Advertisement

Bagalkot: ಜಿಲ್ಲೆಯಲ್ಲಿ 2.11 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ

06:16 PM Aug 18, 2023 | Team Udayavani |

ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ 265000 ಹೆಕ್ಟೇರ್‌ ಬಿತ್ತನೆ ಕ್ಷೇತ್ರ ಗುರಿ ಹೊಂದಿದ್ದು, ಈ ಪೈಕಿ ಇಲ್ಲಿಯವರೆಗೆ 211259 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ|ಎಲ್‌.ಐ.ರೂಡಗಿ ತಿಳಿಸಿದ್ದಾರೆ.

Advertisement

ರೈತರ ಕೃಷಿ ಭೂಮಿಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಬಿತ್ತನೆಯಾದ ಪ್ರದೇಶದಲ್ಲಿ ಮೆಕ್ಕೆಜೋಳ 41336 ಹೆಕ್ಟೇರ್‌, ಸಜ್ಜೆ 11438 ಹೆಕ್ಟೇರ್‌, ತೊಗರಿ 18798 ಹೆಕ್ಟೇರ್‌, ಹೆಸರು 6846 ಹೆಕ್ಟೇರ್‌, ಸೂರ್ಯಕಾಂತಿ 8515 ಹೆಕ್ಟೇರ್‌ ಹಾಗೂ ಕಬ್ಬು 119122 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಜೂನ್‌ ಮಾಹೆಯಿಂದ ಆ.15ರವರೆಗೆ 186.4 ಮಿಮಿ ಸಾಮಾನ್ಯ ಮಳೆಗೆ 136.0 ಮಿಮಿ. ಮಳೆಯಾಗಿದ್ದು, ಶೇ. 27 ಮಳೆ ಕೊರತೆ ಆಗಿದೆ ಎಂದರು.

ಕಳೆದ ವರ್ಷ ಇದೇ ಅವಧಿಯಲ್ಲಿ 279.9 ಮಿಮಿ ಮಳೆ ಬಂದಿದ್ದು, ಪೂರ್ವ ಮುಂಗಾರು, ಮುಂಗಾರು ಜೂನ್‌ ಮಾಹೆಯಲ್ಲಿ ಮಳೆಯು ಎಲ್ಲ ತಾಲೂಕುಗಳಲ್ಲಿ ಸಮರ್ಪಕವಾಗದಿರುವುದರಿಂದ ಬಿತ್ತನೆ ಕುಂಠಿತವಾಗಿರುತ್ತದೆ. ತದನಂತರ ಜುಲೈ ತಿಂಗಳಲ್ಲಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಮಳೆಯಾಗಿ ಬಿತ್ತನೆ ಪ್ರಾರಂಭವಾಗಿರುತ್ತದೆ. ಮುಂಗಾರು ಹಂಗಾಮಿನ ಮುಖ್ಯ ದ್ವಿದಳ ಧಾನ್ಯ
ಬೆಳೆಗಳಾದ ಹೆಸರು ಮತ್ತು ಉದ್ದು, ಏಕದಳ ಧಾನ್ಯ ಸಜ್ಜೆ ಹಾಗೂ ಎಣ್ಣೆಕಾಳು ಬೆಳೆಗಳಾದ ಸೂರ್ಯಕಾಂತಿ ಮತ್ತು ಸೋಯಾ ಅವರೆಯು ಗುರಿಗೆ ತಕ್ಕಂತೆ ಬಿತ್ತನೆಯಾಗಿಲ್ಲ ಎಂದು ಹೇಳಿದ್ದಾರೆ.

