Advertisement

ಕರ್ನಾಟಕದತ್ತ ಬರಲಿದ್ದಾರೆ ಬಿಜೆಪಿ ಟ್ವಿನ್‌ ಬ್ರದರ್‌

03:45 AM Mar 09, 2017 | |

ಬೆಂಗಳೂರು: ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ “ಟ್ವಿನ್‌’ ಬದ್ರರ್ ಕರ್ನಾಟಕದತ್ತ ಬರಲಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ.

Advertisement

ಬಿಜೆಪಿಯವರಿಗೆ  ದಕ್ಷಿಣ ಭಾರತದಲ್ಲಿ ಕರ್ನಾಟಕ ಹೆಬ್ಟಾಗಿಲು, ಮೊದಲ ಬಾರಿಗೆ ಅಧಿಕಾರ ಹಿಡಿದ ಅವರು ಮತ್ತೂಮ್ಮೆ ಇಲ್ಲಿ ಅಧಿಕಾರ ಹಿಡಿಯಲು ಮೋದಿ -ಅಮಿತ್‌ ಶಾ ಜೋಡಿ  ಮುಂದಾಗಲಿದೆ. ಅದಕ್ಕೆ ಪೂರ್ವಬಾವಿಯಾಗಿ ರಾಜ್ಯದಲ್ಲಿ ವಿದ್ಯಮಾನಗಳು ನಡೆಯುತ್ತಿವೆ.  ಬಿಜೆಪಿಯವರು ಸಮಸ್ಯೆ ಸೃಷ್ಟಿಸುವಲ್ಲೂ ನಿಪುಣರು, ಬೇರೆ ಪಕ್ಷಗಳ ನಾಯಕರನ್ನು ಆಪರೇಷನ್‌  ಮಾಡುವುದರಲ್ಲೂ ಚಾಣಕ್ಯರು ಎಂದು ಹೇಳಿದ್ದಾರೆ.

ಬೆಂಗಳೂರು ಪ್ರಸ್‌ಕ್ಲಬ್‌ ಹಾಗೂ ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರದಿದ್ದರೆ ದೇಶದ ರಾಜಕೀಯ ಚಿತ್ರಣ ಬದಲಾಗಲಿದೆ. ನಮ್ಮಂತ ಪ್ರಾದೇಶಿಕ ಪಕ್ಷಗಳ ಭವಿಷ್ಯವೂ ನಿರ್ಣಯವಾಗಲಿದೆ ಎಂದು ತಿಳಿಸಿದರು.

ಎಸ್‌.ಎಂ.ಕೃಷ್ಣ ಪ್ರಬುದ್ಧ ರಾಜಕಾರಣಿ, ನೋಲು-ನಲಿವು ಕಂಡಿರುವ ಹಿರಿಯರು, ಅವರು ಯಾವ ಪಕ್ಷಕ್ಕೆ ಸೇರಿ¤àನಿ ಅಂತ ಇನ್ನೂ ಹೇಳಿಲ್ಲ, ಹೇಳಿದ ಮೇಲೆ ನೋಡೋಣ. ಬೇರೆ ಬೇರೆ ಪಕ್ಷಗಳಿಂದ ನಾಯಕರನ್ನು ಸೆಳೆಯೋದು ಬಿಜೆಪಿಗೆ ಹೊಸದಲ್ಲ, ಆದರೆ ಅದು ಹೆಚ್ಚು ದಿನ ನಡೆಯೋಲ್ಲ ಎಂದು ತಿಳಿಸಿದರು.

ಬಿಜೆಪಿಯವರ ಕಥೆ ನನಗೆ ಗೊತ್ತಿಲ್ಲದೇನೂ ಅಲ್ಲ. ರಾಜಶೇಖರ ಮೂರ್ತಿ ಅವರನ್ನು ವಿಮಾನ ನಿಲ್ದಾಣದಿಂದ ಮೆರವಣಿಗೆಯಲ್ಲಿ ಕರೆತಂದು ಏನು ಮಾಡಿದರು, ಮೈಸೂರಲ್ಲಿ ಟಿಕೆಟ್‌ ಕೊಡುವ ವಿಚಾರದಲ್ಲೂ ಸಲಹೆ ಪಡೆಯಲಿಲ್ಲ. ಇನ್ನು ವಿಧಾನಸಭೆಯಲ್ಲಿ 79 ಸೀಟು ಪಡೆಯಲು ಕಾರಣರಾದ ಬಂಗಾರಪ್ಪ ಅವರನ್ನು ಎಷ್ಟು ದಿನ ಪಕ್ಷದಲ್ಲಿರಿಸಿಕೊಂಡಿದ್ದರು ಎಂದು ಪಶ್ನಿಸಿದರು.

