ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕಿನ ಗರಿ ಪಡೆದಿರುವ ಬನಹಟ್ಟಿ ಬಸ್ ನಿಲ್ದಾಣದ ಶೌಚಾಲಯ ಅಧೋಗತಿ ತಲುಪಿದ್ದು, ಶೌಚಕ್ಕೆ ತೆರಳಿದರೆ ದುರ್ನಾತ ಮೂಗಿಗೆ ರಾಚುತ್ತದೆ. ಹೀಗಾಗಿ ಪ್ರಯಾಣಿಕರು ನಿಲ್ದಾಣದ ಆವರಣದಲ್ಲಿಯೇ ಶೌಚ ಮಾಡುವ ಪರಿಸ್ಥಿತಿ ಬಂದೊದಗಿದೆ.
ಲಾಕ್‌ಡೌನ್ ನಂತರ ಶೌಚಾಲಯ ನಿರ್ವಹಣೆಗೆ ಯಾರೊಬ್ಬರೂ ಇಲ್ಲ. ನಿತ್ಯ ಸಂಚರಿಸುವ ಪ್ರಯಾಣಿಕರು ತೀರ ದುಸ್ಥಿತಿಯಲ್ಲಿ ಆವರಣದೊಳಗೆ ಹೋಗದಂತೆ ಅಸ್ವತ್ಛತೆ ತಾಣ ಇದಾಗಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ತಮಗೇನು ಸಂಬಂಧವಿಲ್ಲವೆಂಬಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಡೆಗೋಡೆ ಇಲ್ಲ: ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಗೆ ಸಂಬಂಧ ರಸ್ತೆ ನಿರ್ಮಾಣ ನಡೆಸುವ ನೆಪದಲ್ಲಿ ಬಸ್ ನಿಲ್ದಾಣದ ತಡೆಗೋಡೆ ಒಡೆದಿದ್ದಲ್ಲದೇ ಕಳೆದೊಂದು ತಿಂಗಳಿಂದ ಇನ್ನೂ ತಡೆಗೋಡೆ ನಿರ್ಮಿಸಿಲ್ಲ. ಇದರಿಂದಾಗಿ ನಿಲ್ದಾಣ ರಾತ್ರಿ ಹೊತ್ತು ನಾಯಿ, ದನ-ಕರು ಹಾಗು ಕತ್ತೆಗಳ ತಾಣವಾಗಿದೆ.
ಅಪಘಾತಕ್ಕೆ ಕಾರಣವಾದ ಸಿಸಿ ರಸ್ತೆ: ಈಚೆಗಷ್ಟೇ ನಿಲ್ದಾಣದ ಆವರಣದೊಳಗೆ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದ್ದು, ಸಂಪೂರ್ಣ ಅವೈಜ್ಞಾನಿಕವಾಗಿದ್ದು ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಅಲ್ಲದೇ ಸಿಸಿ ರಸ್ತೆಯಿಂದಾಗಿ ದ್ವಿಚಕ್ರ ಸವಾರರಿಗೆಅಪಘಾತಗಳಾದ ಘಟನೆಗಳು ನಡೆದಿವೆ. ಪ್ರಯಾಣಿಕರು ಬಸ್‌ನತ್ತ ತೆರಳುವ ಸಂದರ್ಭದಲ್ಲಿ ಜಾರಿ ಬೀಳುವುದೂ ಸಾಮಾನ್ಯವಾಗಿದೆ. ಇವೆಲ್ಲ ಸಮಸ್ಯೆಗಳಿಗೆ ತಕ್ಷಣ ಬಾಗಲಕೋಟೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸೂಕ್ತ ಕ್ರಮ ಜರುಗಿಸುವ ಮೂಲಕ ಬಸ್ ನಿಲ್ದಾಣದಲ್ಲಿರುವ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಮಾಹೇಶ್ವರಿ ಸಮಾಜದ ಹಿರಿಯರಾದ ಮುರಳೀಧರ ಕಾಬರಾ, ಶ್ಯಾಮ ಲೋಯಾ, ತಾತು ಚಿಂಡಕ ಆಗ್ರಹಿಸಿದ್ದಾರೆ.