ಬೆಂಗಳೂರು: ನಗರದ ಮಾರತ್ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥ್ ಲೇಔಟ್ ನಲ್ಲಿ ಉತ್ತರ ಪ್ರದೇಶ ಮೂಲದ 34 ವರ್ಷದ ವ್ಯಕ್ತಿಯೊಬ್ಬ ಸೋಮವಾರ(ಡಿ9) ತನ್ನ ನಿವಾಸದಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅತುಲ್ ಸುಭಾಷ್ ತನ್ನ ಪತ್ನಿ ಮತ್ತು ಆಕೆಯ ಸಂಬಂಧಿಕರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ 24 ಪುಟಗಳ ಡೆತ್ ನೋಟ್ ಅನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಿಂದ ಸುಭಾಷ್ ತನ್ನ ಪತ್ನಿಯೊಂದಿಗೆ ವೈವಾಹಿಕ ಭಿನ್ನಾಭಿಪ್ರಾಯ ಎದುರಿಸುತ್ತಿದ್ದು, ಆಕೆ ಆತನ ವಿರುದ್ಧ ಉತ್ತರ ಪ್ರದೇಶದಲ್ಲಿ ಪ್ರಕರಣ ದಾಖಲಿಸಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಭಾಷ್ ಡೆತ್ ನೋಟ್ ಅನ್ನು ಹಲವಾರು ಜನರಿಗೆ ಇಮೇಲ್ ಮೂಲಕ ಕಳುಹಿಸಿದ್ದಾನೆ. NGO ದ ವಾಟ್ಸಾಪ್ ಗುಂಪಿನೊಂದಿಗೂ ಹಂಚಿಕೊಂಡಿದ್ದಾನೆ. ಮನೆಯಲ್ಲಿ “ನ್ಯಾಯ ಸಿಗಬೇಕು” ಎಂಬ ಫಲಕವನ್ನು ನೇತುಹಾಕಿದ್ದ. ಕಠಿನ ನಿರ್ಧಾರ ತೆಗೆದುಕೊಳ್ಳುವ ಮೊದಲು, ಡೆತ್ ನೋಟ್, ವಾಹನದ ಕೀಗಳು ಮತ್ತು ಅವರು ಪೂರ್ಣಗೊಳಿಸಿದ ಮತ್ತು ಇನ್ನೂ ಬಾಕಿ ಇರುವ ಕೆಲಸಗಳ ಪಟ್ಟಿಯನ್ನು ಒಳಗೊಂಡಂತೆ ಪ್ರಮುಖ ವಿವರಗಳನ್ನು ಕಬೋರ್ಡ್‌ನಲ್ಲಿ ಅಂಟಿಸಿ ಇಟ್ಟಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ.
ಕುಟುಂಬದವರು ದೂರು ನೀಡಿದ ನಂತರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗುವುದು. ವಿವರವಾದ ತನಿಖೆ ನಡೆಯುತ್ತಿದೆ, ”ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.