Advertisement

ನಾರಾಯಣಪುರ ಜಲಾಶಯದಲ್ಲಿ ತಳಕಚ್ಚಿದ ನೀರು

11:27 PM May 10, 2019 | Team Udayavani |

ರಾಯಚೂರು: ವಿಜಯಪುರ ಸೇರಿ ಹೈ-ಕ ಭಾಗದ ಮೂರು ಜಿಲ್ಲೆಗಳ ಜೀವನಾಡಿಯಾಗಿರುವ ನಾರಾಯಣಪುರ ಜಲಾಶಯಕ್ಕೆ ಈ ಬಾರಿ ಭೀಕರ ಬರದ ಬಿಸಿ ತಟ್ಟಿದೆ. ಜಲಾಶಯದಲ್ಲಿ ಈಗ ಡೆಡ್‌ ಸ್ಟೋರೇಜ್‌ ಹೊರತಾಗಿಸಿ ಹೆಚ್ಚುವರಿ ನೀರು ಕೊಂಚವೂ ಇಲ್ಲ.

Advertisement

33.03 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಹೂಳಿನ ಪ್ರಮಾಣ ಸೇರಿ 15 ಟಿಎಂಸಿ ಡೆಡ್‌ ಸ್ಟೋರೇಜ್‌ ಇದೆ. ಈಗ 487 ಅಡಿ ನೀರಿದ್ದು, ಇದೇ ಅಂತಿಮ ಘಟ್ಟ. ಕಳೆದ ಬಾರಿಯೂ ಈ ವೇಳೆಗೆ ಇಷ್ಟೇ ಪ್ರಮಾಣದ ನೀರಿತ್ತು. ಯಾವ ಉದ್ದೇಶಕ್ಕೆ ನೀರು ಬೇಕಾದರೂ ಆಲಮಟ್ಟಿ ಜಲಾಶಯ ಆಡಳಿತ ಮಂಡಳಿಗೆ ಮನವಿ ಮಾಡಬೇಕು.

ಕಲಬುರಗಿ, ವಿಜಯಪುರ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ 6 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ಇಲ್ಲಿಂದ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಈ ವರ್ಷ ಮುಂಗಾರು-ಹಿಂಗಾರು ಕೈ ಕೊಟ್ಟ ಪರಿಣಾಮ ಕೇವಲ ಒಂದು ಬೆಳೆಗೆ ಮಾತ್ರ ನೀರು ಹರಿಸಲಾಗಿದೆ. 8 ವರ್ಷಗಳ ಹಿಂದೆ ಇಂಥ ಧಾರುಣ ಸ್ಥಿತಿ ನಿರ್ಮಾಣವಾಗಿತ್ತು. ಆಗಲೂ ಬೇಸಿಗೆಯಲ್ಲಿ ನೀರಿಗಾಗಿ ಪರಿತಪಿಸಿದ ಸನ್ನಿವೇಶ ಏರ್ಪಟ್ಟಿತ್ತು.

ಆರ್‌ಟಿಪಿಎಸ್‌ಗೆ 4 ಟಿಎಂಸಿ, ಜಿಂದಾಲ್‌, ಹಟ್ಟಿ ಚಿನ್ನದ ಗಣಿಗೆ 2.34 ಟಿಎಂಸಿ ನೀರು ಅಲಾಕೇಶನ್‌ ಇದ್ದು, ಈಗಾಗಲೇ ಅಗತ್ಯಾನುಸಾರ ಹರಿಸಲಾಗಿದೆ. ಆದರೆ, ಕುಡಿಯಲು ಪ್ರತ್ಯೇಕವಾಗಿ ನೀರು ನಿಗದಿ ಮಾಡಿಲ್ಲ. ಕೈಗಾರಿಕೆಗಳಿಗೆ ಹರಿಸುವ ನೀರನ್ನೇ ಕುಡಿಯಲೂ ಬಳಸಿಕೊಳ್ಳಬೇಕಿದೆ.

ಎನ್‌ಆರ್‌ಬಿಸಿಗೆ ಹರಿಸುವ ನೀರನ್ನು ಲಿಂಗಸೂಗೂರು ನಗರ ಜನರ ಕುಡಿಯುವ ನೀರಿಗಾಗಿ ಪೂರೈಸುವ ಕೆರೆಗೆ ತುಂಬಿಸಲಾಗುತ್ತದೆ. ಇದರಿಂದ ಲಿಂಗಸೂಗೂರು ಪಟ್ಟಣದಲ್ಲಿ ಸದ್ಯಕ್ಕೆ ನೀರಿನ ಅಭಾವವಿಲ್ಲ. ಗ್ರಾಮೀಣ ಭಾಗದಲ್ಲಿ ಮಾತ್ರ ಪರಿಸ್ಥಿತಿ ಗಂಭೀರವಾಗಿದೆ. ಖಾಸಗಿ ಬೋರ್‌ವೆಲ್‌, ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ.

