Advertisement

ಬಂಕಾಪುರ: ಕಂದಾಯ ಅಧಿಕಾರಿಗಳ ಕೂಡಿ ಹಾಕಿ ಪ್ರತಿಭಟನೆ

04:26 PM Apr 01, 2023 | Team Udayavani |

ಬಂಕಾಪುರ: ಮುನವಳ್ಳಿ ಗ್ರಾಮದ ಸರ್ವೇ ನಂ. 152, 18 ಗುಂಟೆ ಹುಲ್ಲುಗಾವಲು ಪ್ರದೇಶವನ್ನು ಮುನವಳ್ಳಿ ಗ್ರಾಮಸ್ಥರು, ಜನಪ್ರತಿನಿಧಿಗಳ ಗಮನಕ್ಕೆ ತರದೇ ಕಂದಾಯ ಅಧಿಕಾರಿಗಳು, ಬಿಸನಳ್ಳಿ ಗ್ರಾಮದ ಸ್ಮಶಾನಕ್ಕೆ ನೀಡಿರುವುದನ್ನು ವಿರೋಧಿ ಸಿ ಮುನವಳ್ಳಿ ಗ್ರಾಮಸ್ಥರು ಕಂದಾಯ ಅಧಿಕಾರಿಗಳನ್ನು ಗುರುವಾರ ಮಧ್ಯರಾತ್ರಿ ಸುಮಾರು ನಾಲ್ಕು ಗಂಟೆಗಳ ಕಾಲ ಕೂಡಿ ಹಾಕಿ ತೀವ್ರ ಪ್ರತಿಭಟನೆ ನಡೆಸಿದರು.

Advertisement

ಉಪತಹಶೀಲ್ದಾರ್‌ ವಿ.ಎನ್‌.ಕುಲಕರ್ಣಿ, ಆರ್‌ಐ ಶಶಿ ಕೆ., ತಲಾಠಿ ಕೆ.ಎ. ಕಿಲ್ಲೇದಾರ ಅವರನ್ನು ಗ್ರಾಮದೇವಿ ದೇವಸ್ಥಾನದಲ್ಲಿ ಕೂಡಿ ಹಾಕಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಮುನವಳ್ಳಿ ಗ್ರಾಮದ 18 ಗುಂಟೆ ಹುಲ್ಲುಗಾವಲು ಪ್ರದೇಶವನ್ನು ಏಕಾಏಕಿ ಬಿಸನಳ್ಳಿ ಗ್ರಾಮದ ಸಾರ್ವಜನಿಕ ಸ್ಮಶಾನ ಎಂದು ಬದಲಾಯಿಸಿ ನಾರಾಯಣಪುರ ಗ್ರಾಮ ಪಂಚಾಯಿತಿನಲ್ಲಿ ನೋಂದಣಿ ಮಾಡುವಂತೆ ಕಂದಾಯ ಅಧಿಕಾರಿಗಳು, ಪಿಡಿಒ ಅವರಿಗೆ ನಿರ್ದೇಶನ ನೀಡಿದ್ದರು.

ಈ ವಿಷಯ ನಾರಾಯಣಪುರ ಗ್ರಾಪಂ ಉಪಾಧ್ಯಕ್ಷ ಗದಿಗಯ್ಯ ಹಿರೇಮಠ ಅವರ ಗಮನಕ್ಕೆ ಬಂದ ತಕ್ಷಣ ಅಧಿಕಾರಿಗಳ ಕ್ರಮ ವಿರೋಧಿಸಿದರು. ಅಲ್ಲದೇ, ಗ್ರಾಮದ ಜನರ ಸಭೆ ನಡೆಸಿದರು. ಸಭೆಯಲ್ಲಿ ಈ ವಿಷಯವನ್ನು ತೀವ್ರವಾಗಿ ಖಂಡಿಸಿದ ಗ್ರಾಮಸ್ಥರು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಂದಾಯ ಅಧಿಕಾರಿಗಳನ್ನು ಗುರುವಾರ ರಾತ್ರಿ 8 ಗಂಟೆಗೆ ಮುನವಳ್ಳಿ ಗ್ರಾಮಕ್ಕೆ ಕರೆಸಿ, ಗ್ರಾಮದೇವತೆ ದೇವಸ್ಥಾನದಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಗ್ರಾಮದ ಹಿರಿಯರ ಗಮನಕ್ಕೆ ತರದೇ ಮುನವಳ್ಳಿ ಗ್ರಾಮದ ಆಸ್ತಿಯನ್ನು ಬಿಸನಳ್ಳಿ ಗ್ರಾಮಕ್ಕೆ ವರ್ಗಾಯಿಸಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಯಾರ ಅನುಮತಿ ಇಲ್ಲದೇ, ಯಾರದೋ ಆಸ್ತಿಯನ್ನು ಇನ್ನಾರಿಗೋ ವರ್ಗಾಯಿಸಲು ನಿವೇನು ಸರ್ವಾಧಿಕಾರಿಗಳೇ ಎಂದು ಅಧಿ ಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಮ್ಮೂರ ಆಸ್ತಿ ನಮಗೇ ಸೇರಬೇಕು. ಇನ್ನಾ ರಿಗೋ ಹಸ್ತಾಂತರ ಮಾಡಿದರೆ ನಾವು ಸುಮ್ಮನಿರುವುದಿಲ್ಲ. ಬಿಸನಳ್ಳಿ ಗ್ರಾಮದ ಸಾರ್ವಜನಿಕ ಸ್ಮಶಾನ ಎಂದು ತಿದ್ದುಪಡಿ ಮಾಡಿರುವ ಉತಾರವನ್ನು ಈ ಕೂಡಲೇ ಬದಲಾಯಿಸಿ ಮುನವಳ್ಳಿ ಗ್ರಾಮದ ಹುಲ್ಲುಗಾವಲು ಪ್ರದೇಶ ಎಂದು ಮೊದಲಿನಂತೆ ತಿದ್ದುಪಡಿ ಮಾಡುವವರೆಗೆ ಇಲ್ಲಿಂದ ನಿಮ್ಮನ್ನು ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದರು.