ಇಂತಹ ಕ್ಷೇತ್ರಗಳಲ್ಲಿ ಹಿಂಗಾರು ಹಂಗಾಮಿನಲ್ಲಿ ಮಳೆ ಚೆನ್ನಾಗಿ ಆದರೆ ಆ ಪ್ರದೇಶವು ಜೋಳ ಮತ್ತು ಕಡಲೆ ಬಿತ್ತನೆಯಾಗುತ್ತದೆ. ಆದ್ದರಿಂದ ರೈತರು ಸಮಪರ್ಕ ಮಣ್ಣಿನ ತೇವಾಂಶ ನೋಡಿ ಬಿತ್ತನೆ ಮಾಡುವಂತೆ ಜಂಟಿ ಕೃಷಿ ನಿರ್ದೇಶಕರು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪರ್ಯಾಯ ಬೆಳೆಯಾಗಿ ಆಗಸ್ಟ್‌ ಪಾಕ್ಷಿಕದಲ್ಲಿ ನೀರಾವರಿ ಅಥವಾ ಮಳೆಯಾದ ಸಮಯದಲ್ಲಿ ಸೂರ್ಯಕಾಂತಿ, ಹುರಳಿ, ನವಣೆ, ಎಳ್ಳು ಮತ್ತು ಗುರೆಳ್ಳು ಬೆಳೆಯಲು ಸೂಕ್ತಕಾಲವಾಗಿರುವುದರಿಂದ ರೈತರು ಬಿತ್ತನೆ
ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ, ಹೆಸರು, ಮೆಕ್ಕೆಜೋಳ, ತೊಗರಿ, ಶೇಂಗಾ ಬಿತ್ತನೆಯಾಗಿ 30-40 ದಿವಸದ ಬೆಳೆಗಳಿದ್ದು, ಮಣ್ಣಿನ ತೇವಾಂಶ ಕಾಪಾಡಿಕೊಳ್ಳುವ ನಿಟ್ಟನಲ್ಲಿ ಮೇಲಿಂದ ಮೇಲೆ ಎಡೆಕುಂಟೆ ಹೊಡೆಯಬೇಕು. ನೀರಾವರಿ ಪ್ರದೇಶದಲ್ಲಿ ಮೇಲುಗೊಬ್ಬರ ಕೊಡಬೇಕು, ತೊಗರಿಯಲ್ಲಿ ಕುಡಿ ಚಿವಟುವ ಪದ್ದತಿ ಅಳವಡಿಸಿ ಕೊಂಡರೆ ಬೆಳೆಯು
ಕವಲೊಡೆದು ಹೆಚ್ಚಿನ ಇಳುವರಿ ಕೊಡುತ್ತದೆ ಎಂದು ಹೇಳಿದ್ದಾರೆ.

ಈ ಮುಂಗಾರು ಹಂಗಾಮಿನಲ್ಲಿ ಸಾಮಾನ್ಯ ರೈತರಿಗೆ ಬಿತ್ತನೆ ಬೀಜಗಳನ್ನು ಶೇ.50 ಮತ್ತು ಪ.ಜಾ, ಪಪಂ ರೈತರಿಗೆ ಶೇ.75 ರ ಸಹಾಯಧನದಲ್ಲಿ ಜಿಲ್ಲೆಯ 18 ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸುವ ಪ್ರಕ್ರಿಯೆ ನಡೆದಿದೆ. ಒಟ್ಟಿನಲ್ಲಿ ಜಿಲ್ಲೆಗೆ 5920 ಕ್ವಿಂಟಾಲ್‌ ವಿವಿಧ ಬಿತ್ತನೆ ಬೀಜಗಳ ಗುರಿಹೊಂದಿದ್ದು, ಈಗಾಗಲೇ 6696 ಕ್ವಿಂಟಲ್‌ ದಾಸ್ತಾನು ಮಾಡಿ, ಅದರಲ್ಲಿ 4794 ಕ್ವಿಂಟಲ್‌ ವಿತರಿಸಲಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ 1901 ಕ್ವಿಂಟಲ್‌ ಬಿತ್ತನೆ ಬೀಜ ದಾಸ್ತಾನು ಇರುತ್ತದೆ. ಜಿಲ್ಲೆಯ 58455 ರೈತರು ಇದರ ಲಾಭ ಪಡೆದಿದ್ದಾರೆ ಎಂದು ಹೇಳಿದ್ದಾರೆ.

Advertisement

ಮುಂಗಾರು ಹಂಗಾಮಿಗೆ ಒಟ್ಟಾರೆ 99451 ಮೆ.ಟನ್‌ನಷ್ಟು ರಸಗೊಬ್ಬರ ಅವಶ್ಯಕತೆ ಇದ್ದು, ಈ ಪೈಕಿ 135129 ಮೆ.ಟನ್‌ ದಾಸ್ತಾನು ಇದೆ. ಇದರಲ್ಲಿ 71651 ಮೆ.ಟನ್‌ನಷ್ಟು ಮಾರಾಟವಾಗಿದ್ದು, ರಸಗೊಬ್ಬರ ವಿತರಕರಲ್ಲಿ 63475 ಮೆ.ಟನ್‌ನಷ್ಟು ರಸಗೊಬ್ಬರ ದಾಸ್ತಾನು ಇರುವುದು. ಇದರಲ್ಲಿ 17916 ಮೆ.ಟನ್‌ ಯೂರಿಯಾ, 12221 ಮೆ. ಟನ್‌ ಡಿ.ಎ.ಪಿ, 27998 ಮೆ.ಟನ್‌ ಕಾಂಪ್ಲೆಕ್ಸ್‌, 3674 ಮೆ.ಟನ್‌ ಎಂ.ಓ.ಪಿ, 1716 ಮೆ.ಟನ್‌ ಎಸ್‌.ಎಸ್‌ .ಪಿ, ಇರುವುದು. ಜಿಲ್ಲೆಯಲ್ಲಿ ಯಾವುದೇ ಬಿತ್ತನೆ ಬೀಜಗಳ ಮತ್ತು ರಸಗೊಬ್ಬರ ಕೊರತೆ ಇರುವುದಿಲ್ಲ ರೈತರು ಆತಂಕ ಪಡುವ ಅಗತ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next