Advertisement
ಹತ್ತು ವರ್ಷಗಳ ಹಿಂದೆ ಒಂದೆರಡು ವರ್ಷ ಉತ್ತಮ ಮಳೆಯಾದ ಕಾರಣ ಭವಿಷ್ಯ ಆಶಾದಾಯಕವಾಗಿರಬಹುದೆಂದು ಊಹಿಸಿ ಪುನಃ ಎರಡು ಎಕರೆಯಲ್ಲಿ ಅಡಿಕೆ ಮರಗಳನ್ನು ಬೆಳೆಸಿದ್ದರು. ಫಸಲು ನೀಡುತ್ತಿದ್ದ ಮರಗಳು ಬರದ ಬೇಗುದಿಗೆ ನಲುಗಿವೆ. ಹೇಗಾದರು ಮಾಡಿ ಅವುಗಳನ್ನು ಉಳಿಸಿಕೊಳ್ಳಲು ಮೇಲಿಂದ ಮೇಲೆ ಎಂಟು ಕೊಳವೆ ಬಾವಿಗಳನ್ನು ಕೊರೆಯಿಸಿದ್ದಾರೆ. ಜೇಬು ಖಾಲಿಯಾಗಿದೆ. ನೀರು ಸಿಕ್ಕಿಲ್ಲ. ಸಾಲ ಹೆಗಲೇರಿದೆ. ಇದೇ ಸ್ಥಿತಿ ಮುಂದುವರಿದರೆ ಮುಂದಿನ ವರ್ಷ ಎರಡೆಕರೆ ತೋಟಕ್ಕೂ ಕೊಡಲಿ ಏಟು ನೀಡದೇ ವಿಧಿ ಇಲ್ಲ ಎನ್ನುತ್ತಾರೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮುಗಳೇಕಟ್ಟಿ ಗ್ರಾಮದ ಸಿದ್ದಪ್ಪ ಸಿದ್ದಲಿಂಗಪ್ಪ ವದ್ದಿ. ಇವರಿಗೆ ಕೃಷಿ ಈ ಬಾರಿಯೂ ಕೈ ಹಿಡಿಯುವ ಲಕ್ಷಣ ಕಾಣುತ್ತಿಲ್ಲ. ಆದರೆ ಅರ್ಧ ಎಕರೆಯ ಹೂವಿನ ಕೃಷಿ ಮಾತ್ರ ನೋವಿನಲ್ಲೂ ಮಂದಹಾಸ ಸೂಸುವಂತೆ ಮಾಡಿದೆ.
ಇವರದು ಆರು ಎಕರೆ ಕೃಷಿ ಭೂಮಿ. ನಾಲ್ಕು ಎಕರೆ ಅಡಿಕೆ ಕೃಷಿ ಇದೆ. ಒಂದು ಎಕರೆಯಲ್ಲಿ ಜೋಳ, ಒಂದೆ ಎಕರೆಯಲ್ಲಿ ಈರುಳ್ಳಿ. ಮನೆಯ ಹತ್ತಿರದಲ್ಲಿರುವ ಎರಡು ಎಕರೆಯಲ್ಲಿ ಅಡಿಕೆ ತೋಟ ಸಣ್ಣ ನೀರಿನ ಲಭ್ಯತೆಯಿಂದ ಉಳಿದುಕೊಂಡಿದೆ. ಇನ್ನೊಂದೆಡೆ ಇರುವ ತೋಟಕ್ಕೆ ನೀರಿನ ಬರ. ಜೋಳ, ಈರುಳ್ಳಿ ಬೆಳವಣಿಗೆಯ ಹಂತದಲ್ಲಿದ್ದು ಬೀಳಬಹುದಾದ ಮಳೆಯನ್ನಾಧರಿಸಿ ಫಸಲಿನ ಭಷ್ಯವಿದೆ. ಎಲ್ಲದರಿಂದಲೂ ಕೈ ಬರಿದು ಮಾಡಿಕೊಳ್ಳುವ ಬದಲು ಸಣ್ಣ ಆದಾಯ ಮೂಲವನ್ನಾದರೂ ಸೃಷ್ಟಿಸಿಕೊಳ್ಳಬೇಕೆಂದು ಎರಡು ವರ್ಷಗಳಿಂದ ಅರ್ಧ ಎಕರೆ ಬೇರೆಯವರ ಜಮೀನನ್ನು ಗುತ್ತಿಗೆ ಪಡೆದು ಹೂವಿನ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅರಳಿ ನಿಂತಿರುವ ಹೂವುಗಳು ಮುಖದಲ್ಲಿನ ನೋವು ಮರೆಸಿವೆ.