Advertisement

ವಿಷಯ ಅರಿತು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಪರಶುರಾಮ ಕಟ್ಟಿಮನಿ ನೇತೃತ್ವದ ಪೊಲೀಸರ ತಂಡ, ಪ್ರತಿಭಟನಾಕಾರರು ಹಾಗೂ ಅಧಿಕಾರಿಗಳೊಂದಿಗೆ ಸುಧೀರ್ಘ‌ ಚರ್ಚೆ ನಡೆಸಿದರು. ಆಗ ಸಾರ್ವಜನಿಕರೊಂದಿಗೆ ಮಾತನಾಡಿದ ಉಪತಹಶೀಲ್ದಾರ್‌ ವಿ.ಎನ್‌.ಕುಲಕರ್ಣಿ, ಸರ್ಕಾರದ ಆದೇಶದ ಮೇರೆಗೆ ಸ್ಮಶಾನ ಭೂಮಿ ಇಲ್ಲದೇ ಇರುವ ಬಿಸನಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಮುನವಳ್ಳಿ ಗ್ರಾಮದ 18 ಗುಂಟೆ ಜಾಗೆಯನ್ನು ಬಿಸನಳ್ಳಿ ಗ್ರಾಮದ
ಸ್ಮಶಾನಕ್ಕೆ ಹಸ್ತಾಂತರಿಸಲಾಗಿತ್ತು. ಗ್ರಾಮದ ಜನರ ಗಮನಕ್ಕೆ ತರದೇ ಮುನವಳ್ಳಿ ಗ್ರಾಮದ ಆಸ್ತಿಯನ್ನು ಪರಭಾರೆ ಮಾಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಅಲ್ಲದೇ, ಈ ಹಿಂದಿನಂತೆ ಮುನವಳ್ಳಿ ಗ್ರಾಮದ ಆಸ್ತಿಯನ್ನು ಅದೇ ಗ್ರಾಮಕ್ಕೆ ಬಿಟ್ಟು ಕೊಡಲಾಗುವುದು ಎಂದು ಹೇಳಿದ ನಂತರ ಪ್ರತಿಭಟನೆ ಹಿಂಪಡೆದರು.

ಈ ವೇಳೆ ಎಂ.ಎಸ್‌.ಐ.ಎಲ್‌. ನಿರ್ದೇಶಕ ಶಶಿಧರ ಹೊನ್ನಣ್ಣವರ, ಬಾಪುಗೌಡ್ರ ಪಾಟೀಲ, ವೀರಬಸಪ್ಪ ಬಂಗಿ, ವೀರಪ್ಪ ನಾಗನೂರ, ಮಾಲತೆಶ ಉಪ್ಪಣಸಿ, ಗುರುಪಾದಪ್ಪ ಕಿವುಡನವರ, ಸೋಮನಗೌಡ್ರ ಪಾಟೀಲ, ಪುಟ್ಟಪ್ಪ ಬಳ್ಳಾರಿ, ವಸಂತರಾವ್‌ ಕುಕರ್ಣಿ, ಲಿಂಗನಗೌಡ ಪಾಟೀಲ ಸೇರಿದಂತೆ ಗ್ರಾಮಸ್ಥರು ಇದ್ದರು.

ಶನಿವಾರ ಸಂಜೆಯೊಳಗಾಗಿ ನಾವು ಮಾಡಿದ ಆದೇಶ ಹಿಂಪಡೆದು, ಬಿಸನಳ್ಳಿ ಗ್ರಾಮದ ಸ್ಮಶಾನ ಎಂದು ಬದಲಾಯಿಸಿದ ಉತಾರವನ್ನು ಈ ಹಿಂದಿನಂತೆ ಮುನವಳ್ಳಿ ಗ್ರಾಮದ ಹುಲ್ಲುಗಾವಲು ಎಂದು ತಿದ್ದುಪಡಿ ಮಾಡಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು.
ವೆಂಕಟೇಶ ಕುಲಕರ್ಣಿ, ಉಪತಹಶೀಲ್ದಾರ್‌

2021ರಲ್ಲಿ ಮುನವಳ್ಳಿ ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮುನವಳ್ಳಿ ಗ್ರಾಮದ ಯಾವುದೇ ಆಸ್ತಿಯನ್ನು ಪರಭಾರೆ ಮಾಡಬಾರದೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದೆವು. ಅದಲ್ಲದೇ, ಗ್ರಾಪಂನ ಯಾವುದೇ ಠರಾವು ಇಲ್ಲದೇ ಆಸ್ತಿ ಬದಲಾವಣೆ ಮಾಡಿರುವ ಅಧಿಕಾರಿಗಳ ಕ್ರಮ ಸರಿಯಲ್ಲ.
ಗದಿಗಯ್ಯ ಹಿರೇಮಠ, ಗ್ರಾಪಂ ಉಪಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next