Advertisement

ಸಿಲಿಕಾನ್‌ ಸಿಟಿಗಾಗಿ ಬೆಂಗಳೂರು-ಹೈದರಾಬಾದ್‌ ಟ್ವೀಟ್‌ ಸಮರ

02:16 AM Apr 05, 2022 | Team Udayavani |

ಸ್ಟಾರ್ಟ್‌ಅಪ್‌ಗಳ ರಾಜಧಾನಿ, ದೇಶದ ಐಟಿ ಸಿಟಿ ಆಗಿರುವ ಬೆಂಗಳೂರಿನ ಸ್ಟಾರ್ಟ್‌ ಅಪ್‌ಗ್ಳ ಮೇಲೆ ನೆರೆಯ ತೆಲಂಗಾಣ ಸರಕಾರ ಕಣ್ಣು ಹಾಕಿದೆ. ಉದ್ಯಾನನಗರಿಯ ರಸ್ತೆ, ಫ‌ುಟ್‌ಪಾತ್‌, ಟ್ರಾಫಿಕ್‌, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸ್ಟಾರ್ಟ್‌ಅಪ್‌ ಒಂದರ ಸಿಇಒ ಮಾಡಿದ ಟ್ವೀಟ್‌ ಎರಡು ರಾಜ್ಯಗಳ ನಡುವೆ ಅಭಿವೃದ್ಧಿ ಸಮರಕ್ಕೆ ನಾಂದಿ ಹಾಡಿದೆ. ತೆಲಂಗಾಣ ಸಚಿವ ಕೆ.ಟಿ. ರಾಮ ರಾವ್‌, ಕೆಪಿಸಿಸಿ ಅಧ್ಯಕ್ಷ  ಡಿ.ಕೆ. ಶಿವಕುಮಾರ್‌, ಸಚಿವರಾದ ಅಶ್ವತ್ಥನಾರಾಯಣ, ಡಾ|ಸುಧಾಕರ್‌ ಭಾಗಿಯಾಗಿದ್ದಾರೆ.

Advertisement

ವಿವಾದ ಆರಂಭ ಎಲ್ಲಿ?
ಮಾ. 30ರಂದು ಖಾತಾಬುಕ್‌ ಮತ್ತು ಹೌಸಿಂಗ್‌ ಡಾಟ್‌ ಕಾಂ ಸ್ಟಾರ್ಟ್‌ಅಪ್‌ನ ಸಿಇಒ ರವೀಶ್‌ ನರೇಶ್‌ ಅವರು ಎಚ್‌ಎಸ್‌ಆರ್‌ ಲೇಔಟ್‌ ಮತ್ತು ಕೋರಮಂಗಲದ ರಸ್ತೆಗಳ ದುಃಸ್ಥಿತಿ ಬಗ್ಗೆ ಟ್ವಿಟರ್‌ನಲ್ಲಿ ಬೆಳಕು ಚೆಲ್ಲಿದ್ದರು. ನಾವು ಬಿಲಿಯನ್‌ ಡಾಲರ್‌ಗಟ್ಟಲೆ ತೆರಿಗೆ ಕಟ್ಟುತ್ತಿದ್ದೇವೆ. ಆದರೆ ಕೆಟ್ಟ ರಸ್ತೆಗಳು, ದಿನನಿತ್ಯ ವಿದ್ಯುತ್‌ ಕಡಿತ, ಕಳಪೆ ದರ್ಜೆಯ ನೀರು ಸಂಪರ್ಕ, ಬಳಸಲಾಗದಂಥ ಫ‌ುಟ್‌ಪಾತ್‌ಗಳನ್ನು ಹೊಂದಿದ್ದೇವೆ. ಬೆಂಗಳೂರಿಗೆ ಹೋಲಿಸಿದರೆ ಹಳ್ಳಿಗಳಲ್ಲೇ ಉತ್ತಮ ಮೂಲಸೌಕರ್ಯಗಳಿವೆ ಎಂದಿದ್ದರು.

