ಮೈಸೂರು: ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ವೇಳೆ ಭಾರೀ ಅನಾಹುತವೊಂದು ತಪ್ಪಿದೆ. ಮಂಗಳ ವಾರ ಮಧ್ಯಾಹ್ನ 2ಗಂಟೆಗೆ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕುಸ್ತಿ ಪಂದ್ಯಾವಳಿ ಉದ್ಘಾಟನೆ ವೇಳೆ ಹೀಲಿಯಂ ಬಲೂನ್‌ಗೆ ಬೆಂಕಿ ತಗುಲಿ ಸ್ಫೋಟಗೊಂಡ ಪರಿಣಾಮ ವಿಧಾನಪರಿಷತ್ ಸದಸ್ಯ ಮರಿತಿಬ್ಬೇ ಗೌಡ ಸೇರಿದಂತೆ ಹಲವರಿಗೆ ಬೆಂಕಿಯ ಶಾಖದಿಂದ ಗಾಯವಾಗಿದ್ದು, ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಶ್ರೀಗಳಿಗೆ ಯಾವುದೇ ಗಾಯಗಳಾಗಿಲ್ಲ.
ಸುತ್ತೂರು ಜಾತ್ರೆ ಅಂಗವಾಗಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಬಿಸಿಗಾಳಿ ತುಂಬಿದ ಬಲೂನ್ ಹಾರಿ ಬಿಡುವ ಮೂಲಕ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಲು ಸಿದ್ಧತೆ ನಡೆಸಲಾಗಿತ್ತು. ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಲು ಸುತ್ತೂರು ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ರಾಜಕೀಯ ಗಣ್ಯರು, ಕುಸ್ತುಪಟುಗಳು ಸೇರಿ ಹಲವರು ಸ್ಥಳದಲ್ಲಿದ್ದರು.
ಬಲೂನ್ ಹಾರಿ ಬಿಟ್ಟ ನಂತರ ಕುಸ್ತಿ ಅಖಾಡಕ್ಕೆ ಪೂಜೆ ಸಲ್ಲಿಸಲು ಜ್ಯೋತಿ ಯನ್ನೂ ಹೊತ್ತಿಸಿ ಹಿಡಿದುಕೊಳ್ಳಲಾಗಿತ್ತು. ಈ ವೇಳೆ ಬಿಸಿಗಾಳಿ ತುಂಬಿದ ಬಲೂನ್‌ಗೆ ಆಕಸ್ಮಿಕವಾಗಿ ಜ್ಯೋತಿ ತಗುಲಿದ್ದರಿಂದ ಬಣ್ಣ ಬಣ್ಣದ ಬಲೂನ್‌ಗಳು ಸ್ಫೋಟ ಗೊಂಡು ಬೆಂಕಿಯ ಜ್ವಾಲೆಯ ಶಾಖ ತಗುಲಿತು.
ಜ್ವಾಲೆ ಸೋಕಿದ್ದರಿಂದ ಶ್ರೀಗಳ ಮುಖದಲ್ಲಿ ಉರಿ ಕಾಣಿಸಿಕೊಂಡಿತು. ಶ್ರೀಗಳ ಪಕ್ಕದಲ್ಲೇ ಇದ್ದ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ , ಬಿಜೆಪಿ ಮುಖಂಡ ಕಲ್ಮಳ್ಳಿ ಶಿವಕುಮಾರ್, ಹೊಸಕೋಟೆ ದೇವಣ್ಣ, ಸೋಮಣ್ಣ ಸೇರಿದಂತೆ ಹಲವರಿಗೆ ಸ್ಫೋಟಿಸಿದ ಬಲೂನ್‌ಗಳು ಅಂಟಿಕೊಂಡಿದ್ದರಿಂದ ತಲೆ ಹಾಗೂ ಮುಖ, ಕುತ್ತಿಗೆಯ ಭಾಗದಲ್ಲಿ ಉರಿಯ ಜೊತೆಗೆ ಚರ್ಮ ಕಿತ್ತು ಬಂದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.
ಬಲೂನ್ ಸ್ಫೋಟ ಘಟನೆಯಿಂದಾಗಿ ಜಾತ್ರೆಯಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ ಶ್ರೀಗಳು ಸೇರಿದಂತೆ ಗಾಯಾಳುಗಳಿಗೆ ಅಲ್ಲಿನ ಆರೋಗ್ಯಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಕುಸ್ತಿ ಪಂದ್ಯಾವಳಿ ಮುಂದುವರೆಯಿತು.
ಸಿಎಂ ಕರೆ: ದೃಶ್ಯ ಮಾಧ್ಯಮ ಗಳಲ್ಲಿ ಘಟನೆ ಭಿತ್ತರವಾಗಿದ್ದನ್ನು ತಿಳಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ದೂರವಾಣಿ ಕರೆ ಮಾಡಿ ಶ್ರೀಗಳ ಯೋಗ ಕ್ಷೇಮ ವಿಚಾರಿಸಿದರು.
ಸುತ್ತೂರು ಶ್ರೀ ಅಭಯ: ತಾವು ಸೇರಿದಂತೆ ಯಾರಿಗೂ ದೊಡ್ಡ ಮಟ್ಟದ ಗಾಯಗಳಾಗಿಲ್ಲ. ಕ್ಷೇಮ ವಾಗಿದ್ದು, ಯಾರೂ ಆತಂಕಪಡುವುದು ಬೇಡ. ಆಕಸ್ಮಿಕವಾಗಿ ಈ ಘಟನೆ ನಡೆದಿದ್ದು, ಘಟನೆ ಬಳಿಕ ಶ್ರೀಕ್ಷೇತ್ರದಲ್ಲಿ ಎಂದಿನ ಪೂಜೆ, ಜಾತ್ರಾ ಮಹೋತ್ಸವದ ಕಾರ್ಯ ಕ್ರಮಗಳು ನಿರ್ವಿಘ್ನವಾಗಿ ನಡೆಯುತ್ತಿದೆ ಎಂದು ಸುತ್ತೂರು ಶ್ರೀಗಳು ಸ್ಪಷ್ಟನೆ ನೀಡಿದರು.
ಘಟನೆ ಹಿನ್ನೆಲೆಯಲ್ಲಿ ದಕ್ಷಿಣ ವಲಯ ಐಜಿಪಿ ಶರಶ್ಚಂದ್ರ ಸುತ್ತೂರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಘಟನೆ ಬಗ್ಗೆ ಮಾಹಿತಿ ಪಡೆದರು.