Advertisement

“ಮಲ್ಲಯ್ಯನಪುರ ಆದರ್ಶ ವಿದ್ಯಾಲಯಕ್ಕೆ ಮೂಲ ಸೌಲಭ್ಯ’

03:09 PM Sep 05, 2017 | |

ಚಾಮರಾಜನಗರ: ತಾಲೂಕಿನ ಮಲ್ಲಯ್ಯನಪುರದ ಬಳಿ ನೂತನವಾಗಿ ನಿರ್ಮಾಣವಾಗಿರುವ ಆದರ್ಶ ವಿದ್ಯಾಲಯ ಉತ್ತಮ ಪರಿಸರ ಹಾಗೂ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣದಲ್ಲಿದೆ. ಇದಕ್ಕೆ ಸೂಕ್ತ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ತಮ್ಮದಾಗಿದೆ ಎಂದು ಉಡಿಗಾಲ ಜಿಪಂ ಕ್ಷೇತ್ರದ ಸದಸ್ಯೆ ಚಂದ್ರಕಲಾ ತಿಳಿಸಿದರು.

Advertisement

ನಗರದ ಹೊರ ವಲಯದ ಮಲ್ಲಯ್ಯನ ಪುರದ ಬಳಿ ನಿರ್ಮಾಣವಾಗಿರುವ ಆದರ್ಶ ವಿದ್ಯಾಲಯಕ್ಕೆ ಭೇಟಿ ನೀಡಿದ್ದ ಅವರು, ಮಕ್ಕಳ ಕಲಿಕೆ, ಬಿಸಿಯೂಟ ಹಾಗೂ ಅಗತ್ಯ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು ಕೊಂಡರು.

ನಗರದಿಂದ ಸುಮಾರು 2 ಕಿ.ಮೀ. ದೂರದ ಯಡಬೆಟ್ಟದ ತಪ್ಪಲಿನಲ್ಲಿ ಸುಂದರವಾದ ಪರಿಸರದಲ್ಲಿ ಕಟ್ಟಡ ನಿರ್ಮಾಣವಾಗಿದೆ. ಕಟ್ಟಡದ ಸುರಕ್ಷತೆಗೆ ಸುತ್ತುಗೋಡೆ ನಿರ್ಮಾಣ ಸೇರಿದಂತೆ ಅಗತ್ಯ ಸೌಲಭ್ಯವನ್ನು ಕಲ್ಪಿಸುವ ಸಂಬಂಧ ಸಂಸದರು ಹಾಗೂ ಶಾಸಕರಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು. 

ಪೀಠೊಪಕರಣ ಪೂರೈಕೆ: ತಾಲೂಕಿನ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಆಂಗ್ಲ ಮಾಧ್ಯಮ ಶಾಲೆ ಇದಾಗಿದೆ. ಈಗಾಗಲೇ ಸಂಸದರು ಆದರ್ಶ ಶಾಲೆಗಳಿಗೆ ಅಗತ್ಯ ಪೀಠೊಪಕರಣ ನೀಡುವುದಾಗಿ ತಿಳಿಸಿದ್ದು. ಸದ್ಯದಲ್ಲಿಯೇ ಶಾಲೆಗಳಿಗೆ ಪೊರೈಕೆಯಾಗಲಿವೆ ಎಂದು ಹೇಳಿದರು.

ಕ್ರೀಡಾ ಸಾಮಗ್ರಿ ಕೊಡಿಸುತ್ತೇನೆ: ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕಾಗಿ ರಂಗಮಂದಿರ ಅವಶ್ಯಕವಾಗಿದೆ. ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ ರಂಗಮಂದಿರ ನಿರ್ಮಿಸಿ ಕೊಡುವ ಜೊತೆಗೆ ವಿದ್ಯಾರ್ಥಿಗಳು ಕುಳಿತು ಕೊಳ್ಳಲು ಮತ್ತು ಪ್ರಾರ್ಥನೆ ಮಾಡಲು ಟೈಲ್ಸ್‌ ನೆಲಹಾಸು ಅಳವಡಿಸಿಕೊಡುವುದಾಗಿ ತಿಳಿಸಿದ ಚಂದ್ರಕಲಾ, ಕ್ರೀಡಾ ಸಾಮಗ್ರಿಗಳನ್ನು ಯುವ ಜನ ಮತ್ತು ಕ್ರೀಡಾ ಇಲಾಖೆಯಿಂದ ಕೊಡಿಸುವುದಾಗಿ ತಿಳಿಸಿದರು.

Advertisement

ತಾಲೂಕಿನಲ್ಲಿರುವ ಅದರ್ಶ ಶಾಲೆಗೆ ಗ್ರಾಮಾಂತರ ಪ್ರದೇಶದಿಂದ ಹೆಚ್ಚು ಮಕ್ಕಳು ದಾಖಲಾಗಿವೆ. ಮುಂದಿನ ವರ್ಷದಿಂದ ಪದವಿ ಪೂರ್ವ ಕಾಲೇಜು ಆರಂಭವಾಗಲಿದ್ದು, ಶಿಕ್ಷಕರು ಶೇ. 100 ಫ‌ಲಿತಾಂಶ ತಂದುಕೊಡುವ ನಿಟ್ಟಿನಲ್ಲಿ ಪಾಠ ಪ್ರವಚನ ಮಾಡಬೇಕು. ಒಟ್ಟಾರೆ ಶಾಲೆಗೆ ಉತ್ತಮ ಹೆಸರು ತಂದುಕೊಡುವಂತೆ ತಿಳಿಸಿದರು.

ಮುಖ್ಯ ಶಿಕ್ಷಕ ಲಿಂಗರಾಜು ಆದರ್ಶ ಶಾಲೆಯ ಕಟ್ಟಡ ಉತ್ತಮ ವಾತಾವರಣದಲ್ಲಿ ನಿರ್ಮಾಣವಾಗಿದೆ. ಮುಖ್ಯ ರಸ್ತೆಯಿಂದ ಶಾಲೆಗೆ ಬರುವ ಡಾಂಬರೀಕರಣ ರಸ್ತೆ, ಆಟದ ಮೈದಾನ, ಸುತ್ತುಗೋಡೆ ನಿರ್ಮಾಣವಾಗಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next