Advertisement

ಬ್ಯಾಂಕ್‌ಗೆ ಹಣ ಪೂರೈಕೆ ಕುಸಿತ: ಗ್ರಾಹಕರ ಪರದಾಟ

05:52 PM Apr 12, 2018 | |

ರಾಯಚೂರು: ಕಳೆದ ಒಂದೆರಡು ತಿಂಗಳಿಂದ ಜಿಲ್ಲೆಯಲ್ಲಿ ಹಣಕಾಸಿನ ಸಂಕಷ್ಟ ಎದುರಾಗಿದ್ದು, ಎಟಿಎಂಗಳು ಸೇವೆ ನೀಡುವುದನ್ನೆ ಮರೆತಿವೆ. ಇದರಿಂದ ತುರ್ತು ಸೇವೆಗೆ ಹಣ ಸಿಗದೆ ಗ್ರಾಹಕರು ಮಾತ್ರ ಪರದಾಡುವಂತಾಗಿದೆ. ಜಿಲ್ಲೆಯ ಯಾವುದೇ ಬ್ಯಾಂಕ್‌ಗಳ ಎಟಿಎಂಗಳಿಗೆ ಹೋದರೂ ನೋ ಕ್ಯಾಶ್‌, ಔಟ್‌ ಆಫ್‌ ಸರ್ವಿಸ್‌ ಎಂಬ ಫಲಕಗಳೇ ಕಾಣುತ್ತಿವೆ. ಇದರಿಂದ ತುರ್ತು ಕೆಲಸಗಳಿಗೆ ಹಣ ಸಿಗದೆ ಗ್ರಾಹಕರು ಪರದಾಡುವಂತಾಗಿದೆ. ತಮ್ಮ ಖಾತೆ ಇರುವ ಬ್ಯಾಂಕ್‌ ಗಳ ಎಟಿಎಂಗಳಲ್ಲೇ ಹಣ ಬರುತ್ತಿಲ್ಲ. ಕಡಿಮೆ ಮೊತ್ತದ ಹಣ ಬಿಡಿಸಿಕೊಳ್ಳಬೇಕಾದರೂ ಚೆಕ್‌ ನೀಡುವಂತಾಗಿದೆ. ಒಂದೆರಡು ಎಟಿಎಂ ಸೇವೆ ಲಭ್ಯವಿದ್ದರೂ ಸಾಲುಗಟ್ಟಿ ನಿಲ್ಲಬೇಕಿದೆ. 

Advertisement

ಕೈ ಎತ್ತಿದ ಆರ್‌ಬಿಐ..!:
ಟು ಅಮಾನ್ಯಿಕರಣದ ನಂತರ ಬ್ಯಾಂಕ್‌ಗಳಿಗೆ ಹಣ ಪೂರೈಕೆ ಪ್ರಮಾಣ ಗಣನೀಯವಾಗಿ ಕುಸಿದಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಆರು ತಿಂಗಳಿಗೆ ಕನಿಷ್ಠ 100 ಕೋಟಿಯಾದರೂ ಹಣ ಬಿಡುಗಡೆ ಮಾಡುತ್ತಿತ್ತು. ಆದರೆ, ಹೆಚ್ಚಿನ ಹಣ ನೀಡಲು ಸಾಧ್ಯವಿಲ್ಲ ಎಂದು ಡಿಸೆಂಬರ್‌ನಲ್ಲೇ ಆರ್‌ಬಿಐ ಸೂಚನೆ ನೀಡಿದೆ ಎನ್ನುತ್ತಾರೆ ಬ್ಯಾಂಕ್‌ ವ್ಯವಸ್ಥಾಪಕರು. ಹೀಗಾಗಿ ಅಬ್ಬಬ್ಟಾ ಎಂದರೂ 30ರಿಂದ 40 ಕೋಟಿ ಪೂರೈಸಿದೆ ಅಷ್ಟೆ. ಈಚೆಗೆ ಹಣವನ್ನೇ ಪೂರೈಸುತ್ತಿಲ್ಲ. ಹಣದ ಕೊರತೆ ಬಗ್ಗೆ ಮನವರಿಕೆ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ. ಸಾಧ್ಯವಾದಷ್ಟು ಆನ್‌ಲೈನ್‌ ವಹಿವಾಟು ಮಾಡುವಂತೆಯೇ ನಿರ್ದೇಶನ ನೀಡಲಾಗುತ್ತಿದೆ.

