Advertisement

ಬೆಂಗಳೂರಿಗೇ ದಂಡ ದುಬಾರಿ!

12:33 AM Feb 13, 2020 | Lakshmi GovindaRaj |

ಬೆಂಗಳೂರು: ಸಾರಿಗೆ-ಸಂಚಾರ ನಿಯಮ ಉಲ್ಲಂಘನೆಗೆ ದೊಡ್ಡ ಮೊತ್ತದ ದಂಡ ತೆರುವುದರಿಂದ ತಾತ್ಕಾಲಿಕವಾಗಿ ರಿಲೀಫ್ ಪಡೆದಿದ್ದ ವಾಹನ ಬಳಕೆದಾರರಿಗೆ ಮತ್ತೆ ದುಬಾರಿ ದಂಡ ತೆರುವ ಕಾಲ ಸನ್ನಿಹಿತವಾಗುತ್ತಿರುವಂತೆ ಕಾಣುತ್ತಿದೆ!

Advertisement

ಸಾರಿಗೆ ನಿಯಮ ಉಲ್ಲಂಘನೆಗೆ ದೊಡ್ಡ ಮೊತ್ತದ ದಂಡ ವಿಧಿಸುವ ಸಂಬಂಧ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್‌ 200ಕ್ಕೆ ತಿದ್ದುಪಡಿ ತಂದ ಬೆನ್ನಲ್ಲೇ ಕಳೆದ ವರ್ಷ ದರ ಪರಿಷ್ಕರಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ ಮಾಹಿತಿ ಕೊರತೆ, ದುಬಾರಿ ದಂಡದ ಕಾರಣಕ್ಕೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಯ್ದ ನಿಯಮ ಉಲ್ಲಂಘನೆಗೆ ದಂಡ ಮೊತ್ತವನ್ನು ತಾತ್ಕಾಲಿಕವಾಗಿ ಇಳಿಕೆ ಮಾಡಲಾಗಿತ್ತು. ಈ ಮಧ್ಯೆ, ಜಾಗೃತಿ ಕಾರ್ಯಕ್ಕೆ ಒತ್ತು ನೀಡಿದ್ದ ರಾಜ್ಯ ಸರ್ಕಾರ ಸದ್ಯದಲ್ಲೇ ಕೇಂದ್ರ ಸರ್ಕಾರ ವಿಧಿಸಿರುವ ದಂಡ ಮೊತ್ತ ಹೇರಲು ಗಂಭೀರ ಚಿಂತನೆ ನಡೆಸಿದೆ.

ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರದ ಅಧಿಸೂಚನೆ ಹೊರಬಿದ್ದರೂ ಜಾರಿಗೊಳಿಸುವ ಹಂತದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಅಧಿಕಾರಕ್ಕೆ ಬಂದ ಆರಂಭದಲ್ಲೇ ದುಬಾರಿ ದಂಡ ವಿಧಿಸಿ ಜನರ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸಲು ತಾತ್ಕಾಲಿಕವಾಗಿ ದಂಡ ಮೊತ್ತ ಇಳಿಕೆ ಮಾಡಿತ್ತು. ಇದೀಗ ಸರ್ಕಾರದ ಆರು ತಿಂಗಳ ಆಡಳಿತ ಪೂರ್ಣಗೊಳ್ಳುತ್ತಿದ್ದು, ಮೂಲ ದಂಡಗಳನ್ನೇ ವಿಧಿಸಲು ಸಿದ್ಧತೆ ನಡೆಸಿದೆ.

ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ: ದುಬಾರಿ ದಂಡ ಪ್ರಯೋಗಕ್ಕೆ ಅಕ್ಷರಶಃ ನಲುಗಿದ ವಾಹನ ಬಳಕೆದಾರರು ಭಾರೀ ಆಕ್ರೋಶ ವ್ಯಕ್ತಪಡಿಸಿ, ನಗರದಲ್ಲಿ ದಂಡ ಸಂಗ್ರಹಿಸುತ್ತಿದ್ದ ಸಂಚಾರ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳು ಜರುಗಿದವು. ಈ ಮಧ್ಯೆ ಕೆಲ ಸಂಚಾರ ಪೊಲೀಸರು ಪ್ರಕರಣ ದಾಖಲಿಸದಿರಲು ವಾಹನ ಸವಾರರಿಂದ ದಂಡದ ಕಾಲುಭಾಗದ ಮೊತ್ತವನ್ನು ಲಂಚದ ರೂಪದಲ್ಲಿ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದವು.

