Advertisement

ಬಂಟ್ವಾಳ ಪುರಸಭೆ ಚುನಾವಣೆ: ಶಾಂತಿಯುತ ಮತದಾನ 

12:56 PM Sep 01, 2018 | |

ಬಂಟ್ವಾಳ : ಬಂಟ್ವಾಳ ಪುರಸಭೆ ಚುನಾವಣೆ ಮತದಾನ ಯಾವುದೇ ಅಹಿತಕರ ಘಟನೆಗಳು ಇಲ್ಲದೆ ಶಾಂತವಾಗಿ ನಡೆದಿದೆ. ಶುಕ್ರವಾರ ಬೆಳಗ್ಗೆ 7ಕ್ಕೆ ಆರಂಭಗೊಂಡಿದ್ದು, ಎಲ್ಲಿಯೂ ಇವಿಎಂ ಯಂತ್ರ ಕೈಕೊಟ್ಟ ಘಟನೆ ಸಂಭವಿಸಿಲ್ಲ. ಎಲ್ಲ 27 ವಾರ್ಡ್‌ಗಳಲ್ಲಿ ಬೆಳಗ್ಗೆ ಸರತಿ ಸಾಲು ಕಂಡುಬಂದಿತ್ತು. ಪಾಣೆಮಂಗಳೂರು, ಬಿ. ಮೂಡ, ಬಿ. ಕಸ್ಬಾ , ಅಗ್ರಾರ್‌ ಸಹಿತ ವಿವಿಧ ಮತಗಟ್ಟೆಗಳಲ್ಲಿ ಪಕ್ಷಗಳು ಕಾರ್ಯಕರ್ತರಿಗೆ ಊಟೋಪಚಾರ ವ್ಯವಸ್ಥೆ ಮಾಡಲಾಗಿತ್ತು.

Advertisement

ಬಿಗು ಬಂದೊಬಸ್ತು
ಪೊಲೀಸರು ಬಿಗು ಬಂದೋಬಸ್ತು ಮಾಡಿದ್ದರು. ಅತೀ ಸೂಕ್ಷ್ಮ  ಮತಗಟ್ಟೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪರ್ಲಿಯಾ ಮತಗಟ್ಟೆಯಲ್ಲಿ ಮತದಾರರನ್ನು ವಾಹನದಲ್ಲಿ ಕರೆದು ತರುತ್ತಿರುವ ಬಗ್ಗೆ, ಮತಚೀಟಿ ನೀಡುವ ಬಗ್ಗೆ ಕಾರ್ಯಕರ್ತರೊಳಗೆ ಮಾತಿನ ಚಕಮಕಿ ಸಂಭವಿಸಿತು. ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಯಾವುದೇ ಅಹಿತಕರ ಘಟನೆ ಆಗದಂತೆ ಎಚ್ಚರಿಕೆ ವಹಿಸಿದರು. ಇದೇ ಮತಗಟ್ಟೆಯಲ್ಲಿ ಮತ ಚಲಾವಣೆಗೆ ಬಂದ ವ್ಯಕ್ತಿಯೊಬ್ಬರು ನಿರ್ದಿಷ್ಟ ಅಭ್ಯರ್ಥಿಯೊಬ್ಬರಿಗೆ ಮತ ಚಲಾಯಿಸುವಂತೆ ಬೂತ್‌ ಹತ್ತಿರವೇ ಪ್ರಚಾರ ನಡೆಸಿದ್ದು, ಪೊಲೀಸರು ಆ ವ್ಯಕ್ತಿಯನ್ನು ಬಳಿಕ ಸ್ಥಳದಿಂದ ತೆರಳುವಂತೆ ಕ್ರಮ ಕೈಗೊಂಡರು.

ಸಂಚಾರ ಅಡಚಣೆ
ಅಜ್ಜಿಬೆಟ್ಟು ಮತಗಟ್ಟೆಗೆ ಸಂಪರ್ಕಿಸುವ ರಸ್ತೆಯಲ್ಲಿ ಮತದಾನಕ್ಕೆ ಬಂದವರ ವಾಹನಗಳಿಂದ ಸಂಚಾರ ಅಡಚಣೆ ಉಂಟಾಯಿತು. ಸಾರ್ವಜನಿಕರೇ ಪರಸ್ಪರ ಸಹಕರಿಸಿ ಸಂಚಾರ ಸುವ್ಯವಸ್ಥೆ ಮಾಡಿಕೊಟ್ಟರು. ಬಹುತೇಕ ಬೂತ್‌ನಲ್ಲಿಯೂ ಅಭ್ಯರ್ಥಿಗಳು ಪರಸ್ಪರ ಒಟ್ಟಿಗೆ ಇದ್ದುಕೊಂಡು ಮತ ಚಲಾಯಿಸುವಂತೆ ಮತದಾರರಲ್ಲಿ ವಿನಂತಿಸುತ್ತಿದ್ದುದು ಕಂಡುಬಂತು.

ಡಿಸಿ ಭೇಟಿ
ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಸಾಮಾನ್ಯ ವೀಕ್ಷಕ ಬಾಲಚಂದ್ರ (ಖರ್ಚುವೆಚ್ಚ ವಿಭಾಗ), ಸಹಾಯಕ ಆಯುಕ್ತ ರವಿಚಂದ್ರ ನಾಯಕ್‌ ಪುರಸಭೆ ವ್ಯಾಪ್ತಿಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next