Advertisement

ಬರದನಾಡು ಜಲದ ನಾಡಾಗಿಸಲು ಬದ್ಧ

01:22 PM Apr 30, 2022 | Team Udayavani |

ದಾವಣಗೆರೆ: ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಕೆರೆಗಳನ್ನು ತುಂಬಿಸಿದರೆ ಬರದನಾಡು ಜಲದ ನಾಡಾಗಿ ಪರಿವರ್ತನೆಯಾಗಲಿದೆ. ಭದ್ರೆಯ ನೀರಿಗೆ, ರೈತರ ಬೆವರು ಸೇರಿಸಿದರೆ ಬಂಗಾರದ ಬೆಳೆ ಬೆಳೆಯಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಶುಕ್ರವಾರ ಜಿಲ್ಲೆಯ ಜಗಳೂರಿನಲ್ಲಿ ನಡೆದ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಸೇರಿದಂತೆ ವಿಧಾನಸಭೆ ಕ್ಷೇತ್ರದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆಗಾಗಿ ಸಾಕಷ್ಟು ಹೋರಾಟಗಳು ನಡೆದರೂ ಕಾಮಗಾರಿ ಆಗಿರಲಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗ ದಿಟ್ಟ ನಿಲುವು ಪ್ರಕಟಿಸಿ, ಯೋಜನೆಗೆ ಹಣಕಾಸು ಕೊಡುವ ತೀರ್ಮಾನ ಮಾಡಿದರು. ಬಳಿಕ ಯೋಜನೆಗಾಗಿ 2.4ಟಿಎಂಸಿ ಅಡಿ ನೀರು ಕೊಡಲು ತೀರ್ಮಾನ ಮಾಡಿದರು. ಈಗ ಬರೋಬರಿ 18 ಸಾವಿರ ಹೆಕ್ಕೇರ್‌ ಪ್ರದೇಶಕ್ಕೆ ಹನಿ ನೀರಾವರಿ ಒದಗಿಸುವ ಅಂದಾಜು 1400 ಕೋಟಿ ರೂ.ಗಳ ಯೋಜನೆಗೆ ಚಾಲನೆ ದೊರಕಿದೆ. ಇದಲ್ಲದೇ 57ಕೆರೆ ತುಂಬಿಸುವ ಯೋಜನೆ ಜಾರಿಯಾಗುತ್ತಿದ್ದು ಇದರಿಂದ ಮಧ್ಯ ಕರ್ನಾಟಕ ಭಾಗದಲ್ಲಿ ಜಲಕ್ರಾಂತಿ ಆಗಲಿದೆ ಎಂದರು.

ರಾಜ್ಯ ಸರ್ಕಾರ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದ್ದು 20ಸಾವಿರ ಕೋಟಿ ರೂ. ನೀರಾವರಿಗಾಗಿ ನೀಡುತ್ತಿದೆ. ಎತ್ತಿನಹೊಳೆ ಯೋಜನೆಗೆ ಕಾಯಕಲ್ಪ ನೀಡಲು ಮೂರು ಸಾವಿರ ಕೋಟಿ ರೂ. ಮೀಸಲಿರಿಸಲಾಗಿದೆ. ಅಪೂರ್ಣವಾಗಿರುವ ಯೋಜನೆಗಳನ್ನು ಗುರುತಿಸಿ ಅವುಗಳಿಗೆ ಕಾಯಕಲ್ಪ ಕೊಡಲು ಆದ್ಯತೆ ನೀಡಲಾಗುತ್ತಿದೆ ಎಂದರು. ಚೈನ್ಯ ಕಾರಿಡಾರ್‌ ಮೂಲಕ ದಾವಣಗೆರೆ ಸೇರಿದಂತೆ ಐದು ಜಿಲ್ಲೆಗಳಲ್ಲಿ ಕೈಗಾರಿಕೆ ಅಭಿವೃದ್ಧಿ ಮೂಲಕ ಉದ್ಯೋಗ ಸೃಷ್ಟಿಗೆ ಕ್ರಮವಹಿಸಲಾಗಿದೆ. ಇದರಿಂದ ಕೃಷಿ ಕ್ರಾಂತಿಯ ಜತೆಗೆ ಕೈಗಾರಿಕಾ ಕ್ರಾಂತಿಯೂ ಆಗಲಿದೆ. ದಾವಣಗೆರೆ ಜಿಲ್ಲೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪಿಸಲಾಗುವುದು. ತುಮಕೂರು- ದಾವಣಗೆರೆ ರೈಲ್ವೆಗೆ ಅಡಿಗಲ್ಲನ್ನು ಕೇಂದ್ರ ಸಚಿವರಿಂದ ಪ್ರಾರಂಭಿಸಲಾಗುವುದು. ಇದರಿಂದ ಆರ್ಥಿಕ ಕ್ರಾಂತಿಯೂ ಆಗಲಿದೆ. ಹೀಗೆ ಸರ್ಕಾರ, ಮಧ್ಯ ಕರ್ನಾಟಕದ ಬಗ್ಗೆ ವಿಶೇಷ ಕಳಕಳಿ ಹೊಂದಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದರು.

