Advertisement

Bantwala: ಕೆದಿಲ: ಸಿಡಿಲಿಗೆ ಮೃತಪಟ್ಟ ಬಾಲಕನಿಗೆ ಕಣ್ಣೀರ ವಿದಾಯ

03:19 AM Nov 19, 2024 | Team Udayavani |

ಬಂಟ್ವಾಳ: ಕೆದಿಲ ಗ್ರಾಮದ ಪೇರಮೊಗ್ರು ಮುರಿಯಾಜೆಯಲ್ಲಿ ನ. 17ರಂದು ಸಿಡಿಲು ಬಡಿದು ಮೃತಪಟ್ಟ 14ರ ಹರೆಯದ ಸುಬೋಧ್‌ನ ಅಂತ್ಯಕ್ರಿಯೆ ಸೋಮವಾರ ನಡೆದಿದ್ದು, ಇಡೀ ಗ್ರಾಮವೇ ಬಾಲಕನಿಗೆ ಕಣ್ಣೀರ ವಿದಾಯ ಸಲ್ಲಿಸಿದೆ.

Advertisement

ಕುಟುಂಬಕ್ಕೆ ಆಧಾರವಾಗಬೇಕಿದ್ದ ಹಿರಿಯ ಪುತ್ರನ ದುರಂತ ಅಂತ್ಯ ಹೆತ್ತವರನ್ನು ಆಘಾತಕ್ಕೆ ತಳ್ಳಿದ್ದು, ಕೈ ಹಿಡಿದು ಮುನ್ನಡೆಸಬೇಕಿದ್ದ ಅಣ್ಣನ ಅಕಾಲಿಕ ಮರಣ ಇಬ್ಬರು ಅವಳಿ ತಮ್ಮಂದಿರನ್ನು ಘಾಸಿಗೊಳಿಸಿದೆ. ಮುರಿಯಾಜೆ ನಿವಾಸಿ ಚಂದ್ರಹಾಸ-ಸುಭಾಷಿಣಿ ದಂಪತಿಗೆ ಸುಬೋಧ್‌ ಅಲ್ಲದೆ, ಚಿಂತನ್‌ ಹಾಗೂ ಚಿಂತಕ್‌ ಎಂಬ ಇಬ್ಬರು ಪುತ್ರರಿದ್ದಾರೆ. ಚಂದ್ರಹಾಸ ಅವರು ನೀರಿನ ಬಾಟಲ್‌ಗ‌ಳ ಸಾಗಾಟ ವಾಹನವೊಂದರಲ್ಲಿ ಚಾಲಕರಾಗಿದ್ದಾರೆ.

ನ. 17ರಂದು ಚಂದ್ರಹಾಸ ಅವರು ಹೊರಗೆ ಹೋಗಿದ್ದು, ಮಕ್ಕಳೊಂದಿಗೆ ತಾಯಿ ಮನೆಯಲ್ಲಿದ್ದರು. ಸಂಜೆ 4.30ರ ಸುಮಾರಿಗೆ ಸಾಧಾರಣ ಸಿಡಿಲು ಸಹಿತ ಮಳೆ ಬರುತ್ತಿದ್ದು, ತಾಯಿ ಅಡುಗೆ ಕೋಣೆಯಲ್ಲಿ ಕೆಲಸದಲ್ಲಿ ನಿರತರಾಗಿದ್ದರು. ಮಕ್ಕಳು ಸಿಟೌಟ್‌ನಲ್ಲಿ ಆಡುತ್ತಿದ್ದರು. ಈ ವೇಳೆ ಏಕಾಏಕಿ ಮಿಂಚು-ಸಿಡಿಲು ಬಡಿದಿದ್ದು, ಅವಳಿ ಮಕ್ಕಳು ಹೆದರಿ ಓಡಿದ್ದಾರೆ. ಹಿರಿಯ ಪುತ್ರ ಅಲ್ಲೇ ಕುಸಿದು ಬಿದ್ದಿದ್ದಾನೆ. ತಾಯಿಯ ಕಾಲಿಗೂ ವಿದ್ಯುತ್‌ ಶಾಕ್‌ ಹೊಡೆದ ಅನುಭವವಾಗಿದೆ.

ತತ್‌ಕ್ಷಣ ಆಕೆ ಅಡುಗೆ ಕೋಣೆಯಿಂದ ಹೊರಗೆ ಓಡಿ ಬಂದಿದ್ದು, ಆಗ ಸುಬೋಧ್‌ ಕುಸಿದು ಬಿದ್ದಿರುವುದು ಕಂಡುಬಂತು. ಕೂಡಲೇ ಪತಿಗೆ ವಿಷಯ ತಿಳಿಸಿದರು. ಬಳಿಕ ಮಗನನ್ನು ತತ್‌ಕ್ಷಣ ಮಾಣಿಯ ಕ್ಲಿನಿಕ್‌ಗೆ ಕರೆತಂದಿದ್ದು, ಅಲ್ಲಿನ ವೈದ್ಯರ ಸಲಹೆಯಂತೆ ಪುತ್ತೂರಿನ ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲಾಗಲಿಲ್ಲ.

