ಹೊಸದಿಲ್ಲಿ: ಭಾರತದ ಪೇಸ್ ಬೌಲರ್ ಶಾರ್ದೂಲ್ ಠಾಕೂರ್ ಶನಿವಾರ ಹೊರಾಂಗಣ ಅಭ್ಯಾಸ ನಡೆಸಿದ್ದಕ್ಕೆ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿದೆ. ಈ ಸಂದರ್ಭದಲ್ಲಿ ಅವರು ಮಂಡಳಿಯ ಅನುಮತಿಯನ್ನು ಕೇಳಿರಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಶಾರ್ದೂಲ್ ಠಾಕೂರ್ ಮಂಡಳಿಯ ಗುತ್ತಿಗೆ ಒಪ್ಪಂದದ ವ್ಯಾಪ್ತಿಯಲ್ಲಿರುವ ಆಟಗಾರ. ಅಭ್ಯಾಸಕ್ಕೆ ಇಳಿಯುವಾಗ ಅವರು ಮಂಡಳಿ ಅನುಮತಿಯನ್ನು ಪಡೆಯಬೇಕಿತ್ತು. ಇದೊಂದು ತಪ್ಪು ಹೆಜ್ಜೆ’ ಎಂಬುದಾಗಿ ಬಿಸಿಸಿಐ ಅಧಿಕಾರಿ ಅಭಿಪ್ರಾಯ.
ಮುಂಬಯಿಯಲ್ಲಿ ಕೋವಿಡ್- 19 ಗಂಭೀರ ಹಂತವನ್ನು ಮುಟ್ಟಿದ್ದು, ಇಲ್ಲಿಯೇ ಇರುವ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ ಮೊದಲಾದವರು ಇನ್ನೂ ಮನೆಯಿಂದ ಹೊರಗೆ ಬಂದಿಲ್ಲ.
ಶಾರ್ದೂಲ್ ಠಾಕೂರ್ ಶನಿವಾರ ಮುಂಬಯಿಯಿಂದ 110 ಕಿ.ಮೀ. ದೂರದಲ್ಲಿರುವ ಪಾಲ್ಘರ್ ಜಿಲ್ಲೆಯ ಬೋಯಿಸರ್ ಕ್ರೀಡಾಂಗಣದಲ್ಲಿ ಕೆಲವು ಸ್ಥಳೀಯ ಕ್ರಿಕೆಟಿಗರೊಂದಿಗೆ ಬೌಲಿಂಗ್ ಅಭ್ಯಾಸಕ್ಕಿಳಿದಿದ್ದರು. ಕೋವಿಡ್ 19 ಲಾಕ್‌ಡೌನ್ ಬಳಿಕ ಹೊರಾಂಗಣದಲ್ಲಿ ಅಭ್ಯಾಸ ಆರಂಭಿಸಿದ ಭಾರತದ ಮೊದಲ ಕ್ರಿಕೆಟಿಗನೆನಿಸಿದ್ದರು.
ಅಭ್ಯಾಸದ ವೇಳೆ ಶಾರ್ದೂಲ್ ಠಾಕೂರ್ ಎಲ್ಲ ಸುರಕ್ಷಾ ವಿಧಾನವನ್ನು ಪಾಲಿಸಿದ್ದಾರೆ ಎಂಬುದಾಗಿ ಸ್ಥಳೀಯ ಕ್ರಿಕೆಟ್ ಅಧಿಕಾರಿಯೊಬ್ಬರು ಹೇಳಿದ್ದಾರೆ.