Advertisement

ಸರ್ಕಾರ ಪರಿಶಿಷ್ಟ ಜಾತಿ, ಪಂಗಡದವರಿಗೆ 75ಯೂನಿಟ್‌ ವರೆಗೆ ಉಚಿತ ವಿದ್ಯುತ್‌, ಮನೆ ಕಟ್ಟಿಕೊಳ್ಳುವರಿಗೆ ಎರಡು ಲಕ್ಷ ರೂ. ವರೆಗೆ ಸಹಾಯಧನ ನೀಡುತ್ತಿದೆ. ರೈತ ಮಕ್ಕಳಿಗೆ ಸ್ಕಾಲರ್‌ಶಿಪ್‌, ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ, ಹಾಲು ಉತ್ಪಾದಕರಿಗಾಗಿ ಪ್ರತ್ಯೇಕ ಬ್ಯಾಂಕ್‌, ಮಹಿಳೆಯರ ಸಬಲೀಕರಣಕ್ಕಾಗಿ ಸ್ವಸಹಾಯ ಸಂಘಗಳಿಗೆ ಸಹಾಯ, ಕರಕುಶಲಕರ್ಮಿಗಳಿಗೆ, ಹಿರಿಯ ನಾಗರಿಕರಿಗೆ ಹೀಗೆ ಹಲವು ಸೌಲಭ್ಯಗಳನ್ನು ಬಜೆಟ್‌ ಮೂಲಕ ನೀಡಲಾಗುತ್ತಿದ್ದು ಬಜೆಟ್‌ನ ಎಲ್ಲ ಕಾರ್ಯಕ್ರಮ ಅನುಷ್ಠಾನಕ್ಕೆ ಆಜ್ಞೆ ಮಾಡಲಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದ್ದು ಭಾರತದಲ್ಲಿ ಕರ್ನಾಟಕವನ್ನು ನಂಬರ್‌ ಒನ್‌ ಮಾಡಲು ಸಂಕಲ್ಪ ಮಾಡಿದ್ದೇವೆ. ಸರ್ವಸ್ಪರ್ಶಿ, ಸರ್ವವ್ಯಾಪಿ ಸಂಕಲ್ಪದೊಂದಿಗೆ ನವ ಕರ್ನಾಟಕದಿಂದ ನವಭಾರತ ನಿರ್ಮಿಸಲು ನಾವು ಮುಂದುವರೆಯುತ್ತಿದ್ದೇವೆ ಎಂದರು.

ಬರನಾಡು ಆಗಲಿದೆ ಮಲೆನಾಡು

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ಭದ್ರಾಯೋಜನೆ ಸಾಕಾರದ ಕನಸು ಈಗ ಸಾಕಾರವಾಗಿದೆ. ಕೆರೆಗಳನ್ನು ತುಂಬಿಸುವ ಯೋಜನೆಯಿಂದ ಜಗಳೂರಿಗೆ ಇರುವ ಬರದನಾಡು ಎಂಬ ಹಣೆಪಟ್ಟಿ ಹೋಗಲಿದ್ದು ಮಲೆನಾಡು ರೀತಿಯಲ್ಲಿ ಹಸಿರಾಗಲಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಯ ವಿಶೇಷ ಅನುದಾನ ನೀಡಲಾಗಿತ್ತು. ಈಗ ಯೋಜನೆ ಮೂಲಕ ಕೆರೆಗಳನ್ನು ತುಂಬಿಸುವ ಮೂಲಕ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಗೋವಿಂದ ಕಾರಜೋಳ, ಆರ್‌. ಅಶೋಕ, ಶೀರಾಮುಲು, ಮುರುಗೇಶ ನಿರಾಣಿ, ಭೈರತಿ ಬಸವರಾಜ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್‌. ವಿ. ರಾಮಚಂದ್ರ, ರೇಣುಕಾಚಾರ್ಯ, ಮಾಡಾಳ್‌ ವಿರುಪಾಕ್ಷಪ್ಪ, ಪ್ರೊ. ಲಿಂಗಣ್ಣ, ಎನ್‌. ರವಿಕುಮಾರ್‌, ಕೆ.ಎಸ್. ನವೀನ್‌, ನಾರಾಯಣಸ್ವಾಮಿ ಇನ್ನಿತರರು ಕಾರ್ಯಕ್ರಮದಲ್ಲಿದ್ದರು

Advertisement

Udayavani is now on Telegram. Click here to join our channel and stay updated with the latest news.

Next