ತೆಂಗಿನಮರಕ್ಕೆ ಬಡಿದಿದೆಯೇ?
ಅವರದ್ದು ಹಂಚಿನ ಮನೆ ಯಾಗಿದ್ದು, ಸಿಟೌಟ್‌ಗೆ ಸಿಮೆಂಟ್‌ ಹಾಕಲಾಗಿದೆ. ಮನೆಯಲ್ಲಿ ಎಲ್ಲೂ ಸಿಡಿಲು ಬಡಿದಿರುವ ಕುರುಹು ಕಂಡುಬಂದಿಲ್ಲ. ಒಂದು ಸಣ್ಣ ಬಿರುಕು ಇದ್ದರೂ ಅದು ಇದೇ ಕಾರಣದಿಂದ ಎಂಬುದು ಖಚಿತಗೊಂಡಿಲ್ಲ. ಸ್ಥಳೀಯರ ಮಾಹಿತಿ ಪ್ರಕಾರ ಮನೆಯ ಅಂಗಳದ ತೆಂಗಿನಮರವೊಂದು ಬಾಡಿದ ರೀತಿ ಕಂಡು ಬಂದಿದ್ದು, ಅದಕ್ಕೆ ಸಿಡಿಲು ಬಡಿದಿರುವ ಶಂಕೆ ಮೂಡಿದೆ. ಒಂದೊಮ್ಮೆ ಅದು ನಿಜವಾಗಿದ್ದಲ್ಲಿ ತೆಂಗಿನಮರ ಪೂರ್ತಿ ಬಾಡಲು 2-3 ದಿನ ಬೇಕಿದೆ. ಬಳಿಕವಷ್ಟೇ ಸ್ಪಷ್ಟತೆ ಸಿಗಲಿದೆ.

Advertisement

ತಹಶೀಲ್ದಾರ್‌ ಭೇಟಿ
ಮೃತ ಬಾಲಕನ ಮನೆಗೆ ಬಂಟ್ವಾಳ ತಹಶೀಲ್ದಾರ್‌ ಅರ್ಚನಾ ಡಿ.ಭಟ್‌ ಭೇಟಿ ನೀಡಿ ತಾಯಿಯನ್ನು ಮಾತನಾಡಿಸಿ ಸಂತೈಸಲು ಪ್ರಯತ್ನಿಸಿದ್ದಾರೆ. ಕುಟುಂಬಕ್ಕೆ ಪರಿಹಾರ ಧನ ವಿತರಣೆ ನಿಟ್ಟಿನಲ್ಲೂ ಶೀಘ್ರ ಕ್ರಮ ಕೈಗೊಳ್ಳಲಿದ್ದು, ಪುತ್ತೂರು ಶಾಸಕರು ಈ ಕುರಿತು ಸೂಕ್ತ ನಿರ್ದೇಶನ ನೀಡಿದ್ದಾರೆ. ಸಿಡಿಲಿನ ಆಘಾತದಿಂದ ಆತನ ಬೆನ್ನುಮೂಳೆಗೆ ಹೊಡೆತ ಬಿದ್ದಿರುವ ಸಾಧ್ಯತೆ ಇದ್ದು, ವೈದ್ಯರ ವರದಿ ಕೈ ಸೇರಿದ ಬಳಿಕವೇ ಎಲ್ಲಿಗೆ ಏಟು ಬಿದ್ದಿದೆ ಎಂಬುದು ಸ್ಪಷ್ಟಗೊಳ್ಳಲಿದೆ ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ. ಕೆದಿಲ ಗ್ರಾ.ಪಂ.ಅಧ್ಯಕ್ಷ ಹರೀಶ್‌ ವಿ.ವಾಲ್ತಜೆ ಜತೆಗಿದ್ದರು. ಘಟನೆ ಕುರಿತು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚುರುಕಿನ ವಿದ್ಯಾರ್ಥಿ
ಸುಬೋಧ್‌ ತರಗತಿಯಲ್ಲಿ ಅತ್ಯಂತ ಚುರುಕಿನ ವಿದ್ಯಾರ್ಥಿಯಾಗಿದ್ದು, ಓದಿನಲ್ಲೂ ಮುಂದಿದ್ದ. ಮಧ್ಯವಾರ್ಷಿಕ ಪರೀಕ್ಷೆಯಲ್ಲೂ ಉತ್ತಮ ಅಂಕಗಳನ್ನು ಗಳಿಸಿದ್ದ. ಜತೆಗೆ ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿಯಿದ್ದು, ಬಿಡುವಿನ ಸಮಯದಲ್ಲಿ ಚಿತ್ರ ಬಿಡಿಸುತ್ತಿದ್ದ ಎಂದು ಶಾಲೆಯ ಮೂಲಗಳು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next