Advertisement

ಬ್ಯೂಟಿ ಸ್ಲೀಪ್‌

06:00 AM Sep 19, 2018 | |

ಸೂರನ್ನೇ ದಿಟ್ಟಿಸುತ್ತಾ ಶವಾಸನದಂತೆ ಮಲಗುವವರು, ಮುಖಕ್ಕೆ ಮಂಡಿ ತಾಗಿಸುವಷ್ಟು ದೇಹ ಬಾಗಿಸುವವರು, ದಿಂಬನ್ನೇ ಆಸ್ತಿಯಂತೆ ಅಪ್ಪುವವರು, ಟೆಡ್ಡಿ ಬೇರ್‌ ಇಲ್ಲದೆ ನಿದ್ದೆಯೇ ಬಾರದವರು, ಹೊಟ್ಟೆ ಕೆಳಗೆ ಮಾಡಿ, ಮುಸುಕನ್ನು ಮುಖದ ತುಂಬಾ ಹೊದ್ದು ಮಲಗುವವರು…ಹೀಗೆ, ರಾತ್ರಿ ನಿದ್ದೆ ಮಾಡುವಾಗ ಒಬ್ಬೊಬ್ಬರದ್ದು ಒಂದೊಂದು ಆಸನ. ದೇಹ-ಮನಸ್ಸಿಗೆ ಎಂಟು ಗಂಟೆಯ ನಿದ್ದೆ ಎಷ್ಟು ಮುಖ್ಯವೋ, ಮಲಗುವ ಭಂಗಿಯೂ ಅಷ್ಟೇ ಮುಖ್ಯ ಅನ್ನುತ್ತಾರೆ ವೈದ್ಯರು. ಮಲಗುವ ರೀತಿಯಲ್ಲಿ ವ್ಯತ್ಯಾಸವಾದರೂ ಚರ್ಮದ ಸೌಂದರ್ಯಕ್ಕೆ ಧಕ್ಕೆಯಾಗುತ್ತದಂತೆ! 

Advertisement

1. ದಿಂಬಿಗೆ ಮುಖ ತಾಗಿಸಿ ಮಲಗುವುದು
ಕೆಲವರು ದಿಂಬನ್ನು ಅಪ್ಪಿಕೊಂಡು ಅಥವಾ ದಿಂಬಿಗೆ ಮುಖ ತಾಗಿಸಿ ಮಲಗುತ್ತಾರೆ. ಇದರಿಂದ ದಿಂಬಿನಲ್ಲಿರುವ ಧೂಳು, ಬ್ಯಾಕ್ಟೀರಿಯಾ ಮುಖದ ಚರ್ಮವನ್ನು ಹಾಳು ಮಾಡಬಹುದು. ರಾತ್ರಿ ಮುಖಕ್ಕೆ ಹಚ್ಚಿದ ಕ್ರೀಂ, ಪ್ರತಿರಾತ್ರಿಯೂ ದಿಂಬಿಗೆ ತಾಗಿರುತ್ತದೆ. ಅದು ಮುಖಕ್ಕೆ ತಾಗಿ ಅಲರ್ಜಿಯನ್ನುಂಟು ಮಾಡುತ್ತದೆ. ಹಾಗಾಗಿ, ಈ ರೀತಿ ಮಲಗುವವವರು ವಾರಕ್ಕೊಮ್ಮೆಯಾದರೂ ದಿಂಬಿನ ಕವರ್‌ಅನ್ನು ಸ್ವಚ್ಛಗೊಳಿಸಬೇಕು.

2. ಹೊಟ್ಟೆ ಅಡಿ ಮಲಗುವುದು
ರಾತ್ರಿ ಮಲಗಿದಾಗ ನಮ್ಮ ಮುಖದ ಚರ್ಮ ಕೂಡ ರೆಸ್ಟ್‌ ಮಾಡುತ್ತದೆ. ಆದರೆ, ಹೊಟ್ಟೆ ಅಡಿ ಮಾಡಿ, ಮುಖವನ್ನು ಹಾಸಿಗೆ/ ದಿಂಬಿಗೆ ಒತ್ತಿ ಮಲಗುವುದರಿಂದ ಚರ್ಮದ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಮುಖದ ಮೇಲೆ ಒತ್ತಡ ಬೀಳುವುದರಿಂದ ಕಣ್ಣು ಊದಿಕೊಳ್ಳುತ್ತದೆ. ಏಳೆಂಟು ಗಂಟೆ ಹಾಗೆ ಮಲಗುವುದರಿಂದ ಚರ್ಮದ ಮೇಲೆ ಗೆರೆಗಳು ಮೂಡುತ್ತವೆ. 

3. ಒಂದು ಬದಿಗೆ ಮುಖ ಹಾಕಿ ಮಲಗುವುದು
 ಒಂದೇ ಬದಿಗೆ ತಿರುಗಿ ಮಲಗುವುದರಿಂದ, ಶರೀರದ ಒಂದು ಭಾಗದ ಮೇಲೆ ಅತಿಯಾದ ಒತ್ತಡ ಬೀಳುತ್ತದೆ. ಪರಿಣಾಮ, ಒಂದು ಬದಿಯ ಕೆನ್ನೆಯ ಮೂಳೆ ಹಾಗೂ ಚರ್ಮದ ಮೇಲೆ ಒತ್ತಡ ಹೇರಿ, ನೆರಿಗೆ ಮೂಡಿಸುತ್ತದೆ. 

ಅಂಗಾತ ಮಲಗಿ
ಬೆನ್ನನ್ನು ಹಾಸಿಗೆಗೆ ತಾಗಿಸಿ, ಅಂಗಾತ ಮಲಗುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಯಾಕೆಂದರೆ, ಈ ಭಂಗಿಯಲ್ಲಿ ಮುಖ, ಹಾಸಿಗೆ ಅಥವಾ ದಿಂಬಿಗೆ ತಾಗುವುದಿಲ್ಲ. ದಿಂಬಿಗೆ ಒತ್ತಿ ಮುಖದ ಮೇಲೆ ಗೆರೆ ಮೂಡುವ, ಹಾಸಿಗೆಯ ಧೂಳು ಮುಖಕ್ಕೆ ತಾಗಿ ಮೊಡವೆಯಾಗುವ ಅಪಾಯ ಕಡಿಮೆ. ದೇಹವನ್ನು ಒಂದು ಕಡೆಗೆ ವಾಲಿಸಿ ಅಥವಾ ಹೊಟ್ಟೆಯನ್ನು ಹಾಸಿಗೆಗೊತ್ತಿ ಮಲಗುವ ಭಂಗಿಯಲ್ಲಾಗುವಂತೆ ಇಲ್ಲಿ ಕಣ್ಣಿನ ಮೇಲೆ ಒತ್ತಡ ಕೂಡ ಬೀಳುವುದಿಲ್ಲ. 

Advertisement
Advertisement

Udayavani is now on Telegram. Click here to join our channel and stay updated with the latest news.

Next