ಬೆಂಗಳೂರು: ಪ್ರೇಯಸಿಯರಿಗಾಗಿ ಕಳ್ಳತನಕ್ಕೆ ಇಳಿದಿದ್ದ ಆರೋಪಿಯನ್ನು 10 ವರ್ಷದ ಬಳಿಕ ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಟಿಪ್ಪು ನಗರದ ನಿವಾಸಿ ಆಸಿಫ್ (32) ಬಂಧಿತ ಆರೋಪಿ. ಈತನಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಪ್ರೇಯಸಿಯರಿದ್ದಾರೆ. ಅವರಿಗಾಗಿ ಬೈಕ್ ಕಳ್ಳತನ, ದರೋಡೆ, ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ. ಕದ್ದ ಬೈಕ್‌ನಲ್ಲಿ ಪ್ರಿಯತಮೆಯರನ್ನು ಜಾಲಿ ರೈಡ್‌ಗೆ ಕರೆದೊಯ್ಯುತ್ತಿದ್ದ. ಬಳಿಕ, ಪ್ರಿಯತಮೆಯನ್ನು ಡ್ರಾಪ್ ಮಾಡಿ ಅಲ್ಲಿಯೇ ಬೈಕ್ ಬಿಟ್ಟು ಬರುತ್ತಿದ್ದ. ಈತನ ವಿರುದ್ಧ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಜೈಲಿಗೆ ಹೋಗಿ ಬಂದಿದ್ದಾನೆ. ಆದರೆ, ಜಾಮೀನು ಪಡೆದ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದ.
ಮತ್ತೂಂದೆಡೆ 2014ರಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಆಸೀಫ್ ವಿರುದ್ಧ ಕಳ್ಳತನ ಪ್ರಕರಣ ದಾಖಲಾಗಿತ್ತು. ಹೀಗಾಗಿ, ಹಲಸೂರು ಗೇಟ್ ಪೊಲೀಸರು ಆರೋಪಿ ಆಸಿಫ್ಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ಜತೆಗೆ ನ್ಯಾಯಾಲಯ ಆರೋಪಿಯ ಬಂಧನಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಆಸೀಫ್ನ ದಿನಚರಿ ತಿಳಿದ ಪೊಲೀಸರು, ಇತ್ತೀಚೆಗೆ ಆತ ಮೆಜೆಸ್ಟಿಕ್ ಬಳಿ ಆಟೋ ಓಡಿಸುತ್ತಿದ್ದಾನೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆರೋಪಿ ವಿರುದ್ಧ ಕೆ.ಆರ್.ಮಾರುಕಟ್ಟೆ, ಜಯನಗರ, ಉಪ್ಪಾರಪೇಟೆ, ಕಲಾಸಿಪಾಳ್ಯ ಮತ್ತು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯ ಬಂಧನದಿಂದ ಒಟ್ಟು ಆರು ಪ್ರಕರಣ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿ ಆಸೀಫ್, 2014ರಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಬಳಿಕ ಟಿಪ್ಪು ನಗರ ಬಿಟ್ಟು ಬೇರೆ ಏರಿಯದಲ್ಲಿ ವಾಸವಾಗಿದ್ದು, ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.