ಹುಣಸೂರು: ಜಗಜ್ಯೋತಿ, ಭಕ್ತಿ ಭಂಡಾರಿ, ವಿಶ್ವಗುರುಗಳಾದ ಬಸವಣ್ಣನವರು ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರಲು ಬಯಸಿದ, ಜನರಲ್ಲಿ ಜ್ಞಾನದ ದೀವಿಗೆ ಹಚ್ಚಿದ ಮಹಾನ್ ಮಾನವತಾವಾದಿ ಎಂದು ಶಾಸಕ ಎಚ್ ಪಿ ಮಂಜುನಾಥ್ ತಿಳಿಸಿದರು.
ಹುಣಸೂರು ತಾಲೂಕು ಆಡಳಿತದಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಆಯೋಜಿಸಿದ್ದ ಸರಳ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿ ಬಹುದೊಡ್ಡ ಬದಲಾವಣೆಯ ಹೊಸ ಚಿಂತನೆ ರೂಪುಗೊಂಡ ಕಾಲವದು. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ವಿಶಿಷ್ಟವಾದ ಕಾಲಘಟ್ಟವಾಗಿತ್ತು. ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಹಲವು ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿದ್ದ ಈ ಕಾಲದಲ್ಲಿ ವಚನಕಾರರು ತಮ್ಮ ಸರಳ ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸಿದ್ದರು. ಜಾತಿಯ ಹಂಗಿಲ್ಲದೆ ಎಲ್ಲಾ ವರ್ಗದ ವಚನಕಾರರು ವಚನಗಳ ಮೂಲಕ ತಮ್ಮ ಹೊಸ ಚಿಂತನೆಗಳನ್ನು ಕಟ್ಟಿಕೊಡುತ್ತಿದ್ದರು. ಈ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದರು ಎಂದರು.
ಹನ್ನೆರಡನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕರು ಬಸವಣ್ಣನವರು. ಬಸವಣ್ಣನವರ ಸಾರಥ್ಯದಲ್ಲಿ ನಡೆದ ಸುಧಾರಣೆಯ ಪ್ರಯತ್ನ ಒಂದು ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿತ್ತು. ಇವರ ತತ್ವ, ಆದರ್ಶಗಳು, ಚಿಂತನೆಗಳು ಇಂದಿಗೂ ಪ್ರಸ್ತುತ. ಇದು ಜೀವನ ಪಾಠವೂ ಹೌದು. ವಿಶ್ವಗುರು ಬಸವಣ್ಣನವರ ಆದರ್ಶತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಈ ವೇಳೆ ತಹಸಿಲ್ದಾರ್ ಡಾ ಅಶೋಕ್, ಇಒ ಗಿರೀಶ್ ಇದ್ದರು.