ಗ್ರಾಹಕರಿಂದಲೂ ಹಣ ಸಂದಾಯವಿಲ್ಲ: ಆರ್‌ಬಿಐ ಅಲ್ಲದಿದ್ದರೂ ಗ್ರಾಹಕರಿಂದಲಾದರೂ ವಹಿವಾಟು ನಡೆಯುತ್ತಿದ್ದರಿಂದ ಬ್ಯಾಂಕ್‌ ಗಳಿಗೆ ಸಮಸ್ಯೆ ಎದುರಾಗಿದ್ದಿಲ್ಲ. ಆದರೆ, ಕಳೆದ ಎರಡು ತಿಂಗಳಿಂದ ಬ್ಯಾಂಕ್‌ಗಳಿಗೆ ಗ್ರಾಹಕರು ಹಣ ಸಂದಾಯ ಮಾಡುತ್ತಿಲ್ಲ. ವರ್ತಕರು, ಪೆಟ್ರೋಲ್‌ ಬಂಕ್‌ಗಳ ಮಾಲಿಕರು, ಎಪಿಎಂಸಿ ಸೇರಿ ವಿವಿಧೆಡೆಯಿಂದ ಬ್ಯಾಂಕ್‌ಗಳಿಗೆ ಬರಬೇಕಾದ ಹಣ ಬರುತ್ತಿಲ್ಲ. ಇದರಿಂದ ಬ್ಯಾಂಕ್‌ಗಳು ನಿಷ್ಕ್ರಿಯಗೊಳ್ಳುತ್ತಿವೆ. 

ಚುನಾವಣೆ ಎಫೆಕ್ಟ್..?:
ಹಣ ವಹಿವಾಟು ಸ್ಥಗಿತಗೊಂಡಿದ್ದರ ಹಿಂದೆ ವಿಧಾನಸಭೆ ಚುನಾವಣೆ ಕೆಲಸ ಮಾಡಿದೆಯಾ ಎಂಬ ಗಾಳಿ ಮಾತು ಜೋರಾಗಿವೆ. ಮುಖ್ಯವಾಗಿ ದಿನಂಪ್ರತಿ ಲಕ್ಷಾಂತರ ರೂ. ವಹಿವಾಟು ನಡೆಸುವ ಗ್ರಾಹಕರೇ ಬ್ಯಾಂಕ್‌ಗಳಿಗೆ ಹಣ ಸಂದಾಯ ಮಾಡುತ್ತಿಲ್ಲ ಎನ್ನಲಾಗುತ್ತಿದೆ. ಇದರಿಂದ ಹಣ ಎಲ್ಲಿ ಶೇಖರಣೆಯಾಗುತ್ತಿದೆ. ಅದು ಹವಾಲಾಕ್ಕೆ ಬಳಸಲಾಗುತ್ತಿದೆಯಾ ಎಂಬ ಗುಮಾನಿಯಿದೆ.

ಎರಡರಿಂದ ಮೂರು ಲಕ್ಷ: ಎಟಿಎಂಗಳಲ್ಲಿ ಗಾತ್ರಾನುಸಾರ 24ರಿಂದ 40 ಲಕ್ಷ ರೂ. ವರೆಗೆ ಹಣ ಸಂಗ್ರಹಿಸಬಹುದು. ಮೊದಲೆಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳು 40 ಲಕ್ಷ ರೂ. ಹಾಕುತ್ತಿದ್ದವು. ಆದರೆ, ಈಗ ಗ್ರಾಹಕರಿಗೆ ಕನಿಷ್ಠ ಸೇವೆಯಾದರೂ ನೀಡಬೇಕು ಎಂಬ ಕಾರಣಕ್ಕೆ ಎರಡರಿಂದ ನಾಲ್ಕು ಲಕ್ಷ ರೂ. ವರೆಗೆ ಹಾಕಲಾಗುತ್ತಿದೆ. ಅದು ಒಂದರಿಂದ ಎರಡು ಗಂಟೆಯೊಳಗೆ ಖರ್ಚಾಗುತ್ತಿದೆ. ನಂತರ ಬಂದ ಗ್ರಾಹಕರಿಗೆ ನೋ ಕ್ಯಾಶ್‌ ಔಟ್‌ ಆಫ್‌ ಸರ್ವಿಸ್‌ ಬೋರ್ಡ್‌ಗಳೇ ಗೋಚರಿಸುತ್ತಿವೆ.

