ಹುಣಸೂರು : ವಿದ್ಯಾರ್ಥಿಗಳು ಪರೀಕ್ಷೆ ಸಫಲತೆ ಕಾಣಲು ಧೈರ್ಯಂ ಸರ್ವತ್ರ ಸಾಧನಂ ಎಂಬಂತೆ ಆತ್ಮಸ್ಥೈರ್ಯ ಮುಖ್ಯ ಜೊತೆಗೆ ಶಾರೀರಿಕ, ಮಾನಸಿಕ ಆರೋಗ್ಯವನ್ನು ಸಮಸ್ಥಿತಿಯಲ್ಲಿಟ್ಟುಕೊಂಡು ಪರೀಕ್ಷೆ ಬರೆಯಿರೆಂದು ಸಾಹಿತಿ ಬನ್ನೂರು ಕೆ.ರಾಜು ಸಲಹೆ ನೀಡಿದರು.
ತಾಲೂಕಿನ ಬಿಳಿಕೆರೆ ಹೋಬಳಿ ಮನುಗನಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ ಮೈಸೂರಿನ ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗದವತಿಯಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪರೀಕ್ಷಾರ್ಥಿಗಳಿಗೆ ಶುಭಹಾರೈಕೆಗಳು ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಪರೀಕ್ಷೆಯನ್ನು ಹಬ್ಬವೆಂಬಂತೆ ಸಂಭ್ರಮಿಸಿರೆಂದರು.
ಲೇಖಕಿ, ಕಲಾವಿದೆ ಜಮುನಾರಾಣಿ ಮಿರ್ಲೆರವರು ತಮ್ಮ ಪ್ರಧಾನ ಭಾಷಣದಲ್ಲಿ ವಿದ್ಯಾರ್ಥಿಗಳಲ್ಲಿ ಮನಸ್ಸಿನ ತಲ್ಲೀನತೆಗೆ ಆಸಕ್ತಿ ಹಾಗೂ ಉತ್ತಮ ಪರಿಸರ ಮುಖ್ಯ, ಮುದ್ರೆ, ಧ್ಯಾನ, ಪ್ರಾಣಾಯಾಮ, ಯೋಗದ ಅಭ್ಯಾಸವು ಬುದ್ಧಿಶಕ್ತಿ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಈಶಾನ್ಯ ಮತ್ತು ಪೂರ್ವದಿಕ್ಕಿಗೆ ಅಭಿಮುಖವಾಗಿ ಬೆಳಕಿನ ನಡುವೆ ಕುಳಿತು ಅಧ್ಯಯನಶೀಲರಾದಾಗ ಹೆಚ್ಚು ಸಫಲತೆ ಕಾಣಲು ಸಾಧ್ಯವೆಂದರು.
ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಸಂಗಪ್ಪನವರು ಶಾಲೆಯ ಪರಿಸರ ಹಾಗೂ ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಪಡೆಯಲೆಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಗೀತಾ ವಿದ್ಯೆಯ ಜೊತೆ ಮೌಲ್ಯ, ವಿನಯ, ಸನ್ನಡತೆ ಮುಖ್ಯ, ವೇಳಾಪಟ್ಟಿ ಪ್ರಕಾರ ಯೋಜಿತ ಅಧ್ಯಯನ ನಡೆಸಬೇಕು, ಏಕಾಗ್ರತೆಯೊಂದೇ ಸಾಧನೆಗೆ ಮಾರ್ಗವೆಂದರು.
ಸಂಸ್ಥೆವತಿಯಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಪರಿಕರಗಳನ್ನು ನೀಡಲಾಯಿತು. ಶಿಕ್ಷಕಿಯರಾದ ಶಶಿಕಲಾ, ವಸಂತಕುಮಾರಿ, ಪುಷ್ಪ ಮಾತನಾಡಿದರು. ನಿವೃತ್ತ ಇಂಜಿನಿಯರ್ ಗೋವಿಂದೇಗೌಡ, ಸಂಖ್ಯಾಶಾಸ್ತ್ರಜ್ಞ ಸೀತಾರಾಂ, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗ ಬಾಗವಹಿಸಿದ್ದರು.