Advertisement

Bangalore kambala: ಹೊನಲು ಬೆಳಕಿನ ಕಂಬಳ ವೀಕ್ಷಿಸಿ ಪುಳಕಕೊಂಡ ಜನ

09:14 AM Nov 26, 2023 | |

ಬೆಂಗಳೂರು: ಎಲ್ಲಿ ನೋಡಿದರೂ ಬಣ್ಣ-ಬಣ್ಣದ ಜಗಮಗಿಸುವ ವಿದ್ಯುತ್‌ ದೀಪಗಳು, ಪೆಡ್‌ಲೈಟ್‌ ಗಳಿಂದ ಅಲಂಕೃತಗೊಂಡ ಕರೆಗಳು, ಕರೆಗಳ ಸುತ್ತಲೂ ಹಳದಿ ಲುಂಗಿ ತೊಟ್ಟು ಕೋಣಗಳ ಜತೆಗೆ ಕೈಯಲ್ಲಿ ಬೆತ್ತ ಹಿಡಿದುಕೊಂಡು ತಿರುಗಾಡುತ್ತಿರುವ ಸಿಬ್ಬಂದಿ, ಕೋಣಗಳ ಓಟದ ಆರ್ಭಟಕ್ಕೆ ನೀರುಗಳು ಚಿಮ್ಮುವ ದೃಶ್ಯ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರ ನೂಕು ನುಗ್ಗಲು…

Advertisement

ಇದು ಅರಮನೆ ಮೈದಾನದಲ್ಲಿ ಬೆಂಗಳೂರು ಕಂಬಳ ಸಮಿತಿ ಆಯೋಜಿಸಿರುವ ನಮ್ಮ ಬೆಂಗಳೂರು ಕಂಬಳದಲ್ಲಿ ಕಂಡು ಬಂದ ದೃಶ್ಯಾವಳಿ. ಹೊನಲು ಬೆಳಕಿನಲ್ಲಿ ಸಂಪನ್ನಗೊಂಡ ಪ್ರಥಮ ಕಂಬಳ ಎಂಬ ಇತಿಹಾಸಕ್ಕೆ ಶನಿವಾರ ನಮ್ಮ ಬೆಂಗ ಳೂರು ಕಂಬಳ ಸೇರ್ಪಡೆಗೊಂಡಿದೆ. 70 ಎಕರೆ ವಿಶಾಲವಾದ ಜಾಗವು ಹೂವು, ವಿದ್ಯುತ್‌ ದೀಪ ಗಳಿಂದ ಮದುವಣಗಿತ್ತಿಯಂತೆ ಅಲಂಕಾರಗೊಂಡು ನೋಡುಗರನ್ನು ಆಕರ್ಷಿಸುತ್ತಿದ್ದು, ಒಂದು ತೆರನಾದ ಸಂಭ್ರಮ ಮನೆ ಮಾಡಿತ್ತು.

ರಾತ್ರಿ ಕೋಣಗಳು ಉತ್ಸಾಹದೊಂದಿಗೆ ಕಂಬಳ ಗದ್ದೆಯಲ್ಲಿ ಓಡಾಟ ನಡೆಸುತ್ತಿದ್ದರೆ, ಕಂಬಳದ ಯುವ ಗುರಿಕಾರರ ಉತ್ಸಾಹ ಇಮ್ಮಡಿಗೊಂಡಿತು. 44ಕ್ಕೂ ಹೆಚ್ಚಿನ ಜೋಡಿಗಳು ಹೊನಲು ಬೆಳಕಿನಲ್ಲಿ ಓಡುತ್ತ ಪುಳಕ ಸೃಷ್ಟಿಸಿದವು. ಓಟಗಾರರು ಒಂದೊಂದೇ ಜೊತೆ ಕೋಣಗಳನ್ನು ಓಡಿಸುತ್ತಿದ್ದರೆ ಇತ್ತ ಜನರ ಹರ್ಷೋದ್ಗಾರ ಮುಗಿಲು ಮುಟ್ಟುವಂತಿದ್ದವು. ಪ್ರಕಾಶಮಾನವಾದ ಪೆಡ್‌ಲೈಟ್‌ಗಳ ಸುತ್ತಲೂ ಕಂಬಳ ಪ್ರಿಯರು ಕೋಣದ ಓಟ ಕಂಡು ರೋಮಾಂಚನಗೊಂಡರು.

