Advertisement

Bantwal: ಕಂಬಳದ ತೆರೆಮರೆ ಹೀರೊಗಳ ದಾಖಲೀಕರಣ

02:49 PM Dec 29, 2024 | Team Udayavani |

ಬಂಟ್ವಾಳ: ತುಳುನಾಡಿನ ಜನಪದೀಯ ಕ್ರೀಡೆಯಾಗಿರುವ ಕಂಬಳವನ್ನು ಆನಂದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಕಂಬಳದ ವಿಶೇಷತೆಗಳನ್ನು ದಾಖಲಿಸುವುದು, ಕೋಣಗಳು, ಯಜಮಾನರು, ಕಂಬಳದ ಹಿಂದೆ ತೆರೆಮರೆಯಲ್ಲಿ ದುಡಿಯುವವರ ಬಗ್ಗೆ ಮಾಹಿತಿಗಳ ದಾಖಲೀಕರಣ ವಿರಳ. ಈ ನಿಟ್ಟಿನಲ್ಲಿ ಬಂಟ್ವಾಳದ ವಾಮದಪದವಿನ ರಮ್ಯಾ ನಿತ್ಯಾನಂದ ಶೆಟ್ಟಿ ಅವರು ವಿನೂತನ ಪ್ರಯೋಗ ನಡೆಸಿದ್ದಾರೆ.

Advertisement

ಆರಂಭದಲ್ಲಿ ಕಂಬಳದ ಛಾಯಾಚಿತ್ರ ತೆಗೆಯುವ ಹವ್ಯಾಸದೊಂದಿಗೆ ಆರಂಭಗೊಂಡ ದಾಖಲೀಕರಣ, ಬಳಿಕ ವೀಡಿಯೊಗಳಾಗಿ ಮತ್ತು ಇದೀಗ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಕಂಬಳಕ್ಕಾಗಿ ದುಡಿಯುವವರನ್ನು ಪರಿಚಯಿಸುವ ಕಂಬಳ ಲೋಕ-ಕಂಬಳ ಸಾಧಕರ ಯಶೋಗಾಥೆ ಎಂಬ ಪುಸ್ತಕ ಇದೀಗ ಬಿಡುಗಡೆಗೆ ಸಜ್ಜಾಗಿದೆ.

ವಾಮದಪದವು ಸಮೀಪದ ಎಲಿಯನಡುಗೋಡು ಗ್ರಾಮ ನಿವಾಸಿ ನಿತ್ಯಾನಂದ ಶೆಟ್ಟಿ ಅವರ ಪತ್ನಿಯಾಗಿರುವ ರಮ್ಯಾ ನಿತ್ಯಾನಂದ ಶೆಟ್ಟಿ ಅವರಿಗೆ ಕಂಬಳ ಲೋಕದ ಅದ್ಭುತಗಳ ಅರಿವಾಗಿದ್ದೇ ಮದುವೆಯಾದ ನಂತರ. ಮೊದಲ ಬಾರಿಗೆ ಹೊಕ್ಕಾಡಿಗೋಳಿ ಕಂಬಳಕ್ಕೆ ಸಾಮಾನ್ಯ ವೀಕ್ಷಕರಾಗಿ ತೆರಳಿದ್ದ ಅವರಿಗೆ ಅಲ್ಲೇ ದಾಖಲೀಕರಣದ ಕನಸು ಹುಟ್ಟಿತ್ತು. ಅದಕ್ಕೆ ಬೆನ್ನೆಲುಬಾಗಿ ನಿಂತವರು ಪತಿ ನಿತ್ಯಾನಂದ ಶೆಟ್ಟಿ.

ಆರಂಭದಲ್ಲಿ ಪ್ರತೀ ವಾರವೂ ಕಂಬಳಕ್ಕೆ ಹೋಗಿ ಛಾಯಾಗ್ರಹಣ ಮಾಡುತ್ತಿದ್ದ ಅವರು ಮುಂದೆ ಸಾಧಕರ ಜತೆಗೆ ಮಾತುಕತೆ ನಡೆಸಿ ಅದನ್ನು ನಿತ್ಯಾನಂದ ಶೆಟ್ಟಿ ಅವರ ಯೂ ಟ್ಯೂಬ್‌ ಚಾನೆಲ್‌ನಲ್ಲಿ ಬಿತ್ತರಿಸುತ್ತಿದ್ದರು. ಮುಂದೆ ಅದು ಪುಸ್ತಕ ರೂಪದ ದಾಖಲೀಕರಣಕ್ಕೆ ದಾರಿಯಾಯಿತು.

ಸಣ್ಣ ಪುಸ್ತಕಗಳು ಸೇರಿ ದೊಡ್ಡ ಪುಸ್ತಕ
ರಮ್ಯಾ ನಿತ್ಯಾನಂದ ಶೆಟ್ಟಿ ಅವರು 2019ರಿಂದಲೇ ಕಂಬಳದ ಓಟಗಾರರು, ಯಜಮಾನರು, ಕೋಣಗಳು, ಕಂಬಳದ ಪರಿಕರಗಳು-ಅಲಂಕಾರಿಕ ವಸ್ತುಗಳ ತಯಾರಕರು, ವೀಕ್ಷಕ ವಿವರಣೆಗಾರರು, ತೀರ್ಪುಗಾರರು, ಫ್ಲ್ಯಾಗ್‌ ತೀರ್ಪುಗಾರರು, ಛಾಯಾಗ್ರಾಹಕರು ಮೊದಲಾದವರ ವ್ಯಕ್ತಿ ಪರಿಚಯವನ್ನು ಅಕ್ಷರ ರೂಪಕ್ಕಿಳಿಸಿದ್ದರು. ಆದರೆ ಪುಸ್ತಕ ಮಾಡಿರಲಿಲ್ಲ. 2024ರಲ್ಲಿ ಅದನ್ನು ಪುಸ್ತಕ ಮಾಡಬೇಕು ಎಂಬ ಯೋಚನೆಯಿಂದ ಮಾರ್ಚ್‌ನಿಂದ ಕಂಬಳ ಲೋಕ 1, 2, 3, 4 ಎಂದು ಹಂತ ಹಂತವಾಗಿ 4 ಸಣ್ಣ ಪುಸ್ತಕಗಳನ್ನು ಪ್ರಕಟಿಸಿದ್ದರು. ಇದೀಗ ಎಲ್ಲವೂ ಸೇರಿ 272 ಪುಟಗಳ ಪುಸ್ತಕ ಸಿದ್ಧವಾಗಿದೆ. ಕಂಬಳ ಲೋಕ ಪುಸ್ತಕವು ಡಿ. 30ರಂದು ಬೆಳಗ್ಗೆ 10.30ಕ್ಕೆ ಸಿದ್ಧಕಟ್ಟೆಯ ಅಶ್ವಿ‌ನಿ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next