ಸಣ್ಣ ಮಂದಹಾಸ ಅರಳಿಸಿವೆ. ಚೆಂಡು ಹೂವಿನ ಕೃಷಿ
ಅರ್ಧ ಎಕರೆಯಲ್ಲಿ ಚೆಂಡು ಹೂವಿನ ಗಿಡ ಬೆಳೆಸಿದ್ದಾರೆ. ಸ್ಥಳೀಯವಾಗಿ ಸಗಟಾ ಚೆಂಡು ಹೂವು ಎಂದು ಕರೆಯಲ್ಪಡುವ ಮಾರಿಗೋಲ್ಡ್ ತಳಿಯ ಹೂವಿನ 1500 ಸಸಿಗಳನ್ನು ಗಿಡದಿಂದ ಗಿಡ ಒಂದೂವರೆ ಅಡಿ, ಸಾಲಿನಿಂದ ಸಾಲಿಗೆ ಮೂರು ಅಡಿಯಂತೆ ನಾಟಿ ಮಾಡಿದ್ದಾರೆ. ಹೊಸದುರ್ಗ ತಾಲೂಕಿನ ನರ್ಸರಿಯಿಂದ ಗಿಡಗಳನ್ನು ತಂದದ್ದು.
Related Articles
Advertisement
ಡ್ರಿಪ್ ಮೂಲಕ ನೀರುಣಿಸುತ್ತಾರೆ. ಮೂರು ಕಿಲೋಮೀಟರ್ ದೂರದಿಂದ ಪೈಪ್ ಲೈನ್ ಮೂಲಕ ನೀರು ಹರಿಸಿಕೊಂಡು ಕೃಷಿ ಹೊಂಡದಲ್ಲಿ ನೀರು ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಹೊಂಡದಿಂದ ನೀರನ್ನು ಎತ್ತಿ ಡ್ರಿಪ್ ಮೂಲಕ ಹನಿ ಹನಿಯಾಗಿ ಉಣ್ಣಿಸುತ್ತಾರೆ. ಪ್ರತೀ ಹನಿಯೂ ಬಳಕೆಯಾಗುವಂತೆ ನಿಗಾ ವಹಿಸುತ್ತಾರೆ.
ಗಿಡ ಹಚ್ಚಿ ನಲವತ್ತೆ„ದು ದಿನಕ್ಕೆ ಕೊಯ್ಲು ಆರಂಭಿಸಿದ್ದಾರೆ. ಮೊದಲ ಕಟಾವಿನಲ್ಲಿ 30 ಕೆ.ಜಿ ಹೂವು ದೊರಕಿದೆ. ವಾರಕ್ಕೆ ಎರಡು ಬಾರಿ ಹೂವು ಕೊಯ್ಲು ಮಾಡುತ್ತಾರೆ. ಪ್ರತೀ ಕಟಾವಿನಲ್ಲಿ ಎರಡು ಕ್ವಿಂಟಾಲ್ ಹೂವು ಸಿಗುತ್ತಿದೆ. ಮೂರು ತಿಂಗಳವರೆಗೆ ಇಳುವರಿ ಸಿಗಲಿದ್ದು 45-50 ಕ್ವಿಂಟಾಲ್ ಹೂವುಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಚಿತ್ರದುರ್ಗ, ಹೊಸದುರ್ಗ, ಹಿರಿಯೂರು, ಹೊಳಲ್ಕೆರೆ ಮಾರುಕಟ್ಟೆಗಳು ಹತ್ತಿರವಿರುವುದರಿಂದ ಹೂವುಗಳ ಮಾರಾಟಕ್ಕೆ ಸಮಸ್ಯೆ ಇಲ್ಲ. ಹೊಸದುರ್ಗ ಮಾರುಕಟ್ಟೆಗೆ ಬಿಡಿ ಹೂವುಗಳನ್ನು ಮಾರಾಟ ಮಾಡುವುದಿಲ್ಲ. ಬದಲಿಗೆ ಮಾಲೆಗಳನ್ನು ತಯಾರಿಸುತ್ತಾರೆ. ಕಿ.ಗ್ರಾಂ ಬಿಡಿ ಹೂವಿಗೆ 40-50 ರೂ. ದರ ಸಿಗುತ್ತದೆ. ಶ್ರಾವಣ ಮಾಸದಲ್ಲಿ ಕೆ.ಜಿ ಹೂಗೆ 60-70 ರೂ ದೊರಕಿದೆ. ಮುಂಬರುವ ಗಣೇಶ ಚತುರ್ಥಿ, ದೀಪಾವಳಿಯ ವೇಳೆಗೆ ಇನ್ನೂ ಹೆಚ್ಚಿನ ದರ ಸಿಗಬಹುದೆನ್ನುವ ಆಶಾಭಾವನೆ ಹೊಂದಿದ್ದಾರೆ.
ಆರು ಎಕರೆ ಜಮೀನು ನಮಗಿದ್ದರೂ ಅವುಗಳಿಂದ ಖರ್ಚುಮಾಡಿದ ಮೊತ್ತವನ್ನು ಗಿಟ್ಟಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಅರ್ಧ ಎಕರೆಯಲ್ಲಿನ ಚೆಂಡು ಹೂವು ನಮ್ಮನ್ನು ಬಚಾವು ಮಾಡಿದೆ ಎನ್ನುತ್ತಾ ಸಂತಸದ ನಗು ಬೀರಿದರು ಸಿದ್ದಪ್ಪ.
– ಕೋಡಕಣಿ ಜೈವಂತ ಪಟಗಾರ