ಬೀದರ್: ಬಸವಕಲ್ಯಾಣ ಕ್ಷೇತ್ರಕ್ಕೆ ನಡೆದಿರುವ ಉಪ ಚುನಾವಣೆ ಮತ ಎಣಿಕೆ ರವಿವಾರ ನಗರದ ಬಿ.ವಿ ಭೂಮರೆಡ್ಡಿ ಮಹಾವಿದ್ಯಾಲಯದಲ್ಲಿ ಆರಂಭವಾಗಿದೆ. ಕೋವಿಡ್ ಮಾರ್ಗಸೂಚಿ, ಬಿಗಿ ಭದ್ರತೆ ನಡುವೆ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ಸಿಲ್ ತೆರೆದು ಇವಿಎಂ ಯಂತ್ರಗಳನ್ನು ಎಣಿಕೆ ಕೊಠಡಿಗೆ ಕೊಂಡೊಯ್ಯಲಾಯಿತು. ಆರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ.
ಬೆಳಗ್ಗೆ 8ರಿಂದ ಮೂರು ಕೌಂಟಿಂಗ್ ಹಾಲ್ ನಲ್ಲಿ ಮತ ಎಣಿಕೆಯು ಪ್ರಕ್ರಿಯೆ ನಡೆಸಲಾಗುತ್ತಿದ್ದು, ಪ್ರತಿ ಕೌಂಟಿಂಗ್ ಹಾಲ್ ನಲ್ಲಿ ತಲಾ ನಾಲ್ಕು ಟೇಬಲ್‌ಗಳನ್ನು ಅಳವಡಿಸಲಾಗಿದೆ. ಒಟ್ಟು 28 ಸುತ್ತುಗಳಲ್ಲಿ ಎಣಿಕೆ ಜರುಗಲಿದೆ.
ಮತ ಎಣಿಕೆ ಕಾರ್ಯಕ್ಕೆ ತಲಾ 20 ಸೂಪರ್ ವೈಸರಗಳು, ಮೈಕ್ರೋ ವೀಕ್ಷಕರು ಮತ್ತು ಅಸಿಸ್ಟಂಟ್ ನೇಮಿಸಲಾಗಿದೆ. ಈ ಕಾರ್ಯದ ಮೇಲೆ ನಿಗಾ ಇಡಲು ಇಬ್ಬರು ಕೌಂಟಿಂಗ್ ವಿಕ್ಷಕರು ಕೂಡ ಆಗಮಿಸಿದ್ದಾರೆ.
ಮತ ಏಣಿಕೆ ಕೆಂದ್ರಕ್ಕೆ ಎಲ್ಲಾ ಅಭ್ಯರ್ಥಿ, ಅಭ್ಯರ್ಥಿ ಏಜೆಂಟ್ ಗಳು 7 ಗಂಟೆಯ ಒಳಗಾಗಿ ಆಗಮಿಸಿದ್ದು, ಕೋವಿಡ್ ವರದಿ ನೆಗೆಟಿವ್ ಇದ್ದವರಿಗೆ ಮಾತ್ರ ಎಣಿಕೆ ಕೇಂದ್ರದ ಒಳಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಮಾಸ್ಕ್, ಎನ್ 95 ಮಾಸ್ಕ್ ಧರಿಸುವಂತೆ ಎಲ್ಲರಿಗೂ ಸೂಚಿಸಲಾಗುತ್ತಿದೆ. ಮತ ಎಣಿಕೆ ಕೇಂದ್ರದ ಸುತ್ತಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.