ಹೈದರಾಬಾದ್‌ಗೆ ಬನ್ನಿ ಎಂದ ಕೆಟಿಆರ್‌
“ಹೈದರಾಬಾದ್‌ಗೆ ಬನ್ನಿ. ನಾವು ಅತ್ಯುತ್ತಮ ಮೂಲಸೌಕರ್ಯ ಹೊಂದಿದ್ದೇವೆ. ನಮ್ಮ ಸರಕಾರ 3 ಐ ಮಂತ್ರ ಗಳಾದ ಇನ್ನೊವೇಶನ್‌, ಇನ್‌ಫ್ರಾಸ್ಟ್ರಕ್ಚರ್‌ ಮತ್ತು ಇನ್‌ಕ್ಲೂಸಿವ್‌ ಗ್ರೋಥ್‌ ಹೊಂದಿದೆ’ ಎಂದು ರವೀಶ್‌ ನರೇಶ್‌ ಟ್ವೀಟ್‌ಗೆ ತೆಲಂಗಾಣದ ಸಚಿವ ಕೆ.ಟಿ. ರಾಮರಾವ್‌ ಪ್ರತಿಕ್ರಿಯಿಸಿದ್ದರು.

ಡಿಕೆಶಿ ಹೇಳಿದ್ದೇನು?
“ಕೆಟಿಆರ್‌, ಮೈ ಫ್ರೆಂಡ್‌, ನಾವು ನಿಮ್ಮ ಸವಾಲನ್ನು ಒಪ್ಪಿಕೊಂಡಿದ್ದೇವೆ. 2023ರ ಅಂತ್ಯದ ವೇಳೆಗೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಬರಲಿದೆ. ಬೆಂಗಳೂರಿನ ವೈಭವವನ್ನು ಮರುಸ್ಥಾಪಿಸುತ್ತೇವೆ. ದೇಶ‌ದ ಅತ್ಯುತ್ತಮ ನಗರವನ್ನಾಗಿ ಮಾಡುತ್ತೇವೆ’.

ಆರೋಗ್ಯಕರ ಸ್ಪರ್ಧೆ ಇರಲಿ: ಕೆಟಿಆರ್‌
“ಡಿಯರ್‌ ಡಿ.ಕೆ.ಶಿ. ಅಣ್ಣಾ, ಸವಾಲನ್ನು ಒಪ್ಪಿಕೊಂಡಿದ್ದೇನೆ. ಹೈದರಾಬಾದ್‌ ಮತ್ತು ಬೆಂಗಳೂರು ನಮ್ಮ ಯುವಜನರಿಗೆ ಉದ್ಯೋಗ ನೀಡುವಲ್ಲಿ, ದೇಶದ ವೈಭವವನ್ನು ಬೆಳಗಿಸುವಲ್ಲಿ ಆರೋಗ್ಯಕರ ಸ್ಪರ್ಧೆ ಮಾಡಲಿ. ಈಗ ಮೂಲಸೌಕರ್ಯ, ಐಟಿ -ಬಿಟಿ ಬಗ್ಗೆ ಗಮನಹರಿಸಿ. ಹಲಾಲ್‌ -ಹಿಜಾಬ್‌ ಬಗ್ಗೆ ಬೇಡ’ ಎಂದು ಡಿಕೆಶಿ ಟ್ವೀಟ್‌ಗೆ ಕೆ.ಟಿ. ರಾಮರಾವ್‌ ಪ್ರತಿಕ್ರಿಯಿಸಿದ್ದರು.

Advertisement

ಉತ್ತಮ ಅಭಿರುಚಿ ಅಲ್ಲ
“ಕೆಟಿಆರ್‌ ಟ್ವೀಟ್‌ ಉತ್ತಮ ಅಭಿರುಚಿ ಹೊಂದಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಇಂಥ ವರ್ತನೆ ತೋರಬಾರದು. ಭಾರತೀಯರಾದ ನಾವು ಜಗತ್ತಿನ ಎದುರು ಜತೆಯಾಗಿ ಹೋರಾಟ ನಡೆಸಬೇಕು’ ಎಂದು ಸಚಿವ ಅಶ್ವತ್ಥನಾರಾಯಣ ಮರುಟ್ವೀಟ್‌ ಮಾಡಿದ್ದರು.

