Advertisement

ಕೋಚಿಂಗ್‌ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಪಡೆಯದಂತೆ ಎಚ್ಚರಿಕೆ

02:15 AM Jun 08, 2022 | Team Udayavani |

ಉಡುಪಿ: ಪದವಿಪೂರ್ವ ಕಾಲೇಜುಗಳ ಸಿಇಟಿ, ಜೆಇಇ, ನೀಟ್‌, ಇಂಟಗ್ರೇಟೆಡ್‌ ಕೋರ್ಸ್‌, ಬ್ರಿಡ್ಜ್ ಕೋರ್ಸ್‌ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

Advertisement

ಪಿಯು ಕಾಲೇಜು ಶುಲ್ಕದ ವಿಚಾರವಾಗಿ ಇಲಾಖೆ ಸ್ಪಷ್ಟ ನಿರ್ದೇಶನ ನೀಡಿದ್ದು, ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ವಿರುದ್ಧ ಕಠಿನ ಕ್ರಮಕ್ಕೆ ಮುಂದಾಗಿದೆ.

ಮಾನ್ಯತೆ ರದ್ದಾಗಬಹುದು
ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪದವಿ ಕಾಲೇಜುಗಳ ಶುಲ್ಕ, ವಿಜ್ಞಾನ ವಿಷಯ ಬೋಧಿಸುವ ಕಾಲೇಜುಗಳು ಪಡೆಯಬಹುದಾದ ಹೆಚ್ಚುವರಿ ಶುಲ್ಕದ ಮಾಹಿತಿಯನ್ನು ಈಗಾಗಲೇ ಕಾಲೇಜುಗಳಿಗೆ ರವಾನಿಸಲಾಗಿದೆ.

ಕಾಲೇಜು ಆಡಳಿತ ಮಂಡಳಿಯು ಹೊಸ ವಿದ್ಯಾರ್ಥಿಗಳ ದಾಖಲಾತಿ ಸಂದರ್ಭ ಅಥವಾ ಈಗಾಗಲೇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಸಿಇಟಿ, ನೀಟ್‌, ಜೆಇಇ, ಇಂಟಗ್ರೇಟೆಡ್‌ ಕೋರ್ಸ್‌, ಬ್ರಿಡ್ಜ್ ಕೋರ್ಸ್‌ ಇತ್ಯಾದಿ ಹೆಸರಿನಲ್ಲಿ ಕಾನೂನುಬಾಹಿರವಾಗಿ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಪಡೆಯುವಂತಿಲ್ಲ. ಇದಕ್ಕೆ ಪೂರಕವಾಗಿ ಇತರ ಸಂಘ- ಸಂಸ್ಥೆಗಳೊಂದಿಗೆ ಅಥವಾ ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಅಥವಾ ಇಲೆಕ್ಟ್ರಾನಿಕ್‌ ಮಾಧ್ಯಮಗಳ ಮೂಲಕ ಬೋಧನೆ ಕಂಡುಬಂದಲ್ಲಿ ಅಂತಹ ಕಾಲೇಜುಗಳ ಮಾನ್ಯತೆಯನ್ನೇ ರದ್ದು ಮಾಡಲಾಗುತ್ತದೆ. ಜತೆಗೆ ಆ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗು ವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿರ್ದಿಷ್ಟ ಪಠ್ಯ ಬೋಧನೆ ಮಾಡಬೇಕು
ಇಲಾಖೆಯಿಂದ ಮಾನ್ಯತೆ ಪಡೆದ ಪಿಯು ಕಾಲೇಜುಗಳು ಯಾವುದೇ ಬೇರೆ ಸಂಸ್ಥೆ, ಬೇರೆ ಆಡಳಿತ ಮಂಡಳಿ,ಕೋಚಿಂಗ್‌ ನೀಡುವ ಸಂಸ್ಥೆ ಇತ್ಯಾದಿಗಳೊಂದಿಗೆ ಪರಸ್ಪರ ವಿನಿಮಯ ದೊಂದಿಗೆ ಆ ಸಂಸ್ಥೆಯ ಹೆಸರನ್ನು ತಮ್ಮ ಕಾಲೇಜಿನ ಹೆಸರಿನೊಂದಿಗೆ ಬಳಕೆ ಮಾಡಿ ಕೊಂಡು ಶೈಕ್ಷಣಿಕ ಚಟುವಟಿಕೆ ನಡೆಸು ವಂತಿಲ್ಲ. ಇಲಾಖೆಯಿಂದ ಅನುಮತಿ ಪಡೆದು, ಇಲಾಖೆಯು ನೀಡುವ ಕಾಲೇಜು ಸಂಕೇತ ಸಂಖ್ಯೆಯಲ್ಲಿ ಪಿಯು ಪಠ್ಯಕ್ರಮದ ಚಟುವಟಿಕೆಗಳನ್ನು ಹಾಗೂ ಇಲಾಖೆಯ ಸೂಚನೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಂಸ್ಥೆಯ ಹೆಸರನ್ನು ಬಳಸಿ ಕಾಲೇಜು ನಡೆಸುವಂತಿಲ್ಲ ಮತ್ತು ಕಾಲೇಜು ಸಂಕೇತ ಸಂಖ್ಯೆಯನ್ನು ದುರ್ಬಳಕೆ ಮಾಡ ಬಾರದು. ಯಾವುದೇ ಸಂಸ್ಥೆಯು ಪಿಯು ಕಾಲೇಜಿನ ಹೆಸರಿನಲ್ಲಿ ನಿಗದಿಪಡಿಸಿದ ಪಠ್ಯಕ್ರಮ ಹೊರತುಪಡಿಸಿ ಇತರ ಯಾವುದೇ ಪಠ್ಯಕ್ರಮ ಅಥವಾ ಪಠ್ಯ ಪುಸ್ತಕವನ್ನು ಬೋಧಿಸುವಂತಿಲ್ಲ. ಪಿಯುಇಲಾಖೆಯು ಮುದ್ರಿಸಿರುವ ಪಠ್ಯ ಪುಸ್ತಕದ ವಿನಾ ಯಾವುದೇ ಇತರ ಪುಸ್ತಕಗಳನ್ನು ಬೋಧಿಸಲು ಅವಕಾಶವಿಲ್ಲ. ಅದನ್ನು ಖರೀದಿಸಲು ವಿದ್ಯಾರ್ಥಿಗಳಿಗೆ, ಪೋಷಕರಿಗೆ ಒತ್ತಡ ಹೇರುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ.

