Advertisement

ನಾಳೆಯಿಂದ ಗುಳೇದ ಲಕ್ಕಮ್ಮದೇವಿ ಜಾತ್ರೆ

05:20 PM Jan 25, 2021 | |

ಹರಪನಹಳ್ಳಿ: ತಾಲೂಕಿನ ಹುಲಿಕಟ್ಟೆ ಗ್ರಾಮದ ಸಮೀಪದ ಅರಣ್ಯದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಗುಳೇದ ಲಕ್ಕಮ್ಮದೇವಿ ಜಾತ್ರೋತ್ಸವ ಜ. 26ರಿಂದ 28ರವರೆಗೆ ಎರಡು ದಿನಗಳ ಕಾಲ ಸರಳವಾಗಿ ಆಚರಿಸಲಾಗುವುದು ಎಂದು ತಾಪಂಸದಸ್ಯ ಹುಲಿಕಟ್ಟಿ ಚಂದ್ರಪ್ಪ ತಿಳಿಸಿದರು.

Advertisement

ಹುಲಿಕಟ್ಟಿ ಗ್ರಾಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ನಿಯಮಾವಳಿ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತದ ನಿರ್ದೇಶನದ ಮೇರೆಗೆ ಪ್ರತಿ ವರ್ಷದಂತೆ ಜಾತ್ರೆ ಅದ್ಧೂರಿಯಾಗಿ ನಡೆಸುವ ಬದಲು ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಜಾತ್ರೆಗೆ ಆಗಮಿಸುವ ಭಕ್ತರು ಮಾಸ್ಕ್ ಹಾಗೂ ಸ್ಯಾನಿಟೈಸರ್‌ ಉಪಯೋಗಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಬೇಕು ಎಂದು ವಿನಂತಿಸಿಕೊಂಡರು.
ಜ. 26ರಂದು ರಾತ್ರಿ 10 ಗಂಟೆಗೆ ದೇವಿ ಮೆರವಣಿಗೆಯೊಂದಿಗೆ ಗಂಗೆ ಪೂಜೆ ನೆರವೇರಿಸಿ ಅರಣ್ಯದಲ್ಲಿರುವ ಗದ್ದುಗೆ ಸೇರುವುದು. ಜ. 27ರಂದು ಡೊಳ್ಳಿನ ಮಜಲು, ಕೋಲಿನ ಮೇಳ, ಎತ್ತಿನ ಮೆರವಣಿಗೆ ನಡೆಯಲಿದೆ.

ಜ. 28ರಂದು ಮೆರವಣಿಗೆ ಮೂಲಕ ಗದ್ದುಗೆಯಿಂದ ಹುಲಿಕಟ್ಟಿಯ ದೇವಸ್ಥಾನಕ್ಕೆ ದೇವಿ ಮರಳಲಿದ್ದಾಳೆ. ಜಾತ್ರೋತ್ಸವ ಅಂಗವಾಗಿ
ಶಾಸಕರು ಸ್ವತ್ಛತಾ ಕಾರ್ಯ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸಿದ್ದಾರೆ. ಶಾಸಕ ಜಿ. ಕರುಣಾಕರ ರೆಡ್ಡಿ, ಮಾಜಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ, ಕೆಪಿಸಿಸಿ ಮಹಿಳಾ ಘಟಕ ರಾಜ್ಯ ಕಾರ್ಯದರ್ಶಿ, ದೇವಸ್ಥಾನ ಸಮಿತಿ ಅಧ್ಯಕ್ಷರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮುಖಂಡರಾದ ಬಣಕಾರ ಗಂಗಾಧರ್‌, ಕೊಟ್ರೇಶ್‌, ಟಿ.ಹಾಲೇಶ್‌, ಭಾಷುಸಾಬ್‌, ಚಂದ್ರಪ್ಪ, ಟಿ.ಹನುಮಂತಪ್ಪ, ಬಸವರಾಜ್‌, ಶಿವಾನಂದಪ್ಪ, ಲಕ್ಕೇಶ್‌, ಹೋಮ್ಯಪ್ಪ, ಮಹದೇವಪ್ಪ, ಕೆ.ನಾಗರಾಜ್‌, ಪಕ್ಕೀರೇಶ್‌, ಬ್ರಾಹಿಂಸಾಬ್‌ ಮತ್ತಿತರರು ಉಪಸ್ಥಿತರಿದ್ದರು.