ಡಿಯರ್‌ ಡಿ.ಕೆ. ಶಿವಕುಮಾರ್‌ ಮತ್ತು ಕೆ.ಟಿ. ರಾಮರಾವ್‌ ಅವರೇ, 2023ರಲ್ಲಿ ನೀವಿಬ್ಬರೂ ಗಂಟುಮೂಟೆ ಕಟ್ಟಿ, ನಿಮಗಿಷ್ಟ ಬಂದ ಸ್ಥಳಕ್ಕೆ ಹೋಗಬಹುದು. ಬಿಜೆಪಿಯ ಡಬಲ್‌ ಎಂಜಿನ್‌ ಸರಕಾರಗಳು ಕರ್ನಾಟಕದ ವೈಭವವನ್ನು ಎತ್ತಿಹಿಡಿಯುವುದಷ್ಟೇ ಅಲ್ಲ, ತೆಲಂಗಾಣವನ್ನು ಪ್ರಗತಿ ಮತ್ತು ಸಮೃದ್ಧಿಯ ಹೆದ್ದಾರಿಯಲ್ಲಿ ಕರೆದುಕೊಂಡು ಹೋಗುತ್ತವೆ.
– ಬಿಜೆಪಿ ಕರ್ನಾಟಕ

ನಮ್ಮ ಸ್ಪರ್ಧೆ ಜಾಗತಿಕ ಮಟ್ಟದಲ್ಲಿ.ಕೆಟಿಆರ್‌ ಅವರೇ, ನಿಮಗೆ ಗೊತ್ತಿರಲಿ; ಬೆಂಗಳೂರು ಭಾರತದ ಇತರ ನಗರಗಳು ಅಥವಾ ರಾಜ್ಯಗಳ ಜತೆ ಎಂದಿಗೂ ಸ್ಪರ್ಧೆಯಲ್ಲಿ ಇರಲಿಲ್ಲ. ನಮ್ಮ ಸ್ಪರ್ಧೆ ಏನಿದ್ದರೂ ಸಿಲಿಕಾನ್‌ ವ್ಯಾಲಿ, ಸಿಂಗಾಪುರ ಮತ್ತು ಟೆಲ್‌ಅವೀವ್‌ ಜತೆಗೆ ಮಾತ್ರ. ಹಾಗೆಯೇ ನಮ್ಮ ಸ್ಪರ್ಧೆ ಏನಿದ್ದರೂ ಜಾಗತಿಕ ಮಟ್ಟದಲ್ಲಿ. ಬೆಂಗಳೂರಿನವರಾದ ನಾವು ಇತರ ದೇಶಗಳು ಮತ್ತು ರಾಜ್ಯಗಳ ಜನರಿಗೆ ಆತಿಥ್ಯ ನೀಡುತ್ತಿದ್ದೇವೆ ಎಂಬ ಬಗ್ಗೆ ಹೆಮ್ಮೆ ಇದೆ.
-ಡಾ| ಕೆ. ಸುಧಾಕರ್‌, ಆರೋಗ್ಯ ಸಚಿವ

ಕೃಷ್ಣ ವರ್ಸಸ್‌ ಚಂದ್ರಬಾಬು ನಾಯ್ಡು
ದೇಶದಲ್ಲಿ ಐಟಿ-ಬಿಟಿ ಋತು ಆರಂಭವಾಗುವ ಹೊತ್ತಿನಲ್ಲಿಯೂ ಕರ್ನಾಟಕ ಮತ್ತು ಆಂಧ್ರ ನಡುವೆ ಇಂಥದ್ದೇ ಒಂದು ಪೈಪೋಟಿ ಇತ್ತು. 2000ರಲ್ಲಿ ಈ ಸ್ಪರ್ಧೆ ಆರಂಭವಾಗಿತ್ತು. ಆಗ ಕರ್ನಾಟಕದಲ್ಲಿ ಸಿಎಂ ಆಗಿದ್ದವರು ಎಸ್‌.ಎಂ. ಕೃಷ್ಣ. ಅತ್ತ ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಸಿಎಂ ಆಗಿದ್ದರು. ಐಟಿ ಕಂಪೆನಿಗಳನ್ನು ತಮ್ಮ ಕಡೆಗೆ ಸೆಳೆಯಲು ಇಬ್ಬರೂ ಸಿಎಂಗಳು ಪೈಪೋಟಿ ನಡೆಸುತ್ತಿದ್ದರು. ಆದರೆ ಕೊನೆಗೆ ಗೆದ್ದದ್ದು ಕರ್ನಾಟಕ ಎಂಬುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next