Advertisement

ಎಚ್‌.ಡಿ.ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯಾಗಿ ಮಾಡಿ ಮೂರು ತಿಂಗಳಲ್ಲಿ 150 ಕೋಟಿ ರೂ. ಲಂಚ ಪ್ರಕರಣ ಹೊರೆಸಿ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಮುಗಿಬಿದ್ದಾಗ ಉಪ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಸದನಕ್ಕೆ ಬರಲೋ ಬೇಡವೋ ಎಂದು ಇಣುಕಿ ನೋಡಿದವರು ಎಂದು ಲೇವಡಿ ಮಾಡಿದರು.

ನರೇಂದ್ರಮೋದಿ ಅವರನ್ನು ಬಿಜೆಪಿಯೂ ಗುರುತಿಸಲಿಲ್ಲ, ಆರ್‌ಎಸ್‌ಎಸ್‌ ಸಹ ಗುರುತಿಸಲಿಲ್ಲ. ಅವರನ್ನು ಗುರುತಿಸಿದ್ದು ಗುಜರಾಜ್‌ನ ಐವರು ಕಾರ್ಪೋರೇಟ್‌ ಧಣಿಗಳು. ಮೋದಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿ ತಮ್ಮ ಕಾರ್ಯಸಾಧನೆಗೆ ಆ ಕಾರ್ಪೋರೇಟ್‌ ಧಣಿಗಳು ಮೋದಿಯನ್ನು ಬೆಳೆಸಿದವು. ಅದಕ್ಕೆ ಆ ನಂತರ ಆರ್‌ಎಸ್‌ಎಸ್‌, ಬಿಜೆಪಿ ಸಹಮತವೂ ದೊರಕುವಂತೆ ಮಾಡಲಾಯಿತು ಎಂದು ಹೇಳಿದರು.

ನರೇಂದ್ರ ಮೋದಿ ಸಮಯಕ್ಕೆ ತಕ್ಕಂತೆ ಮಾತನಾಡಬಲ್ಲರು. ಮಾತನಾಡುವ ಕಲೆ ಅವರಿಗೆ ಸಿದ್ಧಿಸಿದೆ. ಬಿಜೆಪಿಯಲ್ಲಿ ಎತ್ತರದ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ನಾನು ನೋಡಿದ್ದೇನೆ. ಅವರ ವ್ಯಕ್ತಿತ್ವವೇ ಬೇರೆ, ಮೋದಿ ವ್ಯಕ್ತಿತ್ವವೇ ಬೇರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿ ಆಯ್ಕೆ ಮಾಡಿಕೊಂಡ ಮೋದಿ ಎರಡೂ ಮುಕ್ಕಾಲು ವರ್ಷದಲ್ಲಿ ಅಲ್ಲಿನ ಅಭಿವೃದ್ಧಿಗೆ ಶ್ರಮಿಸಿದ್ದರೆ ಮೂರು ದಿನ ರೋಡ್‌ ಶೋ ನಡೆಸಬೇಕಿತ್ತೇ ಎಂದರು.

ರೋಡ್‌ಶೋಗೆ ಜನರನ್ನು ಕರೆತರುವುದು ದೊಡ್ಡದಲ್ಲ, ಆ ಕ್ಷೇತ್ರದಿಂದಲೂ ಬರಬಹುದು, ನೆರೆಯ ಕ್ಷೇತ್ರದಿಂದಲೂ ಬರಬಹುದು. ನಾನೂ ದೇಶ ಆಳಿದವನು, ನನಗೆ ಎಲ್ಲವೂ ಗೊತ್ತಾಗುತ್ತದೆ ಎಂದು ಸೂಕ್ಷ್ಮವಾಗಿ ನುಡಿದರು.

