Advertisement
ಬೆಂಗಳೂರು: ವಾಹನಗಳಿಂದ ತುಂಬಿತುಳುಕುವ ರಸ್ತೆಗಳು ಕ್ರಿಕೆಟ್ ಆಡುವಷ್ಟು ಖಾಲಿ ಖಾಲಿ, ಅಲ್ಲಲ್ಲಿ ಬೈಕ್ ವೀಲ್ಹಿಂಗ್‌ನಂತಹ ಅಪಾಯಕಾರಿ ಪ್ರದರ್ಶನಗಳು, ಟಿಕ್‌ಟಾಕ್ ಸ್ಟಾರ್‌ಗಳಿಗೆ ವೇದಿಕೆಯಾದ ಮೇಲ್ಸೇತುವೆಗಳು, ಸೆಲ್ಫಿ ವಿಡಿಯೋ ಮಾಡಿ ವೈದ್ಯರು, ಸೈನಿಕರಿಗೆ ಅಭಿನಂದನೆ ಸಲ್ಲಿಸುವ ಕಸರತ್ತುಗಳು. ನಗರದಲ್ಲಿ ಭಾನುವಾರ “ಜನತಾ ಕರ್ಫ್ಯೂ’ ಹಿನ್ನೆಲೆಯಲ್ಲಿ ಕಂಡುಬಂದ ದೃಶ್ಯಗಳಿವು.
Related Articles
Advertisement
ಟಿಕ್‌ಟಾಕ್ ಸೆಲ್ಫಿ ಸ್ಟಾರ್ಸ್: ಮತ್ತೂಂದೆಡೆ ಟಿಕ್‌ಟಾಕ್ ಸ್ಟಾರ್‌ಗಳು ರಸ್ತೆ, ಮಾಲ್, ಬಸ್ ನಿಲ್ದಾಣಗಳ ಮುಂಭಾಗ ನಿಂತು ವಿಡಿಯೋಗಳನ್ನು ಮಾಡುತ್ತ, ಜನತಾ ಕರ್ಫ್ಯೂ ಬಗ್ಗೆ ವಿವರಣೆ ಕೊಡುತ್ತಿದ್ದರು. ಇನ್ನು ಸೆಲ್ಫಿ ಸ್ಟಾರ್‌ಗಳು, “ಇದು ನಮ್ಮ ಬೆಂಗಳೂರು ಹೇಗಿದೆ ನೋಡಿ’, “ಈ ಮೊದಲು ಈ ರೀತಿಯ ಬೆಂಗಳೂರು ಕಂಡಿದ್ದಿರಾ? ಸಾಧ್ಯವೇ ಇಲ್ಲವಲ್ಲ?’ ಎಂದು ಹೇಳುತ್ತಾ ನಗರದ ದರ್ಶನ ಮಾಡಿಸುತ್ತಿದ್ದರು.
ಒಂದಷ್ಟು ಮಂದಿ ಬೆಳಗ್ಗೆಯೇ ಸೆಲ್ಫಿ ವಿಡಿಯೋ ಮಾಡಿ, ಪ್ರಧಾನಿ ಮೋದಿ ಅವರ ಮಾತಿನಂತೆ ವೈದ್ಯರು, ಸೈನಿಕರು, ಪೌರಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡುತ್ತಿದ್ದರು. ತುಸು ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ಪೊಲೀಸರು, ಮುಖಗವಸು ಧರಿಸಿಕೊಂಡು ಕರ್ತವ್ಯ ನಿರ್ವಹಿಸಿದರು. ಹೈಗ್ರೌಂಡ್ಸ್ ಠಾಣೆ ಆವರಣದಲ್ಲಿ ಸಂಚಾರ ಪೊಲೀಸರು ಕೂಡ ಕ್ರಿಕೆಟ್ ಆಡುವ ಮೂಲಕ ಗಮನಸೆಳೆದರು.
ಆಯುಕ್ತರ ರೌಂಡ್ಸ್: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಜನತಾ ಕರ್ಫ್ಯೂ ಸಂಬಂಧ ನಗರಾದ್ಯಂತ ಸಂಚರಿಸಿ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ ಮಾತನಾಡಿದ ಅವರು, ಅಭೂತಪೂರ್ವ ಬೆಂಬಲ ಸಿಕ್ಕಿದೆ. ಸ್ವಯಂಪ್ರೇರಿತವಾಗಿ ಜನ ಹೊರಗಡೆ ಬರುತ್ತಿಲ್ಲ. ನಾನು ಚಿಕ್ಕವನಿದ್ದಾಗ 1971ರಲ್ಲಿ ಇಂಡಿಯಾ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಈ ರೀತಿ ಆಗಿತ್ತು. ಆಗ ಬೆಂಗಳೂರು ಇಷ್ಟು ಬೆಳೆದಿರಲಿಲ್ಲ’ ಎಂದು ಮೆಲುಕುಹಾಕಿದರು. ಮಹಿಳಾ ಕಾನ್‌ಸ್ಟೆಬಲ್‌ಗೆ ಕೊರೊನ ವೈರಸ್ ದೃಢಪಟ್ಟಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಇದೇ ವೇಳೆ ಆಯುಕ್ತರು ಸ್ಪಷ್ಟಪಡಿಸಿದರು.
