ಮೌಂಟ್ ಮೌಂಗನುಯಿ: ಬಾಂಗ್ಲಾದೇಶದ “ಕನಸಿನ ಜಯ’ವೊಂದು ಕೈತಪ್ಪಿದೆ. ವೆಸ್ಟ್ ಇಂಡೀಸ್ ತಂಡವನ್ನು ಸಣ್ಣ ಮೊತ್ತಕ್ಕೆ ಹಿಡಿದು ನಿಲ್ಲಿಸಿಯೂ ಕೇವಲ 4 ರನ್ನಿನಿಂದ ಎಡವಿದ ಅದು ವಿಶ್ವಕಪ್ ನಿರ್ಗಮನವನ್ನು ಖಾತ್ರಿಗೊಳಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ಬಾಂಗ್ಲಾದೇಶ ಇದರಲ್ಲಿ ಭರಪೂರ ಯಶಸ್ಸು ಸಾಧಿಸಿತು. ವೆಸ್ಟ್ ಇಂಡೀಸಿಗೆ ಗಳಿಸಲು ಸಾಧ್ಯವಾದದ್ದು 9ಕ್ಕೆ 140 ರನ್ ಮಾತ್ರ. ಇದನ್ನು ಬೆನ್ನಟ್ಟುವ ಉತ್ತಮ ಅವಕಾಶ ಬಾಂಗ್ಲಾದ ಮುಂದಿತ್ತಾದರೂ ವಿಂಡೀಸ್ ಅಷ್ಟೇ ಬಿಗುವಾದ ಬೌಲಿಂಗ್ ನಡೆಸಿತು. ಬಾಂಗ್ಲಾ 49.3 ಓವರ್‌ಗಳಲ್ಲಿ 136ಕ್ಕೆ ಆಲೌಟ್ ಆಯಿತು.
ಇದು 5 ಪಂದ್ಯಗಳಲ್ಲಿ ವಿಂಡೀಸ್ ಸಾಧಿಸಿದ 3ನೇ ಗೆಲುವು. ಭಾರತವನ್ನು ಕೆಳಗಿಳಿಸಿ ತೃತೀಯ ಸ್ಥಾನಕ್ಕೆ ಏರಿದೆ.
ಬಾಂಗ್ಲಾದ ಎಲ್ಲ ವಿಕೆಟ್‌ಗಳು ವಿಂಡೀಸ್ ಸ್ಪಿನ್ನಿಗೇ ಬಿದ್ದವು. 49.3 ಓವರ್‌ಗಳಲ್ಲಿ 39.3 ಓವರ್‌ಗಳನ್ನು ಸ್ಪಿನ್ನರ್‌ಗಳೇ ಎಸೆದಿದ್ದರು. ಹ್ಯಾಲಿ ಮ್ಯಾಥ್ಯೂಸ್ 4, ಅಫಿ ಫ್ಲೆಚರ್ ಮತ್ತು ಸ್ಟಫಾನಿ ಟೇಲರ್ ತಲಾ 3 ವಿಕೆಟ್ ಉರುಳಿಸಿದರು.
ಒಂದು ಹಂತದಲ್ಲಿ ಬಾಂಗ್ಲಾದೇಶ 2 ವಿಕೆಟಿಗೆ 60 ರನ್ ಗಳಿಸಿ ಗೆಲುವಿನ ಹಾದಿಯಲ್ಲಿತ್ತು. ಈ ಹಂತದಲ್ಲಿ ಅಫಿ ಫ್ಲೆಚರ್ ಸತತ ಎಸೆತಗಳಲ್ಲಿ 2 ವಿಕೆಟ್ ಕಿತ್ತು ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಸ್ಕೋರ್ 85 ರನ್ ಆಗುವಷ್ಟರಲ್ಲಿ ಬಾಂಗ್ಲಾದ 7 ವಿಕೆಟ್ ಉರುಳಿತು.
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-9 ವಿಕೆಟಿಗೆ 140 (ಕ್ಯಾಂಬೆಲ್ ಅಜೇಯ 53, ಮ್ಯಾಥ್ಯೂಸ್ 18, ಸಲ್ಮಾ 23ಕ್ಕೆ 2, ನಹಿದಾ 23ಕ್ಕೆ 2). ಬಾಂಗ್ಲಾದೇಶ-49.3 ಓವರ್‌ಗಳಲ್ಲಿ 136 (ನಹಿದಾ ಅಜೇಯ 25, ನಿಗಾರ್ 25, ಫರ್ಗಾನಾ 23, ಮ್ಯಾಥ್ಯೂಸ್ 15ಕ್ಕೆ 4, ಫ್ಲೆಚರ್ ಮತ್ತು ಟೇಲರ್ 29ಕ್ಕೆ 3).