ಬೆಂಗಳೂರು: ಯುವಕನೊಬ್ಬ ಯುವತಿಗೆ ಮಾದಕವಸ್ತು ನೀಡಿ ಅತ್ಯಾಚಾರ ಎಸಗಿದಲ್ಲದೆ, ವಿಡಿಯೋ ಚಿತ್ರೀಕರಣ ಮಾಡಿ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿ, ಜಾತಿ ನಿಂದನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ವಸಂತನಗರದ 26 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಆಂಧ್ರಪ್ರದೇಶ ಮೂಲದ ಅಕ್ಕಿ ಲಕ್ಷ್ಮೀರೆಡ್ಡಿ ಎಂಬಾತನ ವಿರುದ್ಧ ಹೈಗ್ರೌಂಡ್ಸ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಜಾತಿ ನಿಂದನೆ ಪ್ರಕರಣವಾದರಿಂದ ಜೆ.ಸಿ.ನಗರ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ಹೆಚ್ಚಿನ ತನಿಖೆಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.
ಆರ್.ಟಿ.ನಗರದ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಯುವತಿಗೆ 2019ರ ನವೆಂಬರ್‌ನಲ್ಲಿ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವ ನೆಪದಲ್ಲಿ ಪರಿಚಯವಾದ ಆರೋಪಿ, ತನ್ನ ಅಕ್ಕನ ಹುಟ್ಟುಹಬ್ಬದ ಕಾರ್ಯಕ್ರಮದ ನೆಪವೊಡ್ಡಿ ಸಮೀಪದ ಹೋಟೆಲ್‌ವೊಂದಕ್ಕೆ ಕರೆದೊಯ್ದಿದಾನೆ. ಬಳಿಕ ಆಕೆಗೆ ಕಾಫಿಯಲ್ಲಿ ಮಾದಕ ವಸ್ತು ಬೆರೆಸಿ ಕುಡಿಸಿ, ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ಅದನ್ನು ವಿಡಿಯೋ ಮಾಡಿಕೊಂಡಿದ್ದಾನೆ. ಬಳಿಕ ಆ ವಿಡಿಯೋಗಳನ್ನು ತೋರಿಸಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ಜಾತಿ ನಿಂದನೆ: ಆರೋಪಿ, ತನ್ನ ತಾಯಿ ಹಾಗೂ ತನ್ನ ಜಾತಿ ಬಗ್ಗೆ ಕೀಳು ಭಾಷೆಯಲ್ಲಿ ನಿಂದಿಸಿದ್ದಾನೆ. ನಮ್ಮ ಮನೆಯಲ್ಲಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇ ಡ್ಕರ್ ಫೋಟೋ ತೆಗೆದುಹಾಕುವಂತೆ ಒತ್ತಾಯಿಸಿ ದ್ದಾನೆ. ಬಳಿಕ 2024ರ ನವೆಂಬರ್‌ನಲ್ಲಿ ತನ್ನನ್ನು ಖಾಸಗಿ ಹೋಟೆಲ್‌ಗೆ ಕರೆದೊಯ್ದು ಮತ್ತೂಮ್ಮೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆ ನಂತರದ ದಿನಗಳಲ್ಲಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ನಡೆದ ವಿಚಾರವನ್ನು ತನ್ನ ತಾಯಿ ಬಳಿ ಹೇಳಿಕೊಂಡಿದ್ದೆ. ಈ ಮಧ್ಯೆ ನ.30ರಂದು ನನ್ನನ್ನು ಭೇಟಿಯಾಗಿದ್ದ ಆರೋಪಿ, ನನ್ನ ಮೊಬೈಲ್ ವಾಲ್‌ಪೇಪರ್‌ನಲ್ಲಿದ್ದ ಅಂಬೇಡ್ಕರ್ ಫೋಟೋ ತೆಗೆದುಹಾಕುವಂತೆ ಬೆದರಿಸಿ ಮೊಬೈಲ್ ಒಡೆದು ಹಾಕಿದ್ದಾನೆ. ಅಲ್ಲದೆ, ಸಾರ್ವಜನಿಕ ಸ್ಥಳದಲ್ಲಿ ನನ್ನ ಬಟ್ಟೆ ಹರಿದುಹಾಕಿ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ. ಸದ್ಯ ಆರೋಪಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಘಟನೆ ಸಂಬಂಧ ಜೆ.ಸಿ.ನಗರ ಪೊಲೀಸ್ ಠಾಣೆ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.