ಕಾವಿ ಬಟ್ಟೆ ತೊಟ್ಟ ಓಟಗಾರರು ನಾಗರ ಬೆತ್ತದ ಕೋಲಿನಲ್ಲಿ ಕೋಣಗಳ ಬೆನ್ನಿಗೆ ಬಾರಿಸುತ್ತಾ ಇನ್ನಷ್ಟು ವೇಗವಾಗಿ ಓಡುವಂತೆ ಅವುಗಳನ್ನು ಮುನ್ನುಗ್ಗಿಸುವ ವೇಳೆ ಶಿಳ್ಳೆ, ಚಪ್ಪಾಳೆ, ಕಹಳೆ ಬಾರಿಸುವ ಮೂಲಕ ಪ್ರೇಕ್ಷಕರು ಹುರಿದುಂಬಿ ಸಿದರು. ಮತ್ತೂಂದೆಡೆ ಕಂಬಳ ತಜ್ಞರು ಕಮೆಂಟ್ರಿ ಹೇಳುವವರು ಕೋಣಗಳು ಓಡುತ್ತಿದ್ದಂತೆ ಅದರ ಮಾಲೀಕರು, ಅವರ ಮನೆತನದ ಹೆಸರು, ಕೋಣಗಳ ಹೆಸರು, ಓಟಗಾರರ ಹೆಸರನ್ನು ರಾಗವಾಗಿ ಹೇಳಿ ಮೆರುಗನ್ನು ಇನ್ನಷ್ಟು ಹೆಚ್ಚಿಸಿದರು. ಕೋಣಗಳು ದಡ ಸೇರುತ್ತಿದ್ದಂತೆ ಹತ್ತಾರು ಮಂದಿ ಅವುಗಳ ಮೇಲೆ ನೀರು ಚೆಲ್ಲಿ ಕರೆದುಕೊಂಡು ಹೋದರು. ಭಾನುವಾರ ಮುಂಜಾನೆವರೆಗೂ ಕೋಣಗಳು ಕರೆಯಲ್ಲಿ ಓಟ ಮುಂದುವರಿಸುತ್ತಿದ್ದರೆ, ಇದನ್ನು ವೀಕ್ಷಿಸಲು ತಂಡೋಪ ತಂಡವಾಗಿ ಲಕ್ಷಾಂತರ ಜನ ಬರುತ್ತಲೇ ಇದ್ದಾರೆ.

ರಾಜ-ಮಹಾರಾಜ ಕರೆಗಳ ಎರಡೂ ಬದಿ ಗಳಲ್ಲಿ ಕೋಣಗಳು ಓಡುತ್ತಿದ್ದಂತೆ ಕೆಸರು ನೀರು ಚಿಮ್ಮುತ್ತಿರುವ ರೋಮಾಂಚನಕಾರಿ ದೃಶ್ಯವನ್ನು ಸಾವಿ ರಾರು ಮಂದಿ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದರು.

Advertisement

ಸಾಂಸ್ಕೃತಿಕ ಕಾರ್ಯಕ್ರಮದ ಮೆರುಗು: ಕೃಷ್ಣರಾಜ ಒಡೆಯರ್‌ ವೇದಿಕೆಯಲ್ಲಿ ರಾತ್ರಿ ನಡೆದ ಮಜಾ ಭಾರತ ತಂಡ ಹಾಗೂ ಉಮೇಶ್‌ ಮಿಜಾರು ತಂಡದಿಂದ ಕಾಮಿಡಿ ಶೋಗೆ ಜನ ಹೊಟ್ಟೆ ತುಂಬಾ ನಕ್ಕು ಸುಸ್ತಾದರು.”ಗುರುಕಿರಣ್‌ ನೈಟ್‌’ ವಿಶೇಷ ಕಾರ್ಯಕ್ರಮದಲ್ಲಿ ಗುರು ಕಿರಣ್‌ ವಿವಿಧ ಪ್ರಸಿದ್ದ ಹಾಡುಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು. ಯಕ್ಷಗಾನ ಪ್ರದರ್ಶನವು ಕರಾವಳಿಗರನ್ನು ಕೆಲ ಕಾಲ ಹಿಡಿದಿಟ್ಟುಕೊಳ್ಳುವಂತೆ ಮಾಡಿತು.

 ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next