Advertisement

ಬೋಧಕರಿಗೂ ಎಚ್ಚರಿಕೆ
ಸರಕಾರಿ, ಅನುದಾನಿತ ಕಾಲೇಜು (ಅನುದಾನಿತ ಕಾಲೇಜುಗಳಲ್ಲಿ ಸರಕಾರದ ವೇತನಾನುದಾನಕ್ಕೆ ಒಳಪಟ್ಟಿರುವವರು)ಗಳಲ್ಲಿ ಬೋಧಿಸುತ್ತಿರುವ ಬೋಧಕರು ಖಾಸಗಿಯಾಗಿ ಟ್ಯೂಷನ್‌ (ಮನೆಪಾಠ) ನಡೆಸುವಂತಿಲ್ಲ. ಈ ಬಗ್ಗೆ ದೂರುಗಳು ಬಂದಲ್ಲಿ ಅಥವಾ ಇಲಾಖೆ, ಕಾಲೇಜುಗಳ ಗಮನಕ್ಕೆ ಬಂದಲ್ಲಿ ಅಂತಹ ಉಪನ್ಯಾಸಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆಯಾ ಕಾಲೇಜಿನ ಪ್ರಾಂಶುಪಾಲರು ಇದರ ಮೇಲ್ವಿಚಾರಣೆ ವಹಿಸಬೇಕು ಎಂದು ನಿರ್ದೇಶಿಸಲಾಗಿದೆ.

ಸರಕಾರಿ ನಿಯಮದಂತೆ ಸರಕಾರದಿಂದ ವೇತನ ಪಡೆಯುವ ಉಪನ್ಯಾಸಕರು ಖಾಸಗಿಯಾಗಿ ಟ್ಯೂಷನ್‌ ನಡೆಸಲು ಅವಕಾಶ ಇರುವುದಿಲ್ಲ. ಈ ಬಗ್ಗೆ ದೂರುಗಳು ಬಂದಲ್ಲಿ ಕಠಿನ ಕ್ರಮ ತೆಗೆದುಕೊಳ್ಳುತ್ತೇವೆ. ಹಾಗೆಯೇ ಸ್ಪರ್ಧಾತ್ಮಕ ಪರೀಕ್ಷೆಯ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ವಸೂಲಿಗೂ ಅವಕಾಶ ಇಲ.
– ರಾಮಚಂದ್ರನ್‌ ಆರ್‌., ನಿರ್ದೇಶಕ, ಪ.ಪೂ. ಶಿಕ್ಷಣ ಇಲಾಖೆ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next