Advertisement
ಕಾವೇರಿ ನದಿಯ ವಿಷಯವಾಗಿ ಕನ್ನಡ ಮತ್ತು ಕರ್ನಾಟಕದ ಕುರಿತು ಅವಹೇಳನಕಾರಿಯಾಗಿ ಮಾತಾಡಿರುವ ತಮಿಳು ನಟ ಸತ್ಯರಾಜ್ ಅವರು ಕನ್ನಡಿಗರ ಕ್ಷಮೆ ಕೇಳದಿದ್ದರೆ, ಅವರು ಅಭಿನಯಿಸಿರುವ “ಬಾಹುಬಲಿ 2′ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬುಧವಾರವಷ್ಟೇ ತಿಳಿಸಿದ್ದರು.
“ಸತ್ಯರಾಜ್ ಅವರ ಕೆಲವು ಮಾತುಗಳಿಂದ ಕನ್ನಡಿಗರಿಗೆ ನೋವಾಗಿದೆ ಎಂಬ ಬೇಸರ ನಮಗೂ ಇದೆ. “ಬಾಹುಬಲಿ’ ಚಿತ್ರಕ್ಕೂ ಸತ್ಯರಾಜ್ ಮಾತುಗಳಿಗೂ ಯಾವ ಸಂಬಂಧವೂ ಇಲ್ಲ. ಈ ಚಿತ್ರವನ್ನು ನಿರ್ಮಾಣ ಮಾಡಿದವರು ಅವರಲ್ಲ. ಈ ಚಿತ್ರಕ್ಕಾಗಿ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮುಂತಾದ ಯಾವ ವಿಭಾಗದಲ್ಲೂ ಅವರು ಕೆಲಸ ಮಾಡಿರಲಿಲ್ಲ. ಅವರು ಒಂದು ಪಾತ್ರದಲ್ಲಿ ನಟಿಸಿದ್ದಾರಷ್ಟೇ. ಅದಕ್ಕೆ ಸಂಭಾವನೆಯನ್ನು ಪಡೆದಿದ್ದಾರೆ. ಸತ್ಯರಾಜ್ ಅಭಿಪ್ರಾಯ ಏನೇ ಇದ್ದರೂ ಅದು ವೈಯಕ್ತಿಕವೇ ಹೊರತು ಚಿತ್ರತಂಡದಲ್ಲ. ಓರ್ವ ನಟನ ವೈಯಕ್ತಿಕ ಅಭಿಪ್ರಾಯದಿಂದಾಗಿ ಆತ ನಟಿಸಿರುವ ಒಂದು ಚಿತ್ರಕ್ಕೆ ಅಡ್ಡಿ ಉಂಟಾಗುವುದು ಸರಿಯಲ್ಲ’ ಎಂದು ರಾಜಮೌಳಿ ಹೇಳಿದ್ದಾರೆ.
Related Articles
ಈ ವಿಚಾರದ ಕುರಿತು ಸತ್ಯರಾಜ್ ಅವರಿಗೆ ಫೋನ್ ಮಾಡಿ ಪರಿಸ್ಥಿತಿಯನ್ನು ತಿಳಿಸಿದ್ದಾಗಿ ಹೇಳುವ ರಾಜಮೌಳಿ , “ಅದಕ್ಕೂ ಮೀರಿದ ಶಕ್ತಿ ನಮಗಿಲ್ಲ. ಒಂಭತ್ತು ವರ್ಷಗಳ ಹಿಂದೆ ಸತ್ಯರಾಜ್ ಅವರು ಈ ರೀತಿ ಮಾತನಾಡಿದ್ದಾರೆ. ಆ ನಂತರ ಅವರು ನಟಿಸಿರುವ, ನಿರ್ಮಾಣ ಮಾಡಿರುವ ಹಲವು ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆ ಆಗಿವೆ. “ಬಾಹುಬಲಿ’ ಸಹ ಬಿಡುಗಡೆ ಆಗಿದೆ. ಅವುಗಳನ್ನು ಪ್ರೋತ್ಸಾಹಿಸಿದ್ದ ಹಾಗೆಯೇ “ಬಾಹುಬಲಿ – 2′ ಚಿತ್ರವನ್ನು ಸಹ ಪ್ರೀತಿಯಿಂದ ನೋಡಬೇಕಾಗಿ ನಮ್ಮ ವಿನಂತಿ. ಈ ಚಿತ್ರದ ಬಿಡುಗಡೆಯನ್ನು ನಿಲ್ಲಿಸುವುದರಿಂದ ಸತ್ಯರಾಜ್ ಅವರಿಗೆ ಆಗುವ ಕಷ್ಟ ನಷ್ಟ ಏನೂ ಇಲ್ಲ. ಐದು ವರ್ಷಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರು, ಹಂಚಿಕೆದಾರರು ಮತ್ತು ಪ್ರೇಕ್ಷಕರ ಕುತೂಹಲಕ್ಕೆ ತಣ್ಣೀರೆರಚಿದಂತಾಗುತ್ತದೆ’ ಎಂದು ಅವರು ಹೇಳಿದ್ದಾರೆ. ಸತ್ಯರಾಜ್ ಅವರ ಮೇಲಿನ ಕೋಪವನ್ನು “ಬಾಹುಬಲಿ 2′ ಮೇಲೆ ತೋರಿಸಬಾರದೆಂದು ಎಂದು ವಿನಂತಿಸಿಕೊಳ್ಳುವ ಅವರು, ಕನ್ನಡಿಗರು “ಬಾಹುಬಲಿ – 2′ ಚಿತ್ರವನ್ನು ಪ್ರೋತ್ಸಾಹಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.
Advertisement