Advertisement

ಮೋದಿ ಜೀ ಕ್ಯಾ ಬೋಲೆ ಆಪ್‌, ಅಚ್ಛೇ ದಿನ್‌ ಆಯೇಗಾ?

10:01 PM Jun 23, 2021 | Team Udayavani |

ಬಳ್ಳಾರಿ : “ನರೇಂದ್ರ ಮೋದಿ ಜೀ ಕ್ಯಾ ಬೋಲಿಯಾ ಆಪ್‌, ಅಚ್ಛೇದಿನ್‌ ಆಯೇಗಾ’…..! ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕದಿಂದ ರಾಜ್ಯಸಭೆ ಸದಸ್ಯ ಡಾ| ಸೈಯದ್‌ ನಾಸೀರ್‌ ಹುಸೇನ್‌ ನೇತೃತ್ವದಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ ತರಕಾರಿ ಕಿಟ್‌ಗಳ ವಿತರಣೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಪ್ರಧಾನಿ ಮೋದಿಯವರ ಬಗ್ಗೆ ಆಡಿದ ವ್ಯಂಗ್ಯದ ಮಾತುಗಳಿವು. ರಾಜ್ಯದಲ್ಲಿ ಪೆಟ್ರೋಲ್‌ ಧರ 100 ನಾಟೌಟ್‌, ಡೀಸೆಲ್‌ ಧರ 93 ರೂ., ಅಡುಗೆ ಎಣ್ಣೆ 200 ರೂ., ಅಡುಗೆ ಅನಿಲ 900 ರೂ.ಗಳಿಗೆ ಏರಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಜಿ “ಕ್ಯಾ ಬೋಲಿಯಾ ಆಪ್‌, ಅಚ್ಛೇದಿನ್‌ ಆಯೇಗಾ’ ಎಂದಿದ್ದರು.

Advertisement

ಆದರೆ, ಇದೀಗ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿಸಿದಾರೆ. ಹಾಗಾದರೆ ಇವರು ಯಾರ ಪರ, ಬಡವರ ಪರನಾ? ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಪರಾನಾ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ ಸಿದ್ದರಾಮಯ್ಯ, ಇವರು ಅಂಬಾನಿ, ಅದಾನಿ ಪರ ಎಂದು ಲೇವಡಿ ಮಾಡಿದರು. ಬರೀ ಸುಳ್ಳು ಹೇಳುವ ನರೇಂದ್ರ ಮೋದಿಯಂತಹ ಪ್ರಧಾನಿಯನ್ನು ಈ ದೇಶದಲ್ಲಿ ಈವರೆಗೂ ಬಂದಿಲ್ಲ ಎಂದು ಆರೋಪಿಸಿದ ಸಿದ್ದರಾಮಯ್ಯ, ದೇಶದಲ್ಲಿ ಇಂತಹ ಕೆಟ್ಟ ಸರ್ಕಾರಗಳು ಇವೆ. ರಾಜ್ಯದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರತಿಯೊಬ್ಬರಿಗೂ 7 ಕೆಜಿ ಅಕ್ಕಿ ಕೊಡುತ್ತಿದ್ದೆ. ಅದನ್ನು ಬಿಜೆಪಿ ಸರ್ಕಾರ ಬಂದ ಮೇಲೆ ಇಂತಹ ಕೋವಿಡ್‌ ಸಂಕಷ್ಟದಲ್ಲೂ 2 ಕೆಜಿಗೆ ಇಳಿಸಿದೆ. ಅದೇ ನಾವಾಗಿದ್ದರೆ 10 ಕೆಜಿ ಅಕ್ಕಿ ಕೊಡುತ್ತಿದ್ದೆವು. ರಾಜ್ಯದ ಜನರ ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ನಾವೂ ಸಹ ಅ ಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್‌ ಸೋಂಕು 2ನೇ ಅಲೆ ನಿಯಂತ್ರಿಸುವಲ್ಲಿ ಬಿಜೆಪಿ, ಸಿಎಂ ಯಡಿಯೂರಪ್ಪ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆಕ್ಸೀಜನ್‌, ಐಸಿಯು ಬೆಡ್‌ಗಳ ಕೊರತೆಯಿಂದ ಸಾಕಷ್ಟು ಜನರು ಮೃತಪಟ್ಟಿದ್ದಾರೆ. ಇದಕ್ಕೆ ಚಾಮರಾಜನಗರದ 36 ಜನರು ಮೃತಪಟ್ಟಿರುವುದೇ ಸಾಕ್ಷಿ. ಅಲ್ಲಿನ ಸಚಿವರು ಆಕ್ಸಿಜನ್‌ ಕೊರತೆಯಿಂದ ಕೇವಲ ಮೂರು ಜನರು ಸಾವು ಎಂದು ತಪ್ಪು ಮಾಹಿತಿ ನೀಡಿದ್ದರು. ನಂತರ ನಾನು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೋಗಿ ಪರಿಶೀಲಿಸಿದಾಗ 36 ಜನರು ಮೃತಪಟ್ಟಿರುವುದು ತಿಳಿದು ಬಂತು ಎಂದರು.

