ಬೆಂಗಳೂರು: ಬಿಬಿಎಂಪಿ ಆದಾಯ ಮೂಲವಾದ ಆಸ್ತಿ ತೆರಿಗೆ ಸಂಗ್ರಹದಲ್ಲಿ ಹಿಂದೆ ಬೀಳುವ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ ನೀಡಲು ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ. ಅದಕ್ಕಾಗಿ ಪ್ರತಿ ಅಧಿಕಾರಿಗೂ ತೆರಿಗೆ ಸಂಗ್ರಹದ ಗುರಿ ನಿಗದಿ ಮಾಡಲಾಗುತ್ತಿದ್ದು, ಅದನ್ನು ಮುಟ್ಟದಿದ್ದರೆ ಅಂತಹ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಿಬಿಎಂಪಿಯು 4 ಸಾವಿರ ಕೋಟಿ ರೂ.ಗೂ ಹೆಚ್ಚಿನ ಆಸ್ತಿ ತೆರಿಗೆ ಸಂಗ್ರಹದ ಗುರಿ ನಿಗದಿ ಮಾಡಿಕೊಳ್ಳಲಾಗಿದೆ. ಅದರಂತೆ ಅಕ್ಟೋಬರ್ 8ರವರೆಗೆ 2,497.58 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಅದನ್ನು ಗಮನಿಸಿದರೆ ಪ್ರಸಕ್ತ ಆರ್ಥಿಕ ವರ್ಷದ ಗುರಿಯ ಶೇ. 59.61ರಷ್ಟು ತೆರಿಗೆ ಸಂಗ್ರಹಿಸಲಾಗಿದೆ. ಇನ್ನೂ ಶೇ. 40.39 ಆಸ್ತಿ ತೆರಿಗೆ ಸಂಗ್ರಹಿಸಬೇಕಿದೆ. ಹೀಗಾಗಿ ಉಳಿದ ಐದಾರು ತಿಂಗಳಲ್ಲಿ ತೆರಿಗೆ ಸಂಗ್ರಹದ ಶೇ. 100 ಗುರಿಯನ್ನು ಮುಟ್ಟುವುದು ಬಿಬಿಎಂಪಿ ಕಂದಾಯ ವಿಭಾಗದ ಯೋಜನೆಯಾಗಿದೆ.
ಹೀಗಾಗಿ ಕಂದಾಯ ಸಂಗ್ರಹಕ್ಕೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಗುರಿ ನಿಗದಿ ಮಾಡಲಾಗುತ್ತಿದ್ದು, ಅದ ನ್ನು ಪಾಲಿಸದಿದ್ದರೆ ಎತ್ತಂಗಡಿ ಶಿಕ್ಷೆಗೆ ಗುರಿಯಾಗಬೇಕು ಎಂಬ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ. ಸದ್ಯ ಬಿಬಿಎಂಪಿ ಕಂದಾಯ ವಿಭಾಗ ನಿಗದಿ ಮಾಡಿರುವಂತೆ ತೆರಿಗೆ ನಿರೀಕ್ಷಕರಿಂದ ವಲಯ ಆಯುಕ್ತರವರೆಗೆ ಗುರಿ ನಿಗದಿ ಮಾಡಲಾಗಿದೆ.
ತೆರಿಗೆ ನಿರೀಕ್ಷಕರು ಮತ್ತು ಕಂದಾಯ ನಿರೀಕ್ಷಕರು 10 ಲಕ್ಷ ರೂ.ವರೆಗಿನ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಂದ ತೆರಿಗೆ ವಸೂಲಿಗೆ ಸೂಚಿಸಲಾಗುತ್ತಿದೆ. ಅದೇ ರೀತಿ ಸಹಾಯಕ ಕಂದಾಯ ಅಧಿಕಾರಿಗಳಿಗೆ 10 ರಿಂದ 25 ಲಕ್ಷ ರೂ., ಕಂದಾಯ ಅಧಿಕಾರಿಗೆ 25ರಿಂದ 50 ಲಕ್ಷ ರೂ., ವಲಯ ಡೀಸಿಗೆ 50 ಲಕ್ಷ ರೂ.ನಿಂದ 1 ಕೋಟಿ ರೂ. ಮತ್ತು ವಲಯ ಜಂಟಿ ಆಯುಕ್ತರಿಗೆ 1ರಿಂದ 5 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳನ್ನು ಪತ್ತೆ ಮಾಡಿ ಅವುಗಳಿಂದ ಶೇ. 100 ಬಾಕಿ ಹಾಗೂ ಚಾಲ್ತಿ ತೆರಿಗೆ ವಸೂಲಿ ಮಾಡುವ ಗುರಿ ನೀಡಲಾಗುತ್ತಿದೆ. ಜತೆಗೆ ವಲಯ ಆಯುಕ್ತರು ತಮ್ಮ ವಲಯ ವ್ಯಾಪ್ತಿಯಲ್ಲಿ 5 ಕೋಟಿ ರೂ.ಗಿಂತ ಹೆಚ್ಚಿನ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳನ್ನು ಪತ್ತೆ ಮಾಡಿ ವಿವಿಧ ಸಿಬ್ಬಂದಿ, ಅಧಿಕಾರಿಗಳ ನೆರವಿನೊಂದಿಗೆ ತೆರಿಗೆ ವಸೂಲಿ ಮಾಡುವಂತೆ ಸೂಚಿಸಲಾಗುತ್ತಿದೆ.
