೆ ಹೋಗುತ್ತೇನೆ’ ಎಂದು ಹೇಳಿಸಿದ್ದರು. ಇದಕ್ಕೆ ಒಪ್ಪಿದ ಮಾರುತಿ, ಚೆನ್ನೈಗೆ ರೈಲಿನಲ್ಲಿ ಬರುವಂತೆ ಸೂಚಿಸಿದ್ದ.

ಆದರೆ, ಪೊಲೀಸರು ಬಸ್‌ನಲ್ಲಿ ಬರುತ್ತೇನೆ ಎಂದು ಹೇಳುವಂತೆ ಸೂಚಿಸಿದ್ದರು. ಆದರೆ ತಡರಾತ್ರಿ 1 ಗಂಟೆ ಸುಮಾರಿಗೆ ಅನುಮಾನದಿಂದಲೇ ಕರೆ ಮಾಡಿದ್ದ ಮಾರುತಿ, ಬಸ್‌ ಟಿಕೆಟ್‌ ದರ ಎಷ್ಟಿದೆ ಎಂದು ವಿಚಾರಿಸಿದ್ದು, 470 ರೂ. ಎಂದು ಸುರೇಶ್‌ ತಿಳಿಸಿದ್ದ. ಆದರೆ, ಪೊಲೀಸರು ಸುರೇಶ್‌ಬಾಬುನನ್ನು ಪೊಲೀಸ್‌ ಜೀಪಿನಲ್ಲಿ ಕರೆದೊಯ್ಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಕಡೇ ಕ್ಷಣದಲ್ಲೂ ಅನುಮಾನ: ಬೆಳಗ್ಗೆ 6.30ರ ಸುಮಾರಿಗೆ ಮಾರುತಿ ಸೂಚನೆಯಂತೆ ಚೆನ್ನೈ ಸೆಂಟ್ರಲ್‌ ಬಳಿ ಇಡೀ ತಂಡ ಹೋಗಿತ್ತು. ಈ ವೇಳೆ ಸ್ವತಃ ಮಾರುತಿಯೇ ಸುರೇಶ್‌ಬಾಬುಗೆ ಕರೆ ಮಾಡಿ ಮರೀನಾ ಬೀಚ್‌ ಬಳಿ ಬರುವಂತೆ ಹೇಳಿದ್ದಾನೆ.

ಅಷ್ಟೇ ಅಲ್ಲದೇ, ಇಲ್ಲಿಯೂ ಅನುಮಾನ ವ್ಯಕ್ತಪಡಿಸಿದ ಮಾರುತಿ, ಆಟೋದಲ್ಲಿ ಬರುವಂತೆ ಸಲಹೆ ನೀಡಿ, ಆಟೋ ಚಾಲಕನಿಗೆ ಫೋನ್‌ ನೀಡುವಂತೆ ಹೇಳಿದ್ದ. ಈ ವೇಳೆ ತನಿಖಾಧಿಕಾರಿಯೊಬ್ಬರು ತಮಿಳಿನಲ್ಲಿ ಮಾತನಾಡಿ ಆರೋಪಿ ಇರುವ ಸ್ಥಳ ಖಚಿತಪಡಿಸಿಕೊಂಡಿದ್ದರು. ಕೊನೆಗೆ ಮರೀನಾ ಬೀಚ್‌ ಬಳಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಹಾಯ್‌ ಡೂಡ್‌!: ಆರೋಪಿಗಳಿಬ್ಬರು ಫೋನ್‌ನಲ್ಲಿ ಸಂಭಾಷಣೆ ನಡೆಸುವಾಗ, ಮಾತಿನ ಮಧ್ಯೆ “ಡೂಡ್‌’ ಎಂಬ ಪದವನ್ನು ಪರಸ್ಪರ ಪದೇ ಪದೆ ಬಳಸುತ್ತಿದ್ದರು. ಅಲ್ಲದೆ, ಡೂಡ್‌ ಎಂಬುದನ್ನೇ ಕೋಡ್‌ ವರ್ಲ್ಡ್ ಆಗಿ ಬಳಸಿಕೊಳ್ಳುತ್ತಿದ್ದರು. ಇದನ್ನು ಅರಿತ ತನಿಖಾ ತಂಡದ ಅಧಿಕಾರಿಗಳು, ಸುರೇಶ್‌ಬಾಬು ಮೂಲಕ ಅವರದೇ ಧಾಟಿಯಲ್ಲಿ ಮಾತನಾಡಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ನಕಲಿ ಶೈಕ್ಷಣಿಕ ದಾಖಲೆ ಕೊಟ್ಟಿದ್ದ ಮಾರತಿ!: ಕೇವಲ 9ನೇ ತರಗತಿವರಗೆ ವ್ಯಾಸಂಗ ಮಾಡಿರುವ ಮಾರುತಿ, ನೌಕರಿ ಪಡೆಯಲು ನಕಲಿ ಶೈಕ್ಷಣಿಕ ದಾಖಲೆಗಳನ್ನು ಸಲ್ಲಿಸಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ತನ್ನ ದೂರದ ಸಂಬಂಧಿ ರಾಮುಚಂದಪ್ಪ ಎಂಬುವರು ಪಡೆದಿದ್ದ ಪದವಿ ಪತ್ರಗಳನ್ನು ನಕಲಿ ಮಾಡಿಕೊಂಡು ಬ್ಯಾಂಕ್‌ಗೆ ಸಲ್ಲಿಸಿ, ನೌಕರಿ ಪಡೆದಿದ್ದ. ಬೆಂಗಳೂರಿಗೆ ಬಂದ ಆರಂಭದಲ್ಲಿ ಈತ ಡಾಟಾ ಎಂಟ್ರಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next