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಹತ್ತು ವರ್ಷಗಳ ಕಾಲ ನಡೆಸಿದ ಆಡಳಿತದ ಬಗ್ಗೆ ಜನರಲ್ಲಿ ಸಿಟ್ಟು ಆಕ್ರೋಶವಿತ್ತು. ಹೀಗಾಗಿ, ಬಿಜೆಪಿಯನ್ನು ಬೆಂಬಲಿಸಿದರು. ಆದರೆ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಮಾಡಿದ್ದೇನು? ನೋಟು ಅಮಾನ್ಯದಿಂದ ಭ್ರಷ್ಟಾಚಾರ ಕಡಿಮೆಯಾಯ್ತಾ? ಜನಸಾಮಾನ್ಯರು ಅನುಭವಿಸಿದ ಕಷ್ಟ -ನಷ್ಟ ಎಷ್ಟು ಎಂಬುದರ ಬಗ್ಗೆಯೂ ಚರ್ಚೆಯಾಗಬೇಕಲ್ಲವೇ? ಎಂದು ಹೇಳಿದರು.

ದೇಶದಲ್ಲಿ ನಾಲ್ಕು ದಶಕ ಕೇಂದ್ರದಿಂದ ಹಿಡಿದು ಎಲ್ಲ ರಾಜ್ಯಗಳಲ್ಲಿ ಅಧಿಕಾರ ನಡೆಸಿದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ನ ಶಕ್ತಿ ಕುಸಿದಿದೆ. ಕರ್ನಾಟಕದಲ್ಲಿ ಒಂದಷ್ಟು ಪ್ರಬಲವಾಗಿರುವುದು ಬಿಟ್ಟರೆ ಬೇರೆಲ್ಲೂ ಆ  ಪಕ್ಷದ ಶಕ್ತಿ ಇಲ್ಲ. ಪಾರ್ಲಿಮೆಂಟ್‌ನಲ್ಲೂ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವೂ ಸಿಕ್ಕಿಲ್ಲ. ತೃತೀಯ ರಂಗದ ಪ್ರಯತ್ನಗಳೂ ನಡೆದು ವಿಫ‌ಲವಾಗಿವೆ.  ನಾನು ದೆಹಲಿ ರಾಜಕಾರಣಕ್ಕೆ ಬರುವುದಿಲ್ಲ, ಪ್ರಾದೇಶಿಕ ಪಕ್ಷ ಬಲಪಡಿಸುವುದೇ ನನ್ನ ಗುರಿ, ಕರ್ನಾಟಕವೇ ನನ್ನ ಕರ್ಮಭೂಮಿ ಎಂದು ಹೇಳಿ ಬಂದಿದ್ದೇನೆ ಎಂದು ತಿಳಿಸಿದರು.

ಹೈಕಮಾಂಡ್‌ ಸಂಸ್ಕೃತಿ ಇರುವ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳಿಂದ ರಾಜ್ಯದ ಹಿತಾಸಕ್ತಿ ಕಾಪಾಡಲು ಸಾಧ್ಯವೇ ಇಲ್ಲ. ರಾಜ್ಯದ ಬಗ್ಗೆ ಪ್ರಾಮಾಣಿಕ ಕಾಳಜಿ ಹೊಂದಿರುವ  ಏಕೈಕ ಪ್ರಾದೇಶಿಕ ಪಕ್ಷ ಜೆಡಿಎಸ್‌ ಎಂದು ಪ್ರತಿಪಾದಿಸಿದರು.ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಲಿ 33 ಶಾಸಕರಿಗೂ ಟಿಕೆಟ್‌ ನೀಡಲಾಗುವುದು. ಆದಷ್ಟು ಬೇಗ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಲಾಗುವುದು. ಕುಮಾರಸ್ವಾಮಿಯವರಿಗೆ ಪಟ್ಟಿ ಬಿಡುಗಡೆ ಮಾಡುವ ಆತುರ. ಆದರೆ, ನಾನು ರಾಜಕೀಯದಲ್ಲಿ ಆಳವಾದ ಅನುಭವ ಇರುವವನು. ಕಾದು ನೋಡಬೇಕಲ್ಲ ಎಂದು ಹೇಳಿದರು.

ಪ್ರಾದೇಶಿಕ ಪಕ್ಷಗಳು ಜಾತಿ ರಾಜಕಾರಣದಿಂದ ಶಕ್ತಿ ಕಳೆದುಕೊಳ್ಳುತ್ತಿವೆ ಎಂಬ ಪ್ರಶ್ನೆಗೆ,  ಜಾತಿ ರಾಜಕಾರಣ ಮಾಡಿದ್ದರೆ 115 ಸ್ಥಾನ ಜನತಾದಳಕ್ಕೆ ಬರುತ್ತಿಲಿಲ್ಲ. ಇತ್ತೀಚೆಗೆ ನಡೆದ ವಿಧಾನಪರಿಷತ್‌ ಚುನಾವಣೆಯಲ್ಲಿ ರಮೇಶ್‌ಬಾಬು ಗೆಲ್ಲುತ್ತಿರಲಿಲ್ಲ ಎಂದು ತಿಳಿಸಿದರು.

