ಬಂಟ್ವಾಳ: ಬಂಟ್ವಾಳ- ಮೂಡುಬಿದಿರೆ ರಸ್ತೆಯ ವಿದ್ಯಾಗಿರಿಯಲ್ಲಿ ಪ್ರಯಾಣಿಕರ ತಂಗುದಾಣವಿಲ್ಲದೆ ವಿದ್ಯಾರ್ಥಿಗಳು ರಸ್ತೆ ಬದಿಯಲ್ಲೇ ಬಸ್ಸಿಗೆ ಕಾಯುವ ಸ್ಥಿತಿ ಇದ್ದು, ಇದೀಗ ಬಂಟ್ವಾಳದ ಉದ್ಯಮಿಯೊಬ್ಬರ ಕೊಡುಗೆಯ ತಂಗುದಾಣದ ಕಾಮಗಾರಿ ಪೂರ್ಣಗೊಂಡು ಉಪಯೋಗಕ್ಕೆ ಸಿದ್ಧಗೊಂಡಿದೆ.
ಬಂಟ್ವಾಳದಲ್ಲಿ ಫರ್ನೀಚರ್ ಉದ್ಯಮ ನಡೆಸುತ್ತಿರುವ ನಾಗೇಶ್ ಸಾಲ್ಯಾನ್ ಕಳೆದ ಜೂನ್ ತಿಂಗಳಲ್ಲಿ ತಂಗುದಾಣ ನಿರ್ಮಾಣದ ಕಾರ್ಯವನ್ನು ಕೈಗೆತ್ತಿಕೊಂಡಿದ್ದರು. ತಂಗುದಾಣಕ್ಕೆ ತಗಲುವ ವೆಚ್ಚದ ಕುರಿತು ಅಲೋಚನೆ ಮಾಡದೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಉತ್ತಮ ರೀತಿಯಲ್ಲಿ ಮಾಡುವಂತೆ ಎಂಜಿನಿಯರ್ ಸೂಚನೆ ನೀಡಿರುವುದಾಗಿ ಸ್ವತಃ ಹೇಳಿಕೊಂಡಿದ್ದರು.
ಈ ಹಿಂದೆ ಇಲ್ಲಿದ್ದ ತಂಗುದಾಣಕ್ಕೆ ಮರ ಬಿದ್ದು ನಾಶವಾಗಿತ್ತು. ಹೀಗಾಗಿ ಸ್ಥಳೀಯ ವಿದ್ಯಾಸಂಸ್ಥೆಗಳ ನೂರಾರು ವಿದ್ಯಾರ್ಥಿಗಳು ಮಳೆ- ಬಿಸಿಲಿನ ಸಂದರ್ಭ ರಸ್ತೆ ಬದಿಯಲ್ಲೇ ನಿಂತು ಬಸ್ ಕಾಯಬೇಕಾದ ಸ್ಥಿತಿ ಉಂಟಾಗಿತ್ತು. ವಿದ್ಯಾಗಿರಿಯಿಂದ ಬಿ.ಸಿ. ರೋಡು ಹಾಗೂ ಸಿದ್ದಕಟ್ಟೆ ಎರಡೂ ಭಾಗಕ್ಕೂ ತೆರಳುವ ವಿದ್ಯಾರ್ಥಿಗಳು ಕೂಡ ಬಸ್ಸಿಗಾಗಿ ರಸ್ತೆ ಬದಿಯಲ್ಲೇ ಕಾಯುತ್ತಿದ್ದರು.
ವಿದ್ಯಾಗಿರಿ ಪ್ರದೇಶವು ಬಂಟ್ವಾಳ ಪುರಸಭೆ ಹಾಗೂ ಅಮ್ಟಾಡಿ ಗ್ರಾ.ಪಂ.ನ ಗಡಿ ಪ್ರದೇಶವಾಗಿದ್ದು, ಎರಡೂ ಸ್ಥಳೀಯ ಸಂಸ್ಥೆಗಳಲ್ಲಿ ತಂಗುದಾಣ ನಿರ್ಮಾಣಕ್ಕೆ ಅನುದಾನವಿರಲಿಲ್ಲ. ಪುರಸಭಾ ಸದಸ್ಯ ಗಂಗಾಧರ ಪೂಜಾರಿ ತಂಗುದಾಣ ನಿರ್ಮಾಣಕ್ಕೆ ಸಹಕಾರ ನೀಡುವ ಕುರಿತು ಪ್ರಯತ್ನ ಪಟ್ಟಿದ್ದರು. ಅದರಂತೆ ನಾಗೇಶ್ ಸಾಲ್ಯಾನ್ ತಂಗುದಾಣ ನಿರ್ಮಿಸಿ ಕೊಡಲು ಮುಂದೆ ಬಂದಿದ್ದರು.
ಸುದಿನ ಬೆಳಕು ಚೆಲ್ಲಿತ್ತು
ವಿದ್ಯಾಗಿರಿಯಲ್ಲಿ ತಂಗುದಾಣವಿಲ್ಲದೆ ವಿದ್ಯಾರ್ಥಿಗಳು ಮಳೆ- ಬಿಸಿಲಿನಲ್ಲೇ ಬಸ್ಸಿಗೆ ಕಾಯುವ ಕುರಿತು ಉದಯವಾಣಿ ಸುದಿನದಲ್ಲಿ ಮೇ 31ರಂದು ತಂಗುದಾಣವಿಲ್ಲದೆ ರಸ್ತೆ ಬದಿಯಲ್ಲೇ ಬಸ್ಸಿಗೆ ಕಾಯಬೇಕಾದ ಸ್ಥಿತಿ ಎಂಬ ಶೀರ್ಷಿಕೆಯಲ್ಲಿ ಕಾಳಜಿ ವರದಿ ಪ್ರಕಟಿಸಲಾಗಿತ್ತು. ಬಳಿಕ ತಂಗುದಾಣ ನಿರ್ಮಾಣಕ್ಕೆ ಉದ್ಯಮಿ ನಾಗೇಶ್ ಸಾಲ್ಯಾನ್ ಅವರು ಮುಂದೆ ಬಂದಿರುವ ಕುರಿತು ಕೂಡ ವರದಿ ಪ್ರಕಟಿಸಲಾಗಿತ್ತು.