ಉಪ್ಪಿನಂಗಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ನ. 23ರಂದು ಮುಂಜಾನೆ ಖಾಸಗಿ ಬಸ್, ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿ ಖಾಸಗಿ ಬಸ್ಸಿನಲ್ಲಿದ್ದ ಬೆಂಗಳೂರು ಮೂಲದ 14 ವಿದ್ಯಾರ್ಥಿಗಳು, ಐವರು ಉಪನ್ಯಾಸಕರು ಒಳಗೊಂಡಂತೆ 19 ಮಂದಿ ಗಾಯಗೊಂಡಿದ್ದಾರೆ.
ಬೆಂಗಳೂರು ಕಾಮಾಕ್ಷಿ ಪಾಳ್ಯದ ಸೈಂಟ್ ಲಾರೆನ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಖಾಸಗಿ ಬಸ್ಸಿನಲ್ಲಿ ನವೆಂಬರ್ 20ರಂದು ಬೆಂಗಳೂರಿನಿಂದ ಹೊರಟು ಕರಾವಳಿಯ ವಿವಿಧ ಪ್ರವಾಸಿ ತಾಣಗಳನ್ನು ಸಂದರ್ಶಿಸಿ ಬೆಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ತಡರಾತ್ರಿ 1.30ರ ಸುಮಾರಿಗೆ ಅಡ್ಡಹೊಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿ ಜಾರಿಕೊಂಡು ಹೋಗಿದೆ. ಇದೇ ವೇಳೆ ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಪಲ್ಟಿಯಾಗಿದ್ದ ಖಾಸಗಿ ಬಸ್ಗೆ ಢಿಕ್ಕಿ ಹೊಡೆಯಿತು. ಕೆಎಸ್ಸಾರ್ಟಿಸಿ ಬಸ್ಸಿಗೆ ಅದರ ಹಿಂಬದಿಯಿಂದ ಬರುತ್ತಿದ್ದ ಕಾರು ಢಿಕ್ಕಿ ಹೊಡೆಯಿತು.
ಖಾಸಗಿ ಬಸ್ಸಿನಲ್ಲಿದ್ದ 43 ವಿದ್ಯಾರ್ಥಿಗಳ ಪೈಕಿ ಚರಣ್ (16), ಚರಿತ್ (16), ಚಿನ್ಮಯ್ (17), ಶಿವಕುಮಾರ್ (16), ಹರ್ಷಿಯಾಬಾನು (16), ಮಿಲನ್ ಎಂ. (16), ರಾಖೀ ಕುಮಾರಿ (18) ಸೌಂದರ್ಯಾ (16), ಅಕ್ಷಯ್ ಎಸ್. (18), ಎಸ್. ಚಿನ್ಮಯ್ (16), ಯಶವಂತ ಕೆ. (18), ಅಭಿಷೇಕ್ ರಾಜ್ (16), ಮುಸೈಬ್ (18) ಸಾಮ್ಯುವೆಲ್ (17) ಮತ್ತು ಉಪನ್ಯಾಸಕರಾದ ಸಂಜೀವ ರಾಥೋಡ್ (28), ರಮೇಶ್ ವಿ. (40), ಪ್ರಕಾಶ್ ಜಿ. (43) ರಾಜೇಶ್ ಯು. (41) ರೂಪಾ (26) ಗಾಯಗೊಂಡವರು.
ಗಾಯಾಳುಗಳನ್ನು ನೆಲ್ಯಾಡಿ, ಪುತ್ತೂರು, ಮಂಗಳೂರಿನ ವಿವಿಧ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಅಪಘಾತಕ್ಕೀಡಾದ ಖಾಸಗಿ ಬಸ್ಸಿನ ಚಾಲಕ ಪರಾರಿಯಾಗಿದ್ದಾನೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.