ಕೆ.ಆರ್.ಮಾರುಕಟ್ಟೆ ಸ್ತಬ್ಧ: ಜನತಾ ಕರ್ಫ್ಯೂಗೆ ವ್ಯಾಪಾರಸ್ಥರು, ವರ್ತಕರ ಸಂಘಗಳು ಬೆಂಬಲ ನೀಡಿದರು. ಪರಿಣಾಮ ಕೆ.ಆರ್. ಮಾರುಕಟ್ಟೆ ಸ್ತಬ್ಧವಾಗಿತ್ತು. ಸುಮಾರು 300ಕ್ಕೂ ಅಧಿಕ ಮಳಿಗೆಗಳನ್ನು ಬಂದ್ ಮಾಡಿ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಲಾಗಿತ್ತು. ಮಾರುಕಟ್ಟೆ ಸುತ್ತಲಿನ ಎಲೆಕ್ಟ್ರಾನಿಕ್ ವಸ್ತುಗಳ ಮಳಿಗೆಗಳು ಕೂಡ ಬಂದ್ ಆಗಿದ್ದವು.
ಮೆಜೆಸ್ಟಿಕ್‌ನಲ್ಲಿ ಊಟದ ವ್ಯವಸ್ಥೆ: ಈ ಮಧ್ಯೆ ಭಿಕ್ಷುಕರು, ನಿರ್ಗತಿಕರು, ಸೂರು ಇಲ್ಲದ ಕಾರ್ಮಿಕರು ರಸ್ತೆ ಬದಿ ತುತ್ತು ಅನ್ನಕ್ಕಾಗಿ ಪರದಾಟ ನಡೆಸಿದರು. ಈ ಸಂದಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕೆಲ ಸ್ವಯಂಸೇವಾ ಸಂಘಟನೆಗಳು ಅಂತಹವರ ನೆರವಿಗೆ ಧಾವಿಸಿದವು. ಮೆಜೆಸ್ಟಿಕ್‌ನಲ್ಲಿ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಈ ದೃಶ್ಯ ಕಂಡುಬಂತು.
ಕರ್ಫ್ಯೂಯೂ ನಡುವೆ ವಿವಾಹ: ಜನತಾ ಕರ್ಫ್ಯೂಯೂ ಪರಿಣಾಮ ಖಾಲಿ ಹೊಡೆಯುತ್ತಿದ್ದ ರಾಜಾಜಿನಗರದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ವಿವಾಹ ನಡೆದಿದೆ. ಮೂರು ತಿಂಗಳ ಹಿಂದೆ ಯಶವಂತಪುರದ ವೀರೇಶ್ ಮತ್ತು ಕೆಂಚನಪುರ ಕ್ರಾಸ್‌ನ ವಿಸ್ಮಯ ಜೋಡಿಯ ನಿಶ್ಚಿತಾರ್ಥ ನಡೆದಿತ್ತು. ಅಲ್ಲದೆ, ಅದ್ಧೂರಿ ವಿವಾಹಕ್ಕೆ ಕಲ್ಯಾಣ ಮಂಟಪವನ್ನೂ ಕಾದಿರಿಸಲಾಗಿತ್ತು. ಆದರೆ, ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಧಿಸಿದ್ದ “ಜನತಾ ಕರ್ಫ್ಯೂಯೂ’ ಹಿನ್ನೆಲೆ, ಆಹ್ವಾನಿತರು ಮದುವೆ ಕಾರ್ಯಕ್ರಮಕ್ಕೆ ಬರಲಿಲ್ಲ. ಎರಡೂ ಕಡೆಯ ಕೇವಲ ತಲಾ 20 ಮಂದಿಯಂತೆ ಹತ್ತಿರದ ಸಂಬಂಧಿಗಳ ಸಮ್ಮುಖದಲ್ಲಿ ವಧುವರರು ಸಪ್ತಪದಿ ತುಳಿದರು.
ಪ್ರಯಾಣಿಕರ ಪರದಾಟ: “ಜನತಾ ಕರ್ಫ್ಯೂ’ ಅರಿವಿಲ್ಲದೆ ಬೇರೆ ಊರುಗಳಿಗೆ ಬಂದ ನೂರಕ್ಕೂ ಅಧಿಕ ಮಂದಿ ನಗರದ ಕೆಲವೆಡೆ ಸಮಸ್ಯೆ ಅನುಭವಿಸಿದರು. ಬಸ್ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣಗಳಿಗೆ ಬಂದಿಳಿದ ಬಹುತೇಕ ಮಂದಿ ಮುಂಜಾನೆ 7ರವರೆಗೆ ಪ್ರಯಾಣಕ್ಕೆ ಅನುಕೂಲ ಆಗಬಹುದು ಎಂದು ತಿಳಿದಿದ್ದರು. ಆದರೆ, ಲೆಕ್ಕಾಚಾರ ಉಲ್ಟಾ ಆಗಿತ್ತು. ಇದರಿಂದ ಕಂಗಾಲಾದ ಪ್ರಯಾಣಿಕರು ನಿಗದಿತ ಸ್ಥಳ ತಲುಪಲು ಪರದಾಡಿದರು. ಕೆಲವರು ಸಂಬಂಧಿಕರು, ಸ್ನೇಹಿತರ ನೆರವು ಪಡೆದು ಗೂಡು ಸೇರಿದರು. ನಗರ ರೈಲ್ವೆ ನಿಲ್ದಾಣಕ್ಕೆ ಬೇರೆ ರಾಜ್ಯಗಳು ಹಾಗೂ ಬೇರೆ ಕಡೆ ತೆರಳಬೇಕಿದ್ದ 50ಕ್ಕೂಅಧಿಕ ಮಂದಿ ಆಗಮಿಸಿದ್ದರು.