ಅ.15ರಿಂದ ಆಸ್ತಿ ತೆರಿಗೆ ಸಂಗ್ರಹ ಅಭಿಯಾನ: ತೆರಿಗೆ ಸಂಗ್ರಹಕ್ಕೆ ವೇಗ ನೀಡುವ ಸಲುವಾಗಿ ಎಲ್ಲ 8 ವಲಯಗಳಲ್ಲೂ ಅ. 15ರಿಂದ ಆಸ್ತಿ ತೆರಿಗೆ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಇದರಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ (ಎಸ್‌ಎಎಸ್) ಅಡಿಯಲ್ಲಿ ತಪ್ಪು ಮಾಹಿತಿ ನೀಡಿದ ಆಸ್ತಿಗಳನ್ನು ಪತ್ತೆ ಮಾಡಿ ಹೆಚ್ಚುವರಿ ತೆರಿಗೆಯನ್ನು ಬಡ್ಡಿ ಸಹಿತವಾಗಿ ವಸೂಲಿ ಮಾಡುವ ಗುರಿ ಹೊಂದಲಾಗಿದೆ. ಪ್ರಮುಖವಾಗಿ ಬೆಸ್ಕಾಂ ದಾಖಲೆ ಪರಿಶೀಲನೆ, ಸರ್ಕಾರಿ ಆಸ್ತಿಗಳು, ಶಿಕ್ಷಣ ಸಂಸ್ಥೆಗಳು, ಅರ್ಧ ತೆರಿಗೆ ಪಾವತಿಸಿದ ಆಸ್ತಿಗಳಿಂದ ತೆರಿಗೆ ವಸೂಲಿ ಮಾಡುವುದಕ್ಕೆ ನಿರ್ಧರಿಸಲಾಗಿದೆ.
ಕಂದಾಯ ವಿಭಾಗದಿಂದಲೇ ವರ್ಗಾವಣೆ: ಆಸ್ತಿ ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ನೀಡಲಾದ ಗುರಿಯಲ್ಲಿ ತೃಪ್ತಿಕರವಾದ ನಿರ್ವಹಣೆ ತೋರದ ಅಧಿಕಾರಿಗಳನ್ನು ಕಂದಾಯ ವಸೂಲಿ ಸೇರಿ ಕಂದಾಯ ವಿಭಾಗಕ್ಕೆ ಸಂಬಂಧಿಸಿದ ಹುದ್ದೆಯಿಂದ ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ. ಪ್ರಮುಖವಾಗಿ ಟಿಐ, ಆರ್‌ಐ, ಆರ್‌ಒ, ಎಆರ್‌ಒ, ವಲಯ ಡಿಸಿಗಳವರೆಗಿನ ಅಧಿಕಾರಿಗಳು ವರ್ಗಾವಣೆ ಶಿಕ್ಷೆ ವ್ಯಾಪ್ತಿಗೊಳಪಡಿಸಲಾಗುತ್ತಿದೆ. ಅವರುಗಳು ನಿಗದಿತ ಗುರಿಗಿಂತ ಕಡಿಮೆ ತೆರಿಗೆ ಸಂಗ್ರಹಿಸಿದ ವಲಯಗಳ ನಡುವೆ ಅಥವಾ ಮಾರುಕಟ್ಟೆ, ಕೆರೆ, ರಾಜಕಾಲುವೆ ಸೇರಿ ಇನ್ನಿತರ ಇತರ ವಿಭಾಗಗಳಿಗೆ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ.
ಬಿಬಿಎಂಪಿ ಬಜೆಟ್‌ನಲ್ಲಿ ನಿಗದಿ ಮಾಡಿರುವ ಆಸ್ತಿ ತೆರಿಗೆ ಸಂಗ್ರಹದ ಗುರಿಯನ್ನು ಮುಟ್ಟಲು ಅ.15ರಿಂದ ತೆರಿಗೆ ಸಂಗ್ರಹ ಅಭಿಯಾನ ಆರಂಭಿಸಲಾಗುತ್ತಿದೆ. ಜತೆಗೆ ಕಂದಾಯ ಸಂಗ್ರಹಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಗುರಿ ನೀಡಲಾಗುತ್ತಿದೆ. ಒಂದು ವೇಳೆ ಅಧಿಕಾರಿ, ಸಿಬ್ಬಂದಿಯ ತೆರಿಗೆ ಸಂಗ್ರಹದ ಕಾರ್ಯ ತೃಪ್ತಿಕರವಾಗಿರದಿದ್ದರೆ ಅವರನ್ನು ಬೇರೆ ವಲಯ ಅಥವಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗುವುದು. ● ಡಾ|ಆರ್.ಎಲ್. ದೀಪಕ್, ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ)
– ಗಿರೀಶ್ ಗರಗ