ಕುಡುಪು: ಬಿಕರ್ನಕಟ್ಟೆ – ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರಿಂದ ನೀರುಮಾರ್ಗ, ಮಲ್ಲೂರು, ಬಿ.ಸಿ. ರೋಡ್ ಕಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಬೈತುರ್ಲಿ. ಸಿಟಿ ಬಸ್, ಸರ್ವಿಸ್, ಎಕ್ಸ್‌ಪ್ರೆಸ್ ಸಹಿತ ಎಲ್ಲ ಮಾದರಿಯ ಬಸ್‌ಗಳಿಗೂ ಇಲ್ಲಿ ನಿಲುಗಡೆಯಿದ್ದು, ಪ್ರತಿನಿತ್ಯ ನೂರಾರು ಮಂದಿ ಇಲ್ಲಿ ಬಸ್‌ಗಳನ್ನು ಆಶ್ರಯಿಸಿ ನಿಲ್ಲುತ್ತಾರೆ.
ಆದರೆ ಬೈತುರ್ಲಿಯ ಬಸ್ ತಂಗುದಾಣ ದಶಕಗಳಷ್ಟು ವರ್ಷ ಹಳೆಯದಾಗಿದ್ದು, ಸದ್ಯ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿ ಅಪಾಯಕಾರಿ ಸ್ಥಿಯಲ್ಲಿದೆ. ಸುಮಾರು ಎರಡು ವರ್ಷಗಳಿಂದ ಮೇಲ್ಛಾವಣಿಯ ಪಕ್ಕಾಸು, ರೀಪುಗಳು ಹಾಳಾಗಿ ಒಂದೊಂದೇ ಸಿಮೆಂಟು ಸೀಟುಗಳು ಕಳಚಿ ಬಿದ್ದು ಸದ್ಯ ಹಿಂಬಾಗದಲ್ಲಿ ಇರುವ ಶೀಟುಗಳು ಮಾತ್ರ ಉಳಿದಿದೆ.
ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಸಾಕಷ್ಟು ಮಂದಿ ಇಲ್ಲಿ ಬಸ್ಸಿಗೆ ಕಾಯುವುದು ಸಾಮಾನ್ಯವಾಗಿದೆ. ಪ್ರಸ್ತುತ ಬಸ್ಸಿಗೆ ಕಾಯುವವರು ಯಾರೂ ತಂಗುದಾಣ ಒಳಗೆ ಹೋಗಿ ನಿಲ್ಲುವುದಿಲ್ಲ. ಹೊರಗೆ ನಿಂತರೂ ಗಾಳಿ – ಮಳೆಗೆ ತಂಗುದಾಣ ಯಾವಾಗ ಕುಸಿದು ಬೀಳುವುದೋ ಎಂದು ಹೇಳಲು ಸಾಧ್ಯವಿಲ್ಲ.
2001ರ ವರೆಗೆ ಕುಡುಪು ಗ್ರಾ.ಪಂ. ವ್ಯಾಪ್ತಿಯಲ್ಲಿದ್ದ ಈ ತಂಗುದಾಣವು ಇದೀಗ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರುತ್ತದೆ. ಹೆದ್ದಾರಿ ವಿಸ್ತರಣೆ ವೇಳೆ ಬಸ್ ತಂಗುದಾಣವನ್ನು ತೆರಳುಗೊಳಿಸುವುದು ಖಚಿತ. ಅಲ್ಲಿಯವರೆಗೆ ಬಸ್‌ಗೆ ಕಾಯುವವರು ನಿಲ್ಲಬೇಕಾದುದರಿಂದ ಸದ್ಯದ ಮಟ್ಟಿಗೆ ಬೇರೆ ವ್ಯವಸ್ಥೆಯನ್ನಾದರೂ ಕಲ್ಪಿಸಿಕೊಡಬೇಕು. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಶೀಘ್ರ ತಾತ್ಕಾಲಿಕ ತಂಗುದಾಣ ನಿರ್ಮಾಣ
ಬೈತುರ್ಲಿ ಬಸ್ ತಂಗುದಾಣದ ಅಪಾಯಕಾರಿ ಸ್ಥಿತಿಯಲ್ಲಿರುವುದು ಗಮನಕ್ಕೆ ಬಂದಿದೆ. ಹೆದ್ದಾರಿ ಕಾಮಗಾರಿ ನಡೆಯಲಿರುವುದರಿಂದ ಹೊಸ ತಂಗುದಾಣ ನಿರ್ಮಿಸಿದರೆ ವ್ಯರ್ಥವಾಗುತ್ತದೆ. ಸದ್ಯ ಪಕ್ಕದಲ್ಲಿ ಶೀಟ್ ಹಾಕಿ ತಾತ್ಕಾಲಿಕ ತಂಗುದಾಣ ನಿರ್ಮಾಣ ಮಾಡಲಾಗುವುದು. ಮೂರ್ನಾಲ್ಕು ದಿನದಲ್ಲಿ ಸಿದ್ಧಪಡಿಸಲಾಗುವುದು. ಕುಲಶೇಖರ, ಕಲ್ಪನೆ ಪ್ರದೇಶದಲ್ಲಿ ಸಾಕಷ್ಟು ಹಿಂದೆಯೇ ಬಸ್ ತಂಗುದಾಣಗಳನ್ನು ನಿರ್ಮಿಸಲಾಗಿದೆ.
– ಭಾಸ್ಕರ್ ಕೆ., ಸ್ಥಳೀಯ ಕಾರ್ಪೋರೆಟರ್