ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ನೀರು ಪೋಲಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಜಲಮಂಡಳಿಯು ಅನಧಿಕೃತ ನೀರಿನ ಸಂಪರ್ಕ ಕಡಿತ ಸೇರಿದಂತೆ ವಿವಿಧ ಕ್ರಮ ಅನುಸರಿಸಿದ ಪರಿಣಾಮ ಪೋಲಾಗುವ ನೀರಿನ ಪ್ರಮಾಣ ಶೇ.45ರಿಂದ ಶೇ.28ಕ್ಕೆ ಇಳಿಕೆಯಾಗಿದೆ.
ಕಳೆದ ಹಲವು ವರ್ಷಗಳಿಂದ ರಾಜಧಾನಿ ಯಲ್ಲಿ ಪೋಲಾಗುತ್ತಿರುವ ನೀರನ್ನು ನಿಯಂತ್ರಿಸುವುದೇ ಜಲಮಂಡಳಿಗೆ ಸವಾಲಾಗಿತ್ತು. ಇದೀಗ 654 ಕೋಟಿ ರೂ. ವೆಚ್ಚದಲ್ಲಿ ನೀರಿನ ಸೋರಿಕೆ ತಡೆಗಟ್ಟಲು ಕೈಗೊಂಡಿರುವ ಕಾಮಗಾರಿಯು ಭರದಿಂದ ಸಾಗಿದ್ದು, ಪರಿಣಾಮ ಒಂದೇ ವರ್ಷದಲ್ಲಿ ಶೇ.17ರಷ್ಟು ಸೋರಿಕೆ ಪ್ರಮಾಣ ಇಳಿಕೆಯಾಗಿದೆ. ಪ್ರತಿದಿನ ಕಾವೇರಿ ಮೂಲದಿಂದ 1,450 ದಶಲಕ್ಷ ಲೀಟರ್ ಕುಡಿಯುವ ನೀರು ಪೂರೈಕೆಯಾಗುತ್ತಿದೆ. 10.64 ಲಕ್ಷ ಸಂಪರ್ಕಗಳಿಂದ ಪ್ರತಿದಿನ ಸುಮಾರು 3.83 ಕೋಟಿ ರೂ. ಬೆಂಗಳೂರು ಜಲ ಮಂಡಳಿಗೆ ನೀರಿನ ಬಿಲ್ಲಿನ ಮೂಲಕ ಸಂಗ್ರಹವಾಗುತ್ತಿದೆ.
ಪೋಲಾಗುತ್ತಿರುವ ನೀರು ತಡೆಗಟ್ಟಿದ್ದು ಹೇಗೆ?: ಬೆಂಗಳೂರಿನಲ್ಲಿ ಭಾರಿ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದರ ಬಗ್ಗೆ ತನಿಖೆ ನಡೆಸಿದಾಗ, ಬಹುತೇಕ ಕಡೆ ಜಲ ಮಂಡಳಿಯು ನಿರ್ಮಿಸಿರುವ ನೀರಿನ ಕೊಳವೆ ಮೂಲಕ ಅನಧಿಕೃತವಾಗಿ ಸಾವಿರಾರು ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿರುವುದು ಕಂಡು ಬಂದಿತ್ತು. ಇದೀಗ ಅನಧಿಕೃತ ನೀರಿನ ಸಂಪರ್ಕ ತಡೆಯಲಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಸೋರಿಕೆಯಾಗುತ್ತಿರುವ ಕೊಳವೆ ಸರಿ ಪಡಿಸಿದರೆ, ಮತ್ತೆ ಕೆಲವೆಡೆ ಹೊಸ ಕೊಳವೆ ಅಳ ವಡಿಸಲಾಗಿದೆ. ಶಿಥಿಲಗೊಂಡಿರುವ ನೆಲಮಟ್ಟದ ಜಲಾಶಯದಲ್ಲಿ ಆಗುವ ಸೋರುವಿಕೆ ತಡೆಗೆ ಕ್ರಮ ಕೈಗೊಳ್ಳಲಾಗಿದೆ. ನಗರದ ಬಹುತೇಕ ಕಡೆ ಜಲಮಂಡಳಿಯಿಂದ ಕೊಳವೆ ದುರಸ್ತಿ ಕಾರ್ಯ ಮುಂದುವರಿದಿದೆ ಎಂದು ಜಲಮಂಡಳಿಯ ಮೂಲಗಳು ತಿಳಿಸಿವೆ.
