ಹಾವೇರಿ: ನಾನು ಯಾವುದೇ ಖಾತೆ ಬಗ್ಗೆ ನಿರೀಕ್ಷೆ ಹೊಂದಿಲ್ಲ. ಯಾವ ಖಾತೆ ಕೊಟ್ಟರೂ ನಿಭಾಯಿಸುವ ಶಕ್ತಿ ಇದೆ. ಅಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಜಿಲ್ಲೆಯ ಹಿರೇಕೆರೂರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮನ್ನು ಬಿಜೆಪಿ ಇದುವರೆಗೆ ಚೆನ್ನಾಗಿ ನಡೆಸಿಕೊಂಡು ಬಂದಿದ್ದು, ಈಗಲೂ ಚೆನ್ನಾಗಿ ನಡೆಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಮಾಜಿ ಸಿಎಂ ಯಡಿಯೂರಪ್ಪ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡುವ ಬಗ್ಗೆ ಹೇಳಿದ್ದಾರೆ. ನಮ್ಮ ಜಿಲ್ಲೆಯವರೇ ಸಿಎಂ ಆಗಿರುವುದರ ಬಗ್ಗೆ ಬಹಳ ಹೆಮ್ಮೆ ಇದೆ. ಹಾವೇರಿ ಮಾತ್ರವಲ್ಲ ಸಮಗ್ರ ಕರ್ನಾಟಕದ ಅಭಿವೃದ್ಧಿ ಆಗುತ್ತದೆ. ನೂತನ ಸಿಎಂ ಆಗಿ ಒಂದು ವಾರ ಆಗಿದೆ. ಕೋವಿಡ್ ಮತ್ತು ನೆರೆ ಇರುವ ಸಂದರ್ಭದಲ್ಲಿ ಕೂಡಲೇ ಮಂತ್ರಿ ಮಂಡಲ ರಚನೆ ಮಾಡಬೇಕು ಎನ್ನುವುದು ಎಲ್ಲರ ಒತ್ತಾಯ ಎಂದರು.
ರಾಜ್ಯದ ಭವಿಷ್ಯ ನುಡಿಯಬೇಕಾದವರು ಪ್ರಜೆಗಳೇ ಹೊರತು ಸ್ವಾಮಿಗಳು, ಧರ್ಮದರ್ಶಿಗಳಲ್ಲ. ಮೈಲಾರದ ದೊಡ್ಡ ನನಗೆ ಗುರುಗಳು ರಾಜಕೀಯಕ್ಕೆ ಬರಬೇಡಿ ಅಂದಿದ್ದರು. ಮೈಲಾರದ ಧರ್ಮದರ್ಶಿಗಳು ಕೊರೊನಾ ಬಗ್ಗೆ ಭವಿಷ್ಯ ಹೇಳಲಿ. ಯಾರೂ ಯಾರ ರಬ್ಬರ ಸ್ಟ್ಯಾಂಪ್ ಆಗೋಕೆ ಸಾಧ್ಯವಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಹುಲ್ ಗಾಂಧಿ , ಸೋನಿಯಾ ಗಾಂಧಿ ಅವರ ರಬ್ಬರ ಸ್ಟ್ಯಾಂಪ್ ಆಗಿದ್ದರಾ? ಯಡಿಯೂರಪ್ಪ ಅವರ ಸಲಹೆ ಸೂಚನೆ ಅಗತ್ಯವಿದ್ದಾಗ ಪಡೆಯುತ್ತಾರೆ. ಮಂತ್ರಿಗಳು ಇಲ್ಲ ಅಂದಾಕ್ಷಣ ಸರ್ಕಾರ ಇಲ್ಲ ಅಂತಲ್ಲ. ಈಗಾಗಲೇ ಅಧಿಕಾರಿಗಳು, ಸಿಎಂ ಕೆಲಸ ಮಾಡ್ತಿದ್ದಾರೆ. ಬೆಳೆ, ಮನೆ ಹಾನಿ ಆಗಿರೋ ರೈತರಿಗೆ ಖಂಡಿತವಾಗಿ ನ್ಯಾಯ ಸಿಗುತ್ತದೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರು ವಯಸ್ಸಿನಲ್ಲಿ ಹಿರಿಯರು, ಬಹಳ ಅನುಭವಿಗಳು. ಹಿರಿಯರು ಎನ್ನುವ ಕಾರಣಕ್ಕೆ ಸಿಎಂ ಗೌರವಕ್ಕೆ ಹೋಗಿ ಭೇಟಿ ಆಗಿದ್ದಾರೆ. ನರೇಂದ್ರ ಮೋದಿ ಸಹ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ್ದರು. ಹಿರಿಯರನ್ನು ಭೇಟಿ ಮಾಡಿ ಸಲಹೆ, ಮಾರ್ಗದರ್ಶನ ಪಡೆಯೋದು ಭಾರತೀಯ ಸಂಸ್ಕೃತಿಯಲ್ಲಿ ಸಾಮಾನ್ಯ. ಮಾಜಿ ಸಿಎಂ ಯಡಿಯೂರಪ್ಪ ಕೋವಿಡ್, ಪ್ರವಾಹವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರ ಆಡಳಿತವನ್ನು ಪ್ರಧಾನಿ ಸಹ ಮೆಚ್ಚಿಕೊಂಡಿದ್ದಾರೆ. ಮುಂದಿನ ಚುನಾವಣೆ ಯಡಿಯೂರಪ್ಪ, ಬೊಮ್ಮಾಯಿ ಮತ್ತು ಬಿಜೆಪಿ ನೇತೃತ್ವದಲ್ಲಿ ನಡೆಯುತ್ತದೆ ಎಂದರು.