ಇಂಡೋನೇಷ್ಯಾ: ಜಗತ್ತಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಇಂಡೋನೇಷ್ಯಾದ ಬಾಲಿಗೆ ಇನ್ಮುಂದೆ ವಿದೇಶಿ ಪ್ರವಾಸಿಗರು ಭೇಟಿ ನೀಡಲು 10 ಡಾಲರ್ ತೆರಿಗೆ ಪಾವತಿಸಬೇಕಾಗಿದೆ. ಬಿಬಿಸಿ ವರದಿ ಪ್ರಕಾರ, ಈ ಪ್ರವಾಸೋದ್ಯಮ ತೆರಿಗೆಯನ್ನು ಕಳೆದ ವರ್ಷ ಘೋಷಿಸಲಾಗಿದ್ದು, ಇದೀಗ ಬುಧವಾರ(ಫೆ.14)ದಿಂದ ಜಾರಿಗೊಂಡಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:Mysore; ಕಾಂಗ್ರೆಸ್ ನವರ ಕುಟುಂಬಸ್ಥರೇ ಏಜೆಂಟ್ – ಬ್ರೋಕರ್ ಗಳಾಗಿದ್ದಾರೆ: ಅಶ್ವಥ್ ನಾರಾಯಣ್
ದ್ವೀಪರಾಷ್ಟ್ರದ ಪರಿಸರ ಮತ್ತು ಸಂಸ್ಕೃತಿಯನ್ನು ರಕ್ಷಿಸುವ ಮುಖ್ಯ ಗುರಿಯೊಂದಿಗೆ ತೆರಿಗೆ ಜಾರಿಗೆ ನಿರ್ಧರಿಸಲಾಗಿದೆ ಎಂದು ಇಂಡೋನೇಷ್ಯಾ ಸರ್ಕಾರ ಹೇಳಿದೆ. ಈ ತೆರಿಗೆ ವಿದೇಶದಿಂದ ಬಾಲಿಗೆ ಆಗಮಿಸುವ ಪ್ರವಾಸಿಗರಿಗೆ ಅಥವಾ ಜಗತ್ತಿನ ವಿವಿಧ ದೇಶಗಳಿಂದ ಭೇಟಿ ನೀಡುವವರಿಗೆ ಅನ್ವಯವಾಗಲಿದೆ. ಆದರೆ ದೇಶೀಯ ಪ್ರವಾಸಿಗರಿಗೆ, ರಾಜತಾಂತ್ರಿಕ ವೀಸಾ ಹೊಂದಿದವರಿಗೆ ಹಾಗೂ ASEAN ಪ್ರಜೆಗಳಿಗೆ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಿ ಪ್ರವೇಶಿಸುವ ಎಲ್ಲಾ ವಿದೇಶಿ ಪ್ರವಾಸಿಗರು ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರಿಗೂ ತೆರಿಗೆ ಅನ್ವಯವಾಗಲಿದೆ. ಪ್ರತಿ ಬಾರಿ ಬಾಲಿಗೆ ಭೇಟಿ ನೀಡುವಾಗಲೂ ತೆರಿಗೆ ಕಟ್ಟಬೇಕು. “Love Bali” ಆನ್ ಲೈನ್ ಪೋರ್ಟಲ್ ಮೂಲಕ ತೆರಿಗೆಯನ್ನು ಪಾವತಿಸಬಹುದಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
ಒಂದು ವೇಳೆ ಪ್ರವಾಸಿಗರಿಗೆ ಆನ್ ಲೈನ್ ಮೂಲಕ ಪಾವತಿ ಮಾಡಲು ಸಾಧ್ಯವಾಗದಿದ್ದರೆ, ಇಂಡೋನೇಷ್ಯಾಕ್ಕೆ ಆಗಮಿಸಿದ ನಂತರ ಪಾವತಿಸಬಹುದಾಗಿದೆ. ವಿಮಾನ ನಿಲ್ದಾಣ ಹಾಗೂ ಜಲಮಾರ್ಗವಾಗಿ ಬರುವವರಿಗೆ ತೆರಿಗೆ ಪಾವತಿಗೆ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ.
ಬಾಲಿ ಪರಿಸರ ಪ್ರೇಮಿಗಳಿಗೆ ಹಾಗೂ ಸುಂದರ ಕಡಲತೀರಗಳಿಗೆ ಹೆಸರುವಾಸಿಯಾಗಿದೆ. ಕಳೆದ ವರ್ಷ ಜನವರಿಯಿಂದ ನವೆಂಬರ್ ವರೆಗೆ ಬಾಲಿಗೆ ಸರಿಸುಮಾರು 4.8 ಮಿಲಿಯನ್ ಪ್ರವಾಸಿಗರು ಭೇಟಿ ನೀಡಿದ್ದರು.
2023ರ ನವೆಂಬರ್ ತಿಂಗಳಿನಲ್ಲಿ ಒಂದು ಲಕ್ಷಕ್ಕೂ ಅಧಿಕ ವಿದೇಶಿ ಪ್ರವಾಸಿಗರು ಬಾಲಿಗೆ ಭೇಟಿ ನೀಡಿದ್ದರು. ಬಾಲಿಗೆ ಭಾರತ, ಚೀನಾ ಮತ್ತು ಸಿಂಗಾಪುರ್ ನಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಎಂದು ಬಿಬಿಸಿ ವರದಿ ತಿಳಿಸಿದೆ.