ಆದರೆ ರೈಲು ಸಂಚಾರವೂ ಬಂದ್ ಆಗಿದ್ದರಿಂದ ನಿರಾಸೆ ಅನುಭವಿಸಿದರು. ಕೊನೆಗೆ ರೈಲ್ವೆ ಪೊಲೀಸರು ಹಾಗೂ ಅಧಿಕಾರಿಗಳು ಪ್ರಯಾಣಿಕರಿಗೆ ತಿಳಿಸಿ ಎಲ್ಲರನ್ನೂ ಹೊರಗೆ ಕಳುಹಿಸಿದರು. ಈ ಮಧ್ಯೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ದುಬೈನಿಂದ ಆಗಮಿಸಿದ್ದ ಮಹಿಳೆ ಕೆಲಕಾಲ ಆತಂಕ ಸೃಷ್ಟಿಸಿದಳು. ಪೊಲೀಸರು ಹಾಗೂ ರೈಲು ಅಧಿಕಾರಿಗಳು ಆಕೆಯನ್ನು ವಶಕ್ಕೆ ಪಡೆದು ವೈದ್ಯರಿಂದ ವೈದ್ಯಕೀಯ ತಪಾಸಣೆ ನಡೆಸಿದರು. ನಂತರ ಗೊಂದಲ ಬಗೆಹರಿಯಿತು.
ಜನತಾ ಕರ್ಫ್ಯೂಗೆ ನಮ್ಮೆಲ್ಲರ ಬೆಂಬಲ ನೀಡಿ ಅಂಗಡಿ- ಮುಂಗಟ್ಟು ಬಂದ್ ಮಾಡಿ ಮನೆಯಲ್ಲಿಯೇ ಇದ್ದೇವೆ. ಜನರು ವೈರಸ್ ವಿರುದ್ಧ ಸಮರ ಸಾರಬೇಕು. ಯಾರೂ ಕೊರೊನಾ ಸಂಬಂಧಿತ ವದಂತಿಗಳಿಗೆ ಕಿವಿಗೊಡಬಾರದು.-ನಾಗರಾಜ್, ಬಸವನಗುಡಿ ನಿವಾಸಿ ಈ ಆಚರಣೆ ಒಂದು ದಿನಕ್ಕೆ ಸೀಮಿತವಾಗದೆ, ವೈರಸ್ ನಿರ್ಮೂಲನೆಗೆ ಮುಂದಿನ ದಿನಗಳಲ್ಲಿಯೂ ಇದಕ್ಕೆ ಕೈಜೋಡಿಸ ಬೇಕು. ಆಗ ಮಾತ್ರ ದೇಶದಿಂದ ಅದನ್ನು ಹೊರಹಾಕಲು ಸಾಧ್ಯ.
-ಗಿರೀಶ್, ಬೆಂಗಳೂರು ನಿವಾಸಿ ಮುಂದಿನ ಹತ್ತು ದಿನಗಳ ಕಾಲ ಮುಂದುವರಿದರೆ ಕೊರೊನಾ ವೈರಸ್‌ನಿಂದ ಪಾರಾಗಬಹುದು. ಕರ್ಫ್ಯೂನಿಂದ ವ್ಯಾಪಾರ-ವಹಿವಾಟುಗಳಿಗೆ ತೊಂದರೆ ಉಂಟಾಗಿದೆ. ಆದರೂ ದೇಶದ ಹಿತದೃಷ್ಟಿಯಿಂದ ಇದು ಅಗತ್ಯ.
-ಮಹೇಶ್ ಗೌಡ, ರಾಜರಾಜೇಶ್ವರಿ ನಗರ ಖಾಸಗಿ ನೌಕರರು ಕೆಲಸವಿಲ್ಲದೆ ಮನೆಯಲ್ಲಿಯೇ ಕುಳಿತಿದ್ದು, ಜೀವನ ನಡೆಸಲು ತೊಂದರೆ ಅನುಭವಿಸುತ್ತಿದ್ದಾರೆ. ಆಟೋ, ಕ್ಯಾಬ್‌ನವರು ವಾಹನ ಖರೀದಿಗೆ ಪಡೆದ ಸಾಲಕ್ಕೆ ಬಡ್ಡಿ ಕಟ್ಟಲು ತೊಂದರೆಯಾಗಿದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು.
-ಶರತ್, ಕೆಂಗೇರಿ