Advertisement

ಪರಿಷತ್‌ನಲ್ಲಿ ಹೊರಟ್ಟಿ ಸಭಾಪತಿ ಸ್ಥಾನಕ್ಕೂ ಕುತ್ತು?

09:15 PM May 15, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸರಕಾರ ಬದಲಾಗುವ ಸನ್ನಿವೇಶದಲ್ಲಿ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸಂಖ್ಯಾಬಲ ಕುಸಿದಿರುವ ಆಧಾರದಲ್ಲಿ ಸಭಾಪತಿ ಹಾಗೂ ಉಪ ಸಭಾಪತಿ ಹುದ್ದೆ ಮೇಲೆ ಕಾಂಗ್ರೆಸ್‌ ಕಣ್ಣಿಟ್ಟಿದೆ.

Advertisement

ವಿಧಾನಸಭೆ ಚುನಾವಣೆಯಲ್ಲಿ ಪಕ್ಷಾಂತರ ಪರಿಣಾಮದಿಂದಾಗಿ ಪರಿಷತ್‌ನಲ್ಲಿ ಬಿಜೆಪಿಯ ಐದು ಸ್ಥಾನ ಕಡಿಮೆಯಾಗಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಜತೆಗೂಡಿದರೆ ಸಭಾಪತಿ-ಉಪ ಸಭಾಪತಿ ಸ್ಥಾನ ಪಡೆಯುವ ಲೆಕ್ಕಾಚಾರಗಳು ಆರಂಭಗೊಂಡಿವೆ.

ಒಂದೊಮ್ಮೆ ಆ ರೀತಿಯಾದರೆ ಬಸವರಾಜ ಹೊರಟ್ಟಿಗೆ ಸಭಾಪತಿ ಸ್ಥಾನ ತಪ್ಪುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
75 ಸಂಖ್ಯಾಬಲದ ವಿಧಾನಪರಿಷತ್‌ನಲ್ಲಿ ಬಿಜೆಪಿ 39 ಸ್ಥಾನ ಹೊಂದಿತ್ತಾದರೂ ಪುಟ್ಟಣ್ಣ, ಬಾಬೂರಾವ್‌ ಚಿಂಚನಸೂರ್‌, ಲಕ್ಷ್ಮಣ ಸವದಿ, ಆರ್‌.ಶಂಕರ್‌, ಆಯನೂರು ಮಂಜುನಾಥ್‌ ರಾಜೀನಾಮೆಯಿಂದ ಬಿಜೆಪಿ ಸಂಖ್ಯಾಬಲ 34ಕ್ಕೆ ಇಳಿದಿದೆ. ಬಿಜೆಪಿಯಿಂದ ನಾಮ ನಿರ್ದೇಶನದಡಿ ನೇಮಕಗೊಂಡಿರುವ ಎಚ್‌.ವಿಶ್ವನಾಥ್‌ ಕಾಂಗ್ರೆಸ್‌ ಜತೆ ಬಹಿರಂಗವಾಗಿಯೇ ಗುರುತಿಸಿಕೊಂಡಿರುವುದರಿಂದ ಬಿಜೆಪಿಯ ಮತ್ತೂಂದು ಸ್ಥಾನ ಕಡಿಮೆಯಾಗಲಿದೆ. ಆಗ ಬಿಜೆಪಿ ಸಂಖ್ಯೆ 33 ಆಗಲಿದೆ.