ಸರ್ಕಾರ ಮಾಡಬೇಕಿದ್ದ ಕೆಲಸ: ಬಳ್ಳಾರಿ ಸೇರಿದಂತೆ ರಾಜ್ಯದ 224 ಕ್ಷೇತ್ರಗಳಲ್ಲೂ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಕೋವಿಡ್‌ ಸೋಂಕಿತರಿಗೆ ಆಕ್ಸಿಜನ್‌, ಐಸಿಯು ಬೆಡ್‌, ವೆಂಟಿಲೇಟರ್‌ ಸೇರಿ ಆಹಾರದ ಕಿಟ್‌, ಮೆಡಿಸಿನ್‌ ಕಿಟ್‌ಗಳನ್ನು ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಇದು ನಾವು ಮಾಡಬೇಕಾದ ಕೆಲಸವಲ್ಲ. ಸರ್ಕಾರದವರು ಮಾಡಬೇಕಾದ ಕೆಲಸ. ಕಾಂಗ್ರೆಸ್‌ ಪಕ್ಷ ಸದಾ ಬಡಜನರ ನಡುವೆ ಇರುವ ಪಕ್ಷ. ಅವರಿಗೆ ಸಾಮಾಜಿಕ ನ್ಯಾಯ ಒದಗಿಸುವ ಧ್ಯೇಯ ಹೊಂದಿರುವ ಪಕ್ಷ ಎಂದು ತಿಳಿಸಿದರು.

ಇದಕ್ಕೂ ಮುನ್ನ ರಾಜ್ಯಸಭೆ ಸದಸ್ಯ ಡಾ| ಸೈಯದ್‌ ನಾಸೀರ್‌ ಹುಸೇನ್‌ ಮಾತನಾಡಿ, ಕೋವಿಡ್‌ ಸಂಕಷ್ಟದ ದಿನಗಳಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಜನರ ಜತೆಯಲ್ಲಿ ಇರಬೇಕೆಂದು ಪಕ್ಷದ ಕೇಂದ್ರ, ರಾಜ್ಯ ವರಿಷ್ಠರು ಸೂಚಿಸಿದ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಕೋವಿಡ್‌ ಆಸ್ಪತ್ರೆಗಳಿಗೆ ಭೇಟಿ ನೀಡಿ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಪತ್ತೆಹಚ್ಚಿ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿ, ಡಿಎಂಎಫ್‌ ಅನುದಾನದಲ್ಲಿ ಪೂರೈಸುವಂತೆ ಕೋರಲಾಯಿತು. ಜತೆಗೆ ಲಾಕ್‌ಡೌನ್‌ ಅವ ಯಲ್ಲಿ ಬಳ್ಳಾರಿಯ 75 ಸಾವಿರ ಮನೆಗಳಿಗೆ 5 ಲಕ್ಷ ಕೆಜಿ ತರಕಾರಿ ಕಿಟ್‌, 50 ಸಾವಿರಕ್ಕೂ ಹೆಚ್ಚು ಆಹಾರದ ಪ್ಯಾಕೇಟ್‌ಗಳನ್ನು ವಿತರಿಸಲಾಗಿದೆ. ಜತೆಗೆ ಆಕ್ಸೀಜನ್‌ ಬ್ಯಾಂಕ್‌ ತೆರೆಯಲಾಗಿದ್ದು, ಅದಕ್ಕಾಗಿ ತಾಂತ್ರಿಕ ತಂಡವನ್ನು ನಿಯೋಜಿಸಲಾಗಿದೆ.

Advertisement

ನಗರದಾದ್ಯಂತ ಸ್ಯಾನಿಟೈಸ್‌ ಮಾಡಿಸುತ್ತಿದ್ದು, ಅದಕ್ಕಾಗಿ ಟ್ಯಾಕ್ಟರ್‌ನ್ನು ಮೀಸಲಿಡಲಾಗಿದೆ ಎಂದವರು ವಿವರಿಸಿದರು. ಬಳಿಕ ಸಿದ್ದರಾಮಯ್ಯನವರು, ತರಕಾರಿ ಕಿಟ್‌ ವಿತರಿಸುವಲ್ಲಿ ಶ್ರಮಿಸಿದ ಮಹಿಳೆಯರು, ಕಾರ್ಯಕರ್ತರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಸಿ.ಕೊಂಡಯ್ಯ, ಬಿ.ನಾಗೇಂದ್ರ, ಅಲ್ಲಂ ವೀರಭದ್ರಪ್ಪ, ಭೈರತಿ ಸುರೇಶ್‌, ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ, ಮಾಜಿ ಶಾಸಕರಾದ ಬಿ.ಎಂ.ನಾಗರಾಜ್‌, ಕೆ.ಎಸ್‌.ಎಲ್‌. ಸ್ವಾಮಿ, ಶಿರಾಜ್‌ಶೇಖ್‌, ಜಿಪಂ ಸದಸ್ಯ ಅಲ್ಲಂ ಪ್ರಶಾಂತ್‌, ಮುಖಂಡರಾದ ಎಲ್‌.ಮಾರೆಣ್ಣ, ಕಮಲಾ ಮರಿಸ್ವಾಮಿ, ಕಲ್ಲುಕಂಬ ಪಂಪಾಪತಿ, ವೆಂಕಟೇಶ್‌ ಹೆಗಡೆ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next