ಜಲಮಂಡಳಿಯಿಂದ ವಿವಿಧ ಕಾಮಗಾರಿ: ಬೆಂಗಳೂರು ಪಶ್ಚಿಮ, ದಕ್ಷಿಣ ಹಾಗೂ ಕೇಂದ್ರ ವಿಭಾಗಗಳ ಒಟ್ಟು 132.5 ಚ.ಕಿ.ಮೀ. ವಿಸ್ತೀರ್ಣದಲ್ಲಿ ಹಾಗೂ ಉತ್ತರ ಹಾಗೂ ಆಗ್ನೇಯ ವಿಭಾಗದ 22 ಚ.ಕಿ.ಮೀ ವ್ಯಾಪ್ತಿಯಲ್ಲಿ ಕಾಮಗಾರಿ ನಡೆದಿದೆ. ಉಳಿದಂತೆ ಬೆಂಗಳೂರು ಜಲಮಂಡಳಿಯ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು 40 ರಿಂದ 50 ವರ್ಷಗಳ ಹಿಂದೆ ಅಳವಡಿಕೆಯಾಗಿರುವ ವಿವಿಧ ಸಿ.ಐ/ಪಿ.ಎಸ್.ಸಿ ಕೊಳವೆ ಮಾರ್ಗಗಳು ದೀರ್ಘ ಕಾಲದಿಂದ ಬಳಕೆಯಲ್ಲಿವೆ. ಇಂತಹ ಕೊಳವೆಗಳಿಂದ ನೀರು ಸೋರಿಕೆಯಾಗುತ್ತಿರುತ್ತಿದ್ದು, ಇಂತಹ ಹಳೆಯ ಕೊಳವೆ ಮಾರ್ಗ ಬದಲಾಯಿಸಿ ಹಳೆಯ ಜಲಸಂಗ್ರಹ ಪುನಶ್ಚೇತನಗೊಳಿಸಲು ಬೆಂಗಳೂರು ಜಲಮಂಡಳಿಗೆ ಅಂದಾಜು 8 ಸಾವಿರ ಕೋಟಿ ರೂ. ಅಗತ್ಯವಿದೆ. ಇಷ್ಟೊಂದು ದೊಡ್ಡ ಮೊತ್ತ ಬೆಂಗಳೂರು ಜಲಮಂಡಳಿಗೆ ಆರ್ಥಿಕ ಹೊರೆಯಾಗಿದ್ದು, ಈ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದೆ.
