ಬೆಂಗಳೂರು: ವಾರದ ಹಿಂದೆಯಷ್ಟೇ ಬಿಬಿಎಂಪಿಯ ನೂತನ ಉಪಮೇಯರ್ ಆಗಿ ಆಯ್ಕೆಯಾಗಿ, ಎರಡು ದಿನಗಳ ಹಿಂದೆ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದ ಜೆಡಿಎಸ್‌ನ ರಮೀಳಾ ಉಮಾಶಂಕರ್ ಗುರುವಾರ ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಗುರುವಾರ ಇಡೀ ದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಜತೆ ಕೆ.ಆರ್.ಮಾರುಕಟ್ಟೆ, ನಮ್ಮ ಮೆಟ್ರೋ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದ ಅವರು ಸಂಜೆ ಮನೆಗೆ ತೆರಳಿದ್ದರು. ತಡರಾತ್ರಿ 12.45ರ ಸುಮಾರಿಗೆ ತೀವ್ರ ಹೃದಯಾಘಾತ ಉಂಟಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
44 ವರ್ಷದ ರಮೀಳಾ ಅವರು ಪತಿ ಉಮಾಶಂಕರ್ ಹಾಗೂ ಪುತ್ರ ಯು.ವರುಣ್‌ಕುಮಾರ್ ಮತ್ತು ಪುತ್ರಿ ಯು.ಭೂಮಿಕಾ ರಾಣಿ ಅವರನ್ನು ಅಗಲಿದ್ದಾರೆ. ಇದೇ ಮೊದಲ ಬಾರಿಗೆ ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾಗಿದ್ದ ರಮೀಲಾ ಪಾಲಿಕೆಯ ಜೆಡಿಎಸ್ ಪಕ್ಷದ ನಾಯಕಿಯಾಗಿದ್ದರು. ಕಳೆದ ಬಾರಿ ಉಪಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದರಾದರೂ ಅಂತಿಮ ಕ್ಷಣದಲ್ಲಿ ಕೈತಪ್ಪಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕಿತ್ತನಹಳ್ಳಿಯ ತೋಟದಲ್ಲಿ ರಮೀಳಾ ಅವರ ಅಂತ್ಯಕ್ರಿಯೆ ಗುರುವಾರ ಸಂಜೆ ನೆರವೇರಿಸಲಾಯಿತು. ಅವರ ತಾಯಿ ಗಂಗಮ್ಮ ಅವರ ಸಮಾಧಿ ಬಳಿಯೇ ಅಂತ್ಯಕ್ರಿಯೆ ನಡೆಸಿದ್ದು, ಕುರುಬ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು.
ವಿಷಯ ತಿಳಿಯುತ್ತಿದ್ದಂತೆ ಡಿಸಿಎಂ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಿ.ಸಿ.ತಮ್ಮಣ್ಣ, ಬಂಡೆಪ್ಪ ಕಾಶೆಂಪೂರ್, ಶಾಸಕರಾದ ವಿ.ಸೋಮಣ್ಣ, ಕೆ.ಗೋಪಾಲಯ್ಯ, ಎಚ್.ಎಂ.ರೇವಣ್ಣ, ರಾಮಲಿಂಗಾರೆಡ್ಡಿ, ಟಿ.ಎ.ಶರವಣ, ಮುಖ್ಯಮಂತ್ರಿಗಳ ಪತ್ನಿ ಅನಿತಾ ಕುಮಾರಸ್ವಾಮಿ, ಮೇಯರ್ ಗಂಗಾಂಬಿಕೆ, ಮಾಜಿ ಮೇಯರ್ ಸಂಪತ್‌ರಾಜ್, ಆಡಳಿತ ಪಕ್ಷ ನಾಯಕ ಎಂ.ಶಿವರಾಜು ಸೇರಿದಂತೆ ನಗರ ಶಾಸಕರು, ಪಾಲಿಕೆ ಸದಸ್ಯರು, ಬೆಂಬಳಿಗರು ಗೋವಿಂದರಾಜ ನಗರದ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.