ಬಜಪೆ: ಬಜಪೆ- ಮಂಗಳೂರು ರಾಜ್ಯ ಹೆದ್ದಾರಿ 67ರಲ್ಲಿ ಕೆಂಜಾರು ವಿಮಾನ ನಿಲ್ದಾಣದಿಂದ ಮರವೂರು ಸೇತುವೆಯಾಗಿ ಮಂಗಳೂರು ಮಹಾನಗರ ಪಾಲಿಕೆಯ ಸ್ವಾಗತದ್ವಾರದ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದೆ. ಹೊಸ ಸೇತುವೆಯೂ ನಿರ್ಮಾಣವಾಗಿದೆ. ಆದರೆ ಮಂಗಳೂರಿನಿಂದ ವಿಮಾನ ನಿಲ್ದಾಣದ ಕಡೆಗೆ ಬರುವ ವಾಹನಗಳಿಗೆ ಮರಕಡದಲ್ಲಿ ರಾಜ್ಯ ಹೆದ್ದಾರಿ 67ರ ಪಾಲಿಕೆಯ ಸ್ವಾಗತ ದ್ವಾರದ ಬಳಿ ಮುಂದಕ್ಕೆ ಯಾವ ರಸ್ತೆ ಬಳಸಬೇಕು ಎಂಬ ಗೊಂದಲದಿಂದ ಅಪಘಾತಕ್ಕೆ
ಕಾರಣವಾಗುತ್ತಿದೆ.
ಇಲ್ಲಿ ಹಾದಿಯನ್ನು ಸೂಚಿಸುವ ಸೂಚನ ಫಲಕ ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಮರಕಡದಿಂದ ಪಾಲಿಕೆಯ ಸ್ವಾಗತ ದ್ವಾರದ ಬಳಿಕ ಏಕಮುಖ ರಸ್ತೆಯಾಗಿದೆ. ಪಾಲಿಕೆಯ ಸ್ವಾಗತ ದ್ವಾರದಿಂದ ಕೆಂಜಾರು ವಿಮಾನ ನಿಲ್ದಾಣ ತನಕ ದ್ವಿಪಥ ರಸ್ತೆಯಾಗಿದೆ. ಇಲ್ಲಿಯ ತನಕ ಮಂಗಳೂರು ಪಾಲಿಕೆಯ ವ್ಯಾಪ್ತಿ ಇದೆ.
ಮರಕಡದಿಂದ ಸ್ವಾಗತ ದ್ವಾರದ ತನಕ ಏಕಮುಖ ರಸ್ತೆಯಲ್ಲಿ ಬಂದ ವಾಹನಗಳಿಗೆ ಹೊಸ ಸೇತುವೆ ಇರುವ ರಸ್ತೆ ಕಾಣುತ್ತಿಲ್ಲ. ಇದರಿಂದ ಅವರು ಹಳೆಯ ಸೇತುವೆಯ ರಸ್ತೆಯಲ್ಲಿ ನೇರವಾಗಿ ಬರುತ್ತಿರುವುದು ಅಪಘಾತಕ್ಕೆ ಕಾರಣವಾಗಿದೆ.
ದಿನ ನಿತ್ಯ ಪ್ರಯಾಣಿಸುವವರಿಗಿಂತ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ವಾಹನಗಳೇ ಹೆಚ್ಚು ಇಲ್ಲಿ
ಸಂಚಾರ ಮಾಡುವುದರಿಂದ ಈ ರಸ್ತೆಯ ಬಗ್ಗೆ ಹೆಚ್ಚು ಮಾಹಿತಿ ಇರುವುದಿಲ್ಲ.
ವಿಮಾನ ನಿಲ್ದಾಣದಿಂದ ಹಾಗೂ ಬಜಪೆ ಕಡೆಯಿಂದ ಬರುವ ವಾಹನಗಳು ಮರವೂರು ಹಳೆ ಸೇತುವೆಯಲ್ಲಿ ನೇರವಾಗಿ ಬರುತ್ತದೆ. ಮರಕಡದಿಂದ ಬರುವ ವಾಹನಗಳು ಕೂಡ ದ್ವಾರದ ಬಳಿಕ ಎಡಕ್ಕೆ ಹೊಸ ಸೇತುವೆಯ ರಸ್ತೆಯಲ್ಲಿ ಚಲಿಸದೇ ನೇರವಾಗಿ ಹಳೆ ಸೇತುವೆ ಯಲ್ಲಿ ಸಂಚಾರ ಮಾಡಿದರೆ, ಅದು ವಾಹನಗಳು ನೇರನೇರ ಢಿಕ್ಕಿ ಹೊಡೆಯಲು ಕಾರಣವಾಗುತ್ತದೆ. ಮರಕಡದಿಂದ ನಿಲ್ದಾಣಕ್ಕೆ ಬರುವ ವಾಹನಗಳು ಈಗಲೂ ಹಳೆ ಸೇತುವೆಯಲ್ಲಿಯೇ ಬರುತ್ತಿದ್ದು, ಅಪಘಾತಕ್ಕೆ ಕಾರಣವಾಗಬಹುದು.
ಸೂಚನ ಫಲಕ ಅಗತ್ಯ
ಪಾಲಿಕೆಯ ದ್ವಾರದ ಬಳಿ ಯಾವ ಕಡೆಗೆ ತಿರುಗಬೇಕು ಎಂಬ ಸೂಚನ ಫಲಕ ಅಗತ್ಯವಾಗಿ ಬೇಕು. ಮಂಗಳೂರು, ಮರಕಡದಿಂದ ಬರುವ ವಾಹನಗಳಿಗೆ ಸಮರ್ಪಕವಾಗಿ ಕಾಣುವಂತೆ, ಮಳೆ ಬಂದರೂ, ರಾತ್ರಿಯಲ್ಲೂ ಕಾಣುವಂತೆ ಸೂಚನಾ ಫಲಕ ಹಾಕಬೇಕು.
ದ್ವಿಪಥ ರಸ್ತೆ ಕಾಮಗಾರಿ ಬಾಕಿ
ಮರಕಡದಿಂದ ಪಾಲಿಕೆಯ ಸ್ವಾಗತ ದ್ವಾರದ ಬಳಿ ತನಕ ದ್ವಿಪಥ ರಸ್ತೆ ಕಾಮಗಾರಿ ಮಾತ್ರ ಬಾಕಿ ಉಳಿದಿದ್ದು, ಇಲ್ಲಿ ವಾಹನ ಸಂಚಾರಕ್ಕೆ ಭಾರಿ ತೊಂದರೆಯಾಗಿದೆ. ಕಿರಿದಾದ ರಸ್ತೆ,ತಿರುವು, ಎರುಪೇರುಗಳಿಂದ ಕೂಡಿದೆ. ಉಳಿದ ದ್ವಿಪಥ ರಸ್ತೆ
ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕಾಗಿ ಸ್ಥಳೀ ಯರು ಆಗ್ರಹಿಸಿದ್ದಾರೆ. ಪ್ರತಿ ನಿತ್ಯ ವಾಹನಗಳು ಸದಾ ಸಾಲಾಗಿ ಸಾಗುತ್ತವೆ.