Advertisement

ಮದುವೆಗಳಿಗೂ ಎಫೆಕ್ಟ್: ಹೇಳಿ ಕೇಳಿ ಇದು ಮದುವೆ ಕಾಲ. ಸಾದಾ ಸೀದಾ ಮದುವೆಗಳಿಗೆ ಐದಾರು ಲಕ್ಷ ರೂ. ಬೇಕಿದೆ. ದೊಡ್ಡ ಮೊತ್ತವನ್ನು ಚೆಕ್‌ ಮೂಲಕ ಪಡೆದರೂ, ಸಣ್ಣಪುಟ್ಟ ಕೆಲಸಗಳಿಗೆ ಎಟಿಎಂಗಳ ಮೊರೆ ಹೋಗಬೇಕಿದೆ. ಆದರೆ, ಅಂಥ ಕಡೆ ಹಣ ಸಿಗದೆ ಪರದಾಡುವಂತಾಗಿದೆ. ಬ್ಯಾಂಕ್‌ಗಳು ಕೂಡ ಮೂರು ಲಕ್ಷಕ್ಕಿಂತ ಹೆಚ್ಚು ಹಣ ನೀಡಲು ಆಗುವುದಿಲ್ಲ. ಬೇಕಾದರೆ, ಆನ್‌ ಲೈನ್‌ ವಹಿವಾಟು ಮಾಡಿ ಎನ್ನುತ್ತಿದ್ದಾರೆ. ಅಡುಗೆಯವರು, ಶಾಮಿಯಾನದವರು, ಪಾತ್ರೆ ಪಗಡೆಯವರಿಗೆಲ್ಲ ಆರ್‌ಟಿಜಿಎಸ್‌ ಮಾಡಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ ಗ್ರಾಹಕರು. ಹಣಕಾಸಿನ ಸಂಕಷ್ಟಕ್ಕೆ ಚುನಾವಣೆ ಕಾರಣವೋ, ಆರ್‌ಬಿಐ ನಡೆ ಕಾರಣವೋ
ತಿಳಿಯದೆ ಜನ ಕಂಗಾಲಾಗಿದ್ದಾರೆ. ಆಪತ್ತಿಗಾಗದ ಹಣ ಎಷ್ಟಿದ್ದರೇನು ಎಂದು ಆಕ್ರೋಶ ವ್ಯಕ್ತಪಡಿಸುವ ಜನ, ನಮ್ಮ
ಹಣ ನಾವು ಪಡೆಯಲು ಇಷ್ಟೊಂದು ಕಷ್ಟವೇ ಎಂದು ಗೊಣಗುತ್ತಿದ್ದಾರೆ.

ನೋಟು ಅಮಾನ್ಯದ ಬಳಿಕ ನಗದು ವಹಿವಾಟು ಕ್ರಮೇಣ ಕ್ಷೀಣಿಸುತ್ತಿದೆ. 100 ಕೋಟಿ ಕಳುಹಿಸುತ್ತಿದ್ದ ಆರ್‌ಬಿಐ 30ರಿಂದ 40 ಕೋಟಿ ಕಳುಹಿಸುತ್ತಿಲ್ಲ. ಅಲ್ಲದೇ, ನಮ್ಮ ಮನವಿಗೆ ಸದ್ಯಕ್ಕೆ ಹಣ ಕಳುಹಿಸಲು ಆಗದು ಎಂದು ಪ್ರತಿಕ್ರಿಯೆ ಬರುತ್ತಿವೆ. ಹೀಗಾಗಿ ಗ್ರಾಹಕರಿಗೆ ಎಷ್ಟು ಸಾಧ್ಯವೋ ಅಷ್ಟು ಸೇವೆ ನೀಡುತ್ತಿದ್ದೇವೆ.  ವಿ.ಎಸ್‌.ಬಾಲಿ, ಎಸ್‌ಬಿಎಚ್‌ ವ್ಯವಸ್ಥಾಪಕ ಕಳೆದ ಎಂಟು ಹತ್ತು ದಿನದಿಂದ ಗ್ರಾಹಕರಿಂದ ಬ್ಯಾಂಕ್‌ಗಳಿಗೆ ಸಂದಾಯವಾಗುವ ಹಣ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಇದರಿಂದ ಹಣದ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ವಸ್ತುಸ್ಥಿತಿ ಬಗ್ಗೆ ಆರ್‌ಬಿಐ ಸಂಪರ್ಕಾಧಿಕಾರಿಗಳಿಗೆ ವಿವರಿಸಲಾಗಿದೆ. ಆದರೆ, ಅವರು ಕೂಡ ಹಣ ಬಿಡುಗಡೆ ಮಾಡುತ್ತಿಲ್ಲ. ಇಲ್ಲಿ ಮಾತ್ರವಲ್ಲದೇ, ರಾಜ್ಯದ ಬೇರೆ ಕಡೆಯೂ ಇದೇ ಸನ್ನಿವೇಶ ಇದೆ ಎಂದು ತಿಳಿದು ಬಂದಿದೆ. ಇದರಿಂದ ಎಟಿಎಂಗಳು ಸೇವೆಯಿಂದ ದೂರು ಉಳಿಯುತ್ತಿವೆ.
 ಮುರಳಿ, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ 

ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next