ಇಡೀ ಗ್ರಾಮವೇ ಗುಳೆ ಹೋಗಿ ಜಾತ್ರೆ ಆಚರಣೆ: ನಾಲ್ಕಾರು ತಲೆಮಾರಿನ ಹಿಂದೆ ಹುಲಿಕಟ್ಟಿ ಗ್ರಾಮದಲ್ಲಿ ಭೀಕರ ಬರಗಾಲ ಹಾಗೂ
ಪ್ಲೇಗ್‌, ಕಾಲರಾದಂತಹ ಮಾರಕ ರೋಗಗಳು ಗ್ರಾಮಸ್ಥರಲ್ಲಿ ತಲ್ಲಣ ಮೂಡಿಸಿದ್ದವು. ರೋಗಗಳ ಸಂಕಷ್ಟಕ್ಕೆ ಸಿಲುಕಿದ ಗ್ರಾಮಸ್ಥರು ಗ್ರಾಮವನ್ನೇ ತೆರೆಯಲು ಸಿದ್ಧತೆ ನಡೆಸಿದಾಗ ಗೊರವನೊಬ್ಬ ಊರ ಸಮೀಪದ ಅರಣ್ಯದಲ್ಲಿ ದೈವತ್ವಶಕ್ತಿ ನೆಲೆಯೂರಿದೆ. ಆ ದೈವ ಶಕ್ತಿಗೆ ಶ್ರದ್ಧಾಭಕ್ತಿಯಿಂದ ನಡೆದುಕೊಂಡರೇ ಕಷ್ಟಗಳೆಲ್ಲಾ ದೂರವಾಗಿ ಗ್ರಾಮದಲ್ಲಿ ಸುಭಿಕ್ಷೆ ಸಂಭ್ರಮ ಮನೆ ಮಾಡುತ್ತದೆ ಎಂದು ನುಡಿದಿದ್ದನಂತೆ. ಅದರಂತೆ ನಡೆದುಕೊಂಡಾಗ ಊರಲ್ಲಿ ಸಂಭ್ರಮ ಮನೆ ಮಾಡಿ, ಸಮೃದ್ಧ ಬೆಳೆ ಕೈಸೇರಿತು. ಅಂದಿನಿಂದ ಎರಡು ವರ್ಷಕ್ಕೊಮ್ಮೆ ವೈಭವದಿಂದ ಜಾತ್ರೆ ಸಾಗುತ್ತಾ ಬಂದಿದೆ.

Advertisement

ಇಡೀ ಹುಲಿಕಟ್ಟಿ ಗ್ರಾಮದ ಜನರು ಎರಡು ದಿನಗಳ ಕಾಲ ಊರಲ್ಲಿ ಒಂದು ನರಪಿಳ್ಳೆಯೂ ಇಲ್ಲದಂತೆ ಮಕ್ಕಳು-ಮರಿ, ಸಾಕುಪ್ರಾಣಿ ಸಮೇತ ಜಾತ್ರೆಯಲ್ಲಿ ದೇವಸ್ಥಾನದ ಬಳಿ ಬಿಡಾರ ಹೂಡುತ್ತಾರೆ. ದುರ್ಗಾದೇವಿಯ ಪ್ರತಿರೂಪದಂತಿರುವ ಶ್ರೀಗುಳೆದ ಲಕ್ಕಮ್ಮದೇವಿಗೆ ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಬಲಿ ಕೊಡುವ ಪದ್ಧತಿ ಪ್ರಾರಂಭವಾಗಿದ್ದು, ನಂತರ ಸುತ್ತಲಿನ ನಾಲ್ಕಾರು ಜಿಲ್ಲೆಯ ಅಸಂಖ್ಯಾತ ಭಕ್ತರು ಆಗಮಿಸಿ ದೇವಿಗೆ ಭಕ್ತಿ ಸಮರ್ಪಿಸುತ್ತಿದ್ದಾರೆ. ವಿಶೇಷವಾಗಿ ವಿವಿಧ ಭಾಗಗಳಿಂದ ಬಂಜಾರ ಸಮುದಾಯದ  ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವುದು ಮತ್ತೂಂದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next