ಮಿತಿಗಿಂತ ಶೇ.14ರಷ್ಟು ನೀರು ಪೋಲು: ಸಾರ್ವಜನಿಕ ಕೊಳಾಯಿಗಳಿಂದ ಶೇ.4ರಷ್ಟು ನೀರು ಪೋಲಾಗುತ್ತಿದೆ. ಗೃಹ ಸಂಪರ್ಕ ಕೊಳವೆ ಸೋರಿಕೆ ಶೇ.5, ಜಲಮಾಪಕ ಲೋಪದೋಷ ಶೇ.5, ಶಿಥಿಲಗೊಂಡಿರುವ ನೆಲಮಟ್ಟದ ಜಲಾಶಯದಲ್ಲಿ ಆಗುವ ಸೋರುವಿಕೆ ಶೇ.5, ಹೆಚ್ಚಿನ ವಾಹನ ಓಡಾಟದಿಂದ ನೀರಿನ ಕೊಳವೆ ಸೋರಿಕೆ, ನೀರಿನ ಕೊಳವೆ ಸcತ್ಛಗೊಳಿಸಲು ಉಪಯೋಗಿಸುವ ನೀರಿನ ಪ್ರಮಾಣ ಶೇ.6 ಸೇರಿದಂತೆ ಒಟ್ಟು ಶೇ.28ರಷ್ಟು ನೀರು ಪೋಲಾಗುತ್ತಿದೆ. ಸಿ.ಪಿ.ಎಚ್.ಇ.ಇ.ಓ ಮಾನದಂಡದ ಪ್ರಕಾರ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಶೇ.15ರಷ್ಟು ಇರಬೇಕಾಗಿರುತ್ತದೆ. ಇನ್ನೂ ಮಿತಿಗಿಂತ ಶೆ.14ರಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಇನ್ನು ಕಾವೇರಿ ನೀರಿನ ಸಂಗ್ರಹಣೆಗೆ ಸರಬರಾಜಿಗೂ ಮುನ್ನ ಜಲಶುದ್ದೀಕರಣ ಘಟಕದಲ್ಲಿ ರಾಸಾಯನಿಕ ಬಳಕೆ, ವಿದ್ಯುತ್ ಶುಲ್ಕ, ಬಂಡವಾಳ ವೆಚ್ಚ ಹಾಗೂ ನೌಕರರ ವೇತನ ಸೇರಿದಂತೆ ಇತರೆ ವೆಚ್ಚಗಳಿಂದ ಒಂದು ಕಿಲೋ ಲೀಟರ್‌ಗೆ 41 ರೂ. ವೆಚ್ಚ ತಗುಲುತ್ತದೆ.
ಜಲಮಂಡಳಿ ಕಾಮಗಾರಿಗೆ ವಾಹನ ಸವಾರರ ಹೈರಾಣ : ನೀರಿನ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರಿನ ದಕ್ಷಿಣ, ಪಶ್ಚಿಮ, ಆಗ್ನೇಯ ವಿಭಾಗಗಳಲ್ಲಿರುವ ಬಹುತೇಕ ರಸ್ತೆಗಳನ್ನು ಸಿಬ್ಬಂದಿ ಅಗೆದ ಪರಿಣಾಮ ವಾಹನ ಸಂಚಾರಕ್ಕೆ ಭಾರಿ ಅಡಚಣೆಯಾಗುತ್ತಿದೆ. ಜತೆಗೆ ಧೂಳಿನ ಪ್ರಮಾಣ ಹೆಚ್ಚಳವಾಗಿ ಸ್ಥಳೀಯರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಕಾಮಗಾರಿ ಮುಗಿದ ರಸ್ತೆಗಳಲ್ಲಿ ಅಗೆದ ಮಣ್ಣು ಬೇಕಾಬಿಟ್ಟಿ ಮುಚ್ಚಿ ತೆರಳುತ್ತಿದ್ದಾರೆ. ಇಂತಹ ರಸ್ತೆಗಳಲ್ಲಿ ಜನ ಓಡಾಡಲೂ ಸಾಧ್ಯವಾಗದೇ ಹೈರಾಣಾಗಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ನೀರಿನ ಸೋರಿಕೆ ಪ್ರಮಾಣ ಬಹಳಷ್ಟು ಇಳಿಕೆಯಾಗಿದೆ. ಅನಧಿಕೃತ ನೀರಿನ ಸಂಪರ್ಕ ಹಾಗೂ ಕೊಳವೆಗಳಲ್ಲಿ ಆಗುತ್ತಿದ್ದ ನೀರು ಸೋರಿಕೆ ಪತ್ತೆ ಹಚ್ಚಿ ಜಲಮಂಡಳಿ ಸೂಕ್ತ ಕ್ರಮ ಕೈಗೊಂಡಿದೆ. ಹೀಗಾಗಿ ನೀರಿನ ಸೋರಿಕೆ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. –
ಎನ್.ಜಯರಾಮ್, ಅಧ್ಯಕ್ಷರು, ಬೆಂಗಳೂರು ಜಲಮಂಡಳಿ
– ಅವಿನಾಶ ಮೂಡಂಬಿಕಾನ