ಬೆಂಗಳೂರು: ಬಿಬಿಎಂಪಿ ಆಡಳಿತ ಹಾಗೂ ನಿರ್ವಹಣೆಗೆ ಸರ್ಕಾರ ರೂಪಿಸಲು ಉದ್ದೇಶಿಸಿರುವ ಪ್ರತ್ಯೇಕ ಕಾಯ್ದೆಯಲ್ಲಿ ವಾರ್ಡ್ ಮಟ್ಟದ ಕಮಿಟಿಗಳ ಅಧಿಕಾರ ಮೊಟಕುಗೊಳಿಸಬಾರದು ಎಂದು ಮಾಜಿ ಮೇಯರ್‌ಗಳು,ಪಾಲಿಕೆ ಮಾಜಿ ಸದಸ್ಯರು ಒತ್ತಾಯ ಮಾಡಿದ್ದಾರೆ. ಜನಾಗ್ರಹ ಸಂಸ್ಥೆಯಿಂದ ಶನಿವಾರ ನಗರದ ಸಮಗ್ರ ಅಭಿವೃದ್ಧಿ ಕುರಿತು ಬಿಬಿಎಂಪಿ ಮಾಜಿ ಸದಸ್ಯರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಈ ಆಗ್ರಹ ಕೇಳಿಬಂದಿದೆ.
ಪ್ರತಿ ವಾರ್ಡ್‌ಗಳಲ್ಲಿ ಸರ್ವ ಪಕ್ಷಗಳ ಮುಖಂಡರು ಹಾಗೂ ವಾರ್ಡ್‌ನ ಎಲ್ಲ ಹಲವು ಜನರನ್ನು ಒಳಗೊಂಡಂತೆ ವಾರ್ಡ್ ಕಮಿಟಿ ರಚನೆ ಆಗುತ್ತದೆ. ಇದರಿಂದ ವಾರ್ಡ್‌ನ ಸದಸ್ಯರು ಹಾಗೂ ಜನರ ನಡುವೆ ಉತ್ತಮ ಸಂವಾದ ಇರುತ್ತದೆ. ವಾರ್ಡ್‌ನ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಹೊಸ ಯೋಜನೆ ಅನುಷ್ಟಾನದಬಗ್ಗೆ ಚರ್ಚೆ ಮಾಡಲು ಸಹಾಯ ವಾಗಲಿದೆ. ಹೀಗಾಗಿ, ವಾರ್ಡ್ ಮಟ್ಟದ ಕಮಿಟಿ ಅಧಿಕಾರ ಮೊಟಕುಗೊಳಿಸಬಾರದು ಎಂದು ಮಾಜಿ ಮೇಯರ್ ಗಂಗಾಂಬಿಕೆ ಅಭಿಪ್ರಾಯ ಪಟ್ಟರು.
ಪಾಲಿಕೆಯ 50 ಸಾವಿರ ಕೋಟಿಗೂ ಹೆಚ್ಚು ಪಾಲಿಕೆಯ ಆಸ್ತಿ ಭೂಗಳ್ಳರ ಪಾಲಾಗಿದ್ದು, ಅದನ್ನು ಪರಿಶೀಲಿಸಿ ವಶಕ್ಕೆ ಪಡೆಯಬೇಕು. ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಸುಧಾರಣೆ ತರಬೇಕು ಎಂದು ಪಾಲಿಕೆ ಮಾಜಿ ಸದಸ್ಯ ಮೋಹನ್ ಕುಮಾರ್ ಆಗ್ರಹಿಸಿದರು.
ಮಾಜಿ ನಾಯಕ ಎಂ. ಶಿವರಾಜು ಮಾತನಾಡಿ, ಪಾಲಿಕೆಗೆ ಆಸ್ತಿ ತೆರಿಗೆ ಮತ್ತು ತೆರಿಗೆಯೇತರ ಆದಾಯ ಸೇರಿ ಒಟ್ಟು 3,500 ಕೋಟಿ ರೂ. ಗೂ ಕಡಿಮೆ ಆದಾಯ ಇದೆ ಇಷ್ಟಾದರೂ, ಆದಾಯಕ್ಕಿಂತ ಹೆಚ್ಚು ವೆಚ್ಚದ ಬಜೆಟ್ ಮಂಡನೆ ಮಾಡಲಾಗುತ್ತಿದೆ. ಸರ್ಕಾರವೂ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ನೀಡುತ್ತಿಲ್ಲ. ಹೀಗಾಗಿ, ವಾಸ್ತವಿಕ ಆದಾಯದ ಆಧಾರದಲ್ಲಿ ಬಜೆಟ್ ಮಂಡನೆ ಮಾಡಬೇಕು ಎಂದು ಹೇಳಿದರು. ಸಂವಾದಲ್ಲಿ ಮಾಜಿ ಮೇಯರ್ ಗೌತಮ್‌ಕುಮಾರ್, ಸಂವಾದದಲ್ಲಿ ಜನಾಗ್ರಹ ಸಂಸ್ಥೆಯ ಸ್ವಪ್ನ, ಪಾಲಿಕೆ ಮಾಜಿ ಸದಸ್ಯರು ಹಾಜರಿದ್ದರು.
ಸಮಸ್ಯೆಯ ಬಗ್ಗೆ ಜನಾಭಿಪ್ರಾಯ : ಸಂಚಾರ ದಟ್ಟಣೆ ಶೇ.30, ರಸ್ತೆಗುಂಡಿ ಶೇ.27, ಕಸದ ಸಮಸ್ಯೆ ಶೇ.17, ನೀರು ಸರಬರಾಜು ಶೇ.9, ಪ್ರವಾಹ ಶೇ.6, ಕೆರೆಗಳು ಶೇ.6 ಹಾಗೂ ರಾಜಕಾಲುವೆ ಸಮಸ್ಯೆಗಳ ಬಗ್ಗೆ ಶೇ.5 ಜನರು ಮುಖ್ಯ ಸಮಸ್ಯೆಯಾಗಿ ಗುರುತಿಸಿದ್ದಾರೆ. ಬಿಬಿಎಂಪಿ ಕಸದ ನಿರ್ವಹಣೆಗೆ ಶೇ.11 ಉತ್ತಮ, ಶೇ.38 ಸುಧಾರಿಸಿದೆ ಹಾಗೂ ಶೇ.51 ಜನರು ಕಳಪೆ ನಿರ್ವಹಣೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಸಮೀಕ್ಷೆ ಬಗ್ಗೆ ಜನಾಗ್ರಹ ಸಂಘಟನೆಯ ಶ್ರೀನಿವಾಸ್ ಅಲವಳ್ಳಿ ತಿಳಿಸಿದರು.