Advertisement
ಇತ್ತೀಚೆಗಷ್ಟೇ ಹವಾಮಾನ ಇಲಾಖೆಯೂ ಕರ್ನಾಟಕದಲ್ಲಿ ಭಾರೀ ಪ್ರಮಾಣದ ಬಿಸಿಲ ಬೇಗೆ ಕಾಡಲಿದೆ ಎಂದು ಹೇಳಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ವಾರಗಳ ಕಾಲ ಬಿಸಿಗಾಳಿಯ ಪರಿಣಾಮಗಳು ಹೆಚ್ಚಾಗಬಹುದು ಎಂದಿದೆ. ಗರಿಷ್ಠ ತಾಪಮಾನವೂ 38ರಿಂದ 39 ಡಿಗ್ರಿ ಸೆಲ್ಸಿಯಸ್ ವರೆಗೆ ಮುಟ್ಟಬಹುದು ಎಂದು ಎಚ್ಚರಿಕೆ ನೀಡಿದೆ.
Related Articles
Advertisement
ಬೇಸಗೆ ಕಾಲದಲ್ಲಿ ಜನತೆ ನಿರ್ಜಲೀಕರಣದಿಂದಾಗಿ ಬಳಲುತ್ತಾರೆ. ಏಕೆಂದರೆ ಮನುಷ್ಯರ ದೇಹಕ್ಕೆ ಉಷ್ಣಾಂಶ ಸಹಿಸಿಕೊಳ್ಳುವುದು ತುಂಬಾ ಕಷ್ಟದ ವಿಚಾರ. ಅಲ್ಲದೆ ದೇಹದಲ್ಲಿನ ನೀರಿನ ಅಂಶವೆಲ್ಲವೂ ಹೆಚ್ಚಿನ ಉಷ್ಣಾಂಶದಿಂದಾಗಿ ಹೀರಿಕೊಳ್ಳುವುದರಿಂದ ಸುಸ್ತು ಹೆಚ್ಚಾಗುತ್ತದೆ.
ಇದರ ಜತೆಗೆ ಡೆಂಗ್ಯೂ, ಮಲೇರಿಯಾ, ಕೊರೊನಾದಂಥ ರೋಗಗಳ ಕಾಟವೂ ಈ ಸಂದರ್ಭದಲ್ಲಿ ಹೆಚ್ಚು. ಅಂದರೆ ಡೆಂಗ್ಯೂ ಮತ್ತು ಮಲೇರಿಯಾ ಬದಲಾದ ವಾತಾವರಣಕ್ಕೆ ತಕ್ಕಂತೆ ಕಾಣಿಸಿಕೊಳ್ಳುತ್ತವೆ. ಜತೆಗೆ ದೇಶಾದ್ಯಂತ ಕೊರೊನಾ ಕೂಡ ಜಾಸ್ತಿಯಾಗುತ್ತಿದ್ದು, ಬಿಸಿಲ ಜತೆಗೆ ಇದೂ ಕೂಡ ಆತಂಕದ ವಿಚಾರವಾಗಿದೆ. ಅಲ್ಲದೆ, ಸಾಮಾನ್ಯ ಜ್ವರ ಪ್ರಕರಣಗಳೂ ಹೆಚ್ಚಾಗುತ್ತಿವೆ.
ಇಂಥ ಸಂದರ್ಭದಲ್ಲಿ ಆದಷ್ಟು ಜನ ಜಾಗರೂಕತೆಯಿಂದ ಇರಬೇಕಾಗುತ್ತದೆ. ಸುಖಾಸುಮ್ಮನೆ ಬಿಸಿಲಲ್ಲಿ ಓಡಾಡುವುದನ್ನು ಬಿಡಬೇಕಾಗುತ್ತದೆ. ಆಗಾಗ ನೀರು ಕುಡಿಯುವುದು, ಹಣ್ಣಿನ ಜ್ಯೂಸ್ ಕುಡಿಯುವುದನ್ನು ಮಾಡಬೇಕಾಗುತ್ತದೆ. ಒಂದು ವೇಳೆ ಜ್ವರದ ಬಾಧೆ ಹೆಚ್ಚಾದರೆ, ಆಸ್ಪತ್ರೆಗೆ ಹೋಗಿ ವೈದ್ಯರಲ್ಲಿತೋರಿಸಿಕೊಳ್ಳಬೇಕು.
ಇದರ ಜತೆಗೆ ಸರಕಾರವೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕೊರೊನಾ ಹೆಚ್ಚಳದ ಆತಂಕ ಎದುರಾಗಿದ್ದು, ಆಸ್ಪತ್ರೆಗಳನ್ನು ಸನ್ನದ್ಧವಾಗಿಡುವುದು, ವೈದ್ಯರು ಲಭ್ಯರಿರುವಂತೆ ಮಾಡಬೇಕು. ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಂಡರೂ ಅದನ್ನು ನಿವಾರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು.