ಢಾಕಾ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶಬ್ಬೀರ್ ರೆಹಮಾನ್ ಅವರನ್ನು ಬಾಂಗ್ಲಾದೇಶ ಟೆಸ್ಟ್ ತಂಡಕ್ಕೆ ಮರಳಿ ಕರೆಸಿಕೊಳ್ಳಲಾಗಿದೆ. ಪ್ರವಾಸಿ ಶ್ರೀಲಂಕಾ ವಿರುದ್ಧ ಆಡಲಾಗುವ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಾಕ್ಕಾಗಿ ಆರಿಸಲಾದ ತಂಡದಲ್ಲಿ ಶಬ್ಬೀರ್ ಸ್ಥಾನ ಸಂಪಾದಿಸಿದ್ದಾರೆ.
ಅಶಿಸ್ತಿನ ಕಾರಣಕ್ಕಾಗಿ ಶಬ್ಬೀರ್ ರೆಹಮಾನ್ ಅವರನ್ನು ಬಿಸಿಬಿ ಒಡಂಬಡಿಕೆ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ರಾಜಶಾಹಿಯಲ್ಲಿ ನಡೆದ ಪ್ರಥಮ ದರ್ಜೆ ಪಂದ್ಯವೊಂದರ ವೇಳೆ ಅವರು ಕ್ರಿಕೆಟ್ ಅಭಿಮಾನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದೇ ಇದಕ್ಕೆ ಕಾರಣ. ಇದಕ್ಕಾಗಿ 20 ಲಕ್ಷ ರೂ. ದಂಡ ವಿಧಿಸುವುದರ ಜತೆಗೆ ಶಬ್ಬೀರ್ ಅವರನ್ನು ದೇಶಿ ಕ್ರಿಕೆಟ್‌ನಿಂದ 6 ತಿಂಗಳ ಕಾಲ ಹೊರಗಿಡಲಾಗಿತ್ತು.
ಸುಂಜಾಮುಲ್ ಇಸ್ಲಾಮ್ ಮತ್ತು ರುಬೆಲ್ ಹೊಸೈನ್ ಅವರನ್ನು ಕೈಬಿಡಲಾಗಿದೆ. ಗಾಯಾಳು ನಾಯಕ ಶಕಿಬ್ ಅಲ್ ಹಸನ್ ಗೈರಲ್ಲಿ ಮಹಮದುಲ್ಲ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ.
ಸರಣಿಯ ಮೊದಲ ಟೆಸ್ಟ್ ಡ್ರಾಗೊಂಡಿತ್ತು. ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಫೆ. 8ರಿಂದ ಢಾಕಾದಲ್ಲಿ ಆರಂಭವಾಗಲಿದೆ.
ಬಾಂಗ್ಲಾದೇಶ ತಂಡ: ಮಹಮದುಲ್ಲ (ನಾಯಕ), ತಮಿಮ್ ಇಕ್ಬಾಲ್, ಲಿಟನ್ ದಾಸ್, ಮುಶ್ಫಿಕರ್ ರಹೀಂ, ಇಮ್ರುಲ್ ಕಯೆಸ್, ಮೊಮಿನುಲ್ ಹಕ್, ಮೊಸದೆಕ್ ಹೊಸೈನ್, ತೈಜುಲ್ ಇಸ್ಲಾಮ್, ಮುಸ್ತಫಿಜುರ್ ರೆಹಮಾನ್, ಮೆಹಿದಿ ಹಸನ್ ಮಿರಾಜ್, ಕಮ್ರುಲ್ ಇಸ್ಲಾಮ್ ರಬ್ಬಿ, ಶಬ್ಬೀರ್ ರೆಹಮಾನ್, ಅಬ್ದುರ್ ರಜಾಕ್, ನಯೀಮ್ ಹಸನ್, ತನ್‌ಬಿರ್ ಹೈದರ್.