ಕಾಂಗ್ರೆಸ್‌ 26 ಹಾಗೂ ಜೆಡಿಎಸ್‌ 8 ಸ್ಥಾನ, 1 ಪಕ್ಷೇತರ ಸದಸ್ಯರಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸೇರಿದರೆ 34 ಸಂಖ್ಯಾಬಲ ಆಗಲಿದೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಯಾದರೆ ಸಭಾಪತಿ ಹಾಗೂ ಉಪ ಸಭಾಪತಿ ಹುದ್ದೆ ಪಡೆಯಬಹುದಾದ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Advertisement

ರಾಜೀನಾಮೆ ಸಲ್ಲಿಸಿರುವ ಐವರಲ್ಲಿ ವಿಧಾನಸಭೆಯಿಂದ ಪರಿಷತ್‌ಗೆ ಆಯ್ಕೆಯಾದ ಮೂವರಿದ್ದು, ಆ ಸ್ಥಾನಗಳಿಗೆ ಚುನಾವಣೆ ನಡೆದರೆ ಕಾಂಗ್ರೆಸ್‌ ವಿಧಾನಸಭೆಯಲ್ಲಿ 135 ಜತೆಗೆ ದರ್ಶನ್‌ ಪುಟ್ಟಣ್ಣಯ್ಯ, ಲತಾ ಮಲ್ಲಿಕಾರ್ಜುನ್‌, ಪುಟ್ಟಸ್ವಾಮಿ ಗೌಡ ಅವರ ಬೆಂಬಲ ಇರುವುದರಿಂದ ಎರಡು ಸ್ಥಾನ ಗೆಲ್ಲುವ ಅವಕಾಶ ಇದೆ. ಆಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಂಖ್ಯಾಬಲ 36 ಆಗಲಿದೆ. ಸಭಾಪತಿ ಹುದ್ದೆ ಕಾಂಗ್ರೆಸ್‌, ಉಪ ಸಭಾಪತಿ ಹುದ್ದೆ ಜೆಡಿಎಸ್‌ಗೆ ಎಂಬ ಸೂತ್ರದಡಿ ಮೈತ್ರಿ ಆಗಬಹುದು ಎಂದು ಹೇಳಲಾಗಿದೆ.

ಈ ಹಿಂದೆಯೂ ಸರಕಾರಗಳು ಬದಲಾದ ಸಂದರ್ಭದಲ್ಲಿ ಸಂಖ್ಯಾಬಲ ಏರುಪೇರಾದ ಸಮಯದಲ್ಲಿ ಪರಿಷತ್‌ನಲ್ಲಿ ಸಭಾಪತಿ, ಉಪ ಸಭಾಪತಿ ಹುದ್ದೆ ಆಡಳಿತಾರೂಢ ಪಕ್ಷವೇ ಅಲಂಕರಿಸಿದ ಉದಾಹರಣೆಗಳಿವೆ. ಹೀಗಾಗಿ, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಳ್ಳುವ ಆಸೆ ಚಿಗುರೊಡೆದಿದೆ.

ಗೆದ್ದವರು ಸವದಿ ಒಬ್ಬರೇ
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯಿಂದ ಆಯ್ಕೆಯಾಗಿ ರಾಜೀನಾಮೆ ನೀಡಿ ರಾಜಾಜಿನಗರ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಪುಟ್ಟಣ್ಣ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಮತ್ತೂಂದೆಡೆ ಶಿವಮೊಗ್ಗ ಪದವೀಧರ ಕ್ಷೇತ್ರದಿಂದ ಬಿಜೆಪಿಯಿಂದ ಆಯ್ಕೆಯಾಗಿ ರಾಜೀನಾಮೆ ನೀಡಿ ಶಿವಮೊಗ್ಗ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಆಯನೂರು ಮಂಜುನಾಥ್‌ ಕೂಡ ಸೋತಿದ್ದಾರೆ. ಗುರುಮಿಠಕಲ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಾಬೂರಾವ್‌ ಚಿಂಚನಸೂರ್‌, ರಾಣೆಬೆನ್ನೂರಿನಿಂದ ಸ್ಪರ್ಧಿಸಿದ್ದ ಆರ್‌.ಶಂಕರ್‌ ಕೂಡ ಸೋತಿದ್ದಾರೆ. ಅಥಣಿಯಿಂದ ಲಕ್ಷ್ಮಣ ಸವದಿ ಮಾತ್ರ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next