ಅಲ್ಲದೆ, ಪೊಲೀಸ್‌ ಸಿಬ್ಬಂದಿಯೇ ನಿಯಮ ಉಲ್ಲಂಘನೆ ಮಾಡುತ್ತಿದ್ದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಪೊಲೀಸ್‌ ಇಲಾಖೆ ಮತ್ತು ರಾಜ್ಯ ಸರ್ಕಾರವನ್ನು ಪ್ರಶ್ನಿಸಲಾರಂಭಿಸಿದ್ದರು. ಆ ಬೆನ್ನಲ್ಲೇ ಹಿರಿಯ ಅಧಿಕಾರಿಗಳು ಕೆಳ ಹಂತದ ಸಿಬ್ಬಂದಿಗೆ ಎಚ್ಚರಿಕೆ ನೀಡುವಂತಾಯಿತು. ಅಲ್ಲದೆ, ಪ್ರತಿಯೊಬ್ಬ ಪೊಲೀಸ್‌ ಅಧಿಕಾರಿಗೆ ದಂಡ ವಿಧಿಸುವ ಮೊದಲು ವಾಹನ ಸವಾರನಿಗೆ ಹೊಸ ಮೊತ್ತದ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚನೆಯೂ ಹೊರಬಿತ್ತು.

Advertisement

ಜಾಗೃತಿ ಆಂದೋಲನ: ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಆರಂಭದಲ್ಲಿ ಸಂಚಾರ ಪೊಲೀಸರು ಎಲ್ಲೆಡೆ ಆಂದೋಲನಗಳು, ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದರು. ಈ ಮಧ್ಯೆ, ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಪೊಲೀಸರು ಸಾರಿಗೆ ಇಲಾಖೆ ಸಹಯೋಗದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಚಾಲನಾ ಪರವಾನಗಿ ವಿತರಣೆ ಕಾರ್ಯಕ್ರಮಗಳನ್ನು ನಡೆಸಿದ್ದರು. ಬಳಿಕ ಸೆ.4ರಿಂದ ಅಧಿಕೃತವಾಗಿ ಜಾರಿಯಾಯಿತು.

ದಂಡ ಸಂಗ್ರಹದಲ್ಲಿ ಏರಿಕೆ: ಹಳೇ ದಂಡದಿಂದ ದಿನಕ್ಕೆ ಐದಾರು ಲಕ್ಷ ರೂ. ದಂಡ ಸಂಗ್ರಹಿಸುತ್ತಿದ್ದ ಸಂಚಾರ ಪೊಲೀಸರು ಪರಿಷ್ಕೃತ ದಂಡ ಪ್ರಯೋಗದ ಆರಂಭದ ಐದು ದಿನಗಳಲ್ಲಿ (ಸೆ.4ರ ಸಂಜೆ ಐದು ಗಂಟೆಯಿಂದ ಸೆ.9ರ ಬೆಳಗ್ಗೆ 10 ಗಂಟೆವರೆಗೆ) ನಗರದ 44 ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 6,813 ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ 72,49,900 ರೂ. ದಂಡ ಶುಲ್ಕ ಸಂಗ್ರಹಿಸಿದ್ದರು. ಇದು ದಿನೇ ದಿನೇ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿತ್ತು. ಅನಂತರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಕಡಿಮೆಯಾದವು ಎನ್ನುತ್ತಾರೆ ಸಂಚಾರ ಪೊಲೀಸರು.

ದಂಡದ ಸಂಗ್ರಹ ವಿವರ
ತಿಂಗಳು ಮೊತ್ತ (ಕೋಟಿ ರೂ.)
ಸೆಪ್ಟೆಂಬರ್‌ 10.67
ಅಕ್ಟೋಬರ್‌ 9.21
ನವೆಂಬರ್‌ 10.97
ಡಿಸೆಂಬರ್‌ 11.44

Advertisement

Udayavani is now on Telegram. Click here to join our channel and stay updated with the latest news.

Next