Advertisement

ಸುರಪುರದಲ್ಲಿ 64 ಕೆರೆಗಳಿದ್ದರೂ ಯಾವ ಕೆರೆಗಳಿಗೂ ನೀರು ತುಂಬಿಸುವ ಯೋಜನೆಗಳಿಲ್ಲ. ಹೀಗಾಗಿ 15 ದಿನಕ್ಕೊಮ್ಮೆ ನೀರು ಹರಿಸಲಾಗುತ್ತಿದೆ. ಇನ್ನು ಅಲ್ಲಿನ ಶಾಸಕರೇ 4 ಟ್ಯಾಂಕರ್‌ ಮೂಲಕ ಹಳ್ಳಿಗಳಿಗೆ ನೀರು ಪೂರೈಸುತ್ತಿದ್ದಾರೆ. ಕೃಷ್ಣಾ ನದಿ ಪಾತ್ರದ ಊರುಗಳ ಜನ ಕೈಗಾರಿಕೆಗಳಿಗೆ ನೀರು ಹರಿಸಿದಾಗಲೇ ಬಳಸಿಕೊಳ್ಳಬೇಕಿದೆ.

ಇತ್ತೀಚೆಗೆ ವಿಜಯಪುರ ಜಿಲ್ಲೆಯ ಜನರಿಗೆ ಕುಡಿಯಲು 1.5 ಟಿಎಂಸಿ ನೀರು ಕಾಲುವೆ ಮೂಲಕ ಹರಿಸಲಾಗಿದೆ. ಜಿಂದಾಲ್‌ಗೆ ನೀರು ಸಾಗಿಸುವ ಪೈಪ್‌ಲೈನ್‌ನಲ್ಲೇ ಮಾರ್ಗ ಮಧ್ಯೆ 20ಕ್ಕೂ ಅ ಧಿಕ ಹಳ್ಳಿಗಳಿಗೆ ನೀರು ಸಂಪರ್ಕ ನೀಡಿದ್ದು, ಕಾರ್ಖಾನೆಗೆ ಹರಿಸಿದಾಗ ಮಾತ್ರ ನೀರು ಲಭ್ಯವಾಗಲಿದೆ.

ಆರ್‌ಟಿಪಿಎಸ್‌ಗೆ ಇನ್ನೂ 1 ಟಿಎಂಸಿ ನೀರು ಹರಿಸಬೇಕಿದೆ. ಆದರೆ, ಕೇಂದ್ರದಿಂದ ಇನ್ನೂ ಬೇಡಿಕೆ ಸಲ್ಲಿಕೆಯಾಗಿಲ್ಲ. ರಾಯಚೂರು ನಗರದ ಅರ್ಧ ಭಾಗಕ್ಕೆ ತುಂಗಭದ್ರಾ ನದಿಯಿಂದ ನೀರು ಹರಿಸಿದರೆ, ಇನ್ನರ್ಧ ಭಾಗ ಕೃಷ್ಣಾ ನದಿಯಿಂದ ಪೂರೈಸಲಾಗುತ್ತಿದೆ. ಈಗ ನಗರದಲ್ಲಿ 3-4 ದಿನಕ್ಕೊಮ್ಮೆ ನೀರು ಬರುತ್ತಿದ್ದು, ಜನ ಪರದಾಡುತ್ತಿದ್ದಾರೆ. ನಗರಸಭೆ ಕೆಲವೆಡೆ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದೆ.

ಇಲ್ಲೂ ಹೂಳಿನ ಸಮಸ್ಯೆ: ನಾರಾಯಣಪುರ ಜಲಾಶಯಕ್ಕೂ ಹೂಳಿನ ಬಾಧೆ ಶುರುವಾಗಿದೆ. 33.03 ಟಿಎಂಸಿ ಸಾಮರ್ಥ್ಯದ ಈ ಜಲಾಶಯದಲ್ಲಿ ಕನಿಷ್ಠ 4 ಟಿಎಂಸಿ ಹೂಳು ಶೇಖರಣೆ ಆಗಿರಬಹುದು ಎನ್ನಲಾಗುತ್ತಿದೆ. ಜಲಾಶಯಕ್ಕೆ ಶಿಲ್ಟ್ ಗೇಟ್‌ಗಳಿದ್ದು, ಅವುಗಳನ್ನು ಎತ್ತಿದಾಗ ಮುಂಭಾಗದ ಒಂದಷ್ಟು ಹೂಳು ನದಿ ಮೂಲಕ ಹರಿಯುತ್ತದೆ. ಆದರೆ, ಹಿನ್ನೀರಿನಲ್ಲಿ ಸಾಕಷ್ಟು ಹೂಳು ಶೇಖರಣೆಯಾಗುತ್ತಿದೆ. ಪ್ರತಿ 10 ವರ್ಷಕ್ಕೊಮ್ಮೆ ಸರ್ವೇ ಮಾಡಿಸುತ್ತಿದ್ದು, ಈಗ ಎಷ್ಟು ಪ್ರಮಾಣದ ಹೂಳಿದೆ ಎಂದು ಪರಿಶೀಲಿಸಬೇಕಿದೆ ಎನ್ನುತ್ತಾರೆ ಅ ಧಿಕಾರಿಗಳು.

* ಸಿದ್ದಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next