ವಿಧಾನಸಭೆಯಿಂದ ಹಿಡಿದು ಸಂಸತ್‌ವರೆಗೂ ರಾಜಕಾರಣದಲ್ಲಿ ಮೌಲ್ಯಗಳು ಇಂದು ತೀರಾ ಕುಸಿದಿವೆ.  ಕಾರ್ಯಾಂಗ, ನ್ಯಾಯಾಂಗವೂ ನಂಬಿಕೆ ಉಳಿಸಿಕೊಂಡಿಲ್ಲ. 1952 ರಿಂದ ರಾಜಕೀಯ, ಆಡಳಿತ ನೋಡಿರುವ ನನಗೆ ಇವತ್ತಿನ ಪರಿಸ್ಥಿತಿ ತೀವ್ರ ನೋವು ತಂದಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಎಚ್‌.ಡಿ.ದೇವೇಗೌಡರಿಗೆ ಪ್ರಸ್‌ಕ್ಲಬ್‌ನ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸಿದ್ದರಾಜು, ಪ್ರಸ್‌ಕ್ಲಬ್‌ ಅಧ್ಯಕ್ಷ ಶ್ರೀಧರ್‌, ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್‌, ವರದಿಗಾರರ ಕೂಟದ ಚಂದ್ರಶೇಖರ್‌ ಉಪಸ್ಥಿತರಿದ್ದರು.

ಭವಾನಿ ರೇವಣ್ಣ ಸ್ಪರ್ಧೆ ಇಲ್ಲ
*ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಭವಾನಿ ರೇವಣ್ಣ ಸ್ಪರ್ಧಿಸುವುದಿಲ್ಲ. ಎಚ್‌.ಡಿ.ಕುಮಾರಸ್ವಾಮಿ ಹಾಗೂ ಎಚ್‌.ಡಿ.ರೇವಣ್ಣ ಮಾತ್ರ ಸ್ಪರ್ಧೆ ಮಾಡ್ತಾರೆ. ನಮ್ಮ ಕುಟುಂಬದಲ್ಲಿ ನಾಯಕತ್ವ ವಿಚಾರದಲ್ಲಿ ಯಾವುದೇ ಕಲಹ ಇಲ್ಲ. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ನಾನು ಘೋಷಿಸಿದ್ದಲ್ಲ, ರಾಜ್ಯದ ಜನತೆ ತೀರ್ಮಾನಿಸಿರುವುದು. ಅವರ ನಾಯಕತ್ವಕ್ಕೆ ರೇವಣ್ಣ ಅವರದು ಗುಲಗಂಜಿಯಷ್ಟೂ ವಿರೋಧವಿಲ್ಲ.

– ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

ಸಿದ್ದರಾಮಯ್ಯ ಓಲ್ಡ್‌ ಫ್ರೆಂಡ್‌
*ಸಿದ್ದರಾಮಯ್ಯ ವಾಸ್‌ ಮೈ ಓಲ್ಡ್‌ ಫ್ರೆಂಡ್‌, ಅವರ ಸರ್ಕಾರದ ಸಾಧನೆ ಬಗ್ಗೆ ಅಂಕ ಕೊಡಲು ನಾನ್ಯಾರು?  ಐ ಡೋಂಟ್‌ ಕಾಮೆಂಟ್‌ ಆನ್‌ ದಟ್‌ ಪ್ಲೀಸ್‌. ಸಿದ್ದರಾಮಯ್ಯ ಸರ್ಕಾರದ  ನಾಲ್ಕು ವರ್ಷಗಳ ಆಡಳಿತ ಕುರಿತು ಮಾಧ್ಯದವರು ಪ್ರಶ್ನಿಸಿದಾಗ ದೇವೇಗೌಡರು ಚುಟುಕಾಗಿ ಉತ್ತರಿಸಿದರು. ಸಂವಾದದಲ್ಲಿ ಬಿಜೆಪಿ, ನರೇಂದ್ರಮೋದಿ, ಕೇಂದ್ರ ಸರ್ಕಾರದ ವಿರುದ್ಧವೇ ಹೆಚ್ಚಾಗಿ ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next