Advertisement

ಈ ವರ್ಷವಾದರೂ ಬದಿಯಡ್ಕ ಬಸ್‌ ನಿಲ್ದಾಣ ನನಸಾದೀತೆ?

03:15 PM Apr 18, 2017 | |

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಪಂಚಾಯತ್‌ಗಳಲ್ಲೊಂದು ಬದಿಯಡ್ಕ. ಆದರೆ ಇಲ್ಲಿನ ಬಸ್‌ ನಿಲ್ದಾಣ ಮಾತ್ರ ಈ ಪಂಚಾಯತ್‌ಗೆ ಕಪ್ಪು ಚುಕ್ಕೆಯಾಗಿದೆ. ಬದಿಯಡ್ಕ ಗ್ರಾಮ ಪಂಚಾಯತ್‌ ಕಚೇರಿಯಿಂದ ಕೆಲವೇ ದೂರವಿರುವ ಬಸ್‌ ನಿಲ್ದಾಣ ಹೊಸ ರೂಪ ಪಡೆಯಬಹುದೆಂದು ಹಲವು ವರ್ಷಗಳಿಂದ ಸ್ಥಳೀಯರು ಎದುರು ನೋಡುತ್ತಲೇ ಇದ್ದಾರೆ. ಆದರೆ ಹಲವು ಬಾರಿ ಈ ಬಸ್‌ ನಿಲ್ದಾಣವನ್ನು ಮುರಿದು ತೆಗೆದು ಹೊಸ ಬಸ್‌ ನಿಲ್ದಾಣ ಸ್ಥಾಪಿಸಲಾಗುವುದೆಂದು ಸಂಬಂಧಪಟ್ಟವರು ಭರವಸೆಗಳನ್ನು ನೀಡುತ್ತಲೇ ಬಂದಿದ್ದರು. ಇದೀಗ ಕೆಲವು ದಿನಗಳ ಹಿಂದೆಯಷ್ಟೇ 2017-18 ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಿದ ಬದಿಯಡ್ಕ ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಸೈಬುನ್ನೀಸಾ ಮೊಯ್ದಿನ್‌ ಕುಟ್ಟಿ ಅವರು ಬಸ್‌ ನಿಲ್ದಾಣದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಖಾಸಗಿ ವಲಯದ ಸಹಕಾರದೊಂದಿಗೆ ಬದಿಯಡ್ಕ ಪಂಚಾಯತ್‌ ಬಸ್ಸು ನಿಲ್ದಾಣ ನಿರ್ಮಿಸಲಾಗುವುದು ಎಂಬ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮತ್ತೆ ಹೊಸ ಬಸ್‌ ನಿಲ್ದಾಣ ಎಂಬ ಕನಸು ಗರಿಗೆದರಿದೆ. ಈ ಹಿನ್ನೆಲೆಯಲ್ಲಿ ಈ ವರ್ಷದಲ್ಲಾದರೂ ಹೊಸ ಬಸ್‌ ನಿಲ್ದಾಣ ತಲೆಯೆತ್ತಬಹುದೇ ಎಂಬುದಾಗಿ ಸ್ಥಳೀಯರು ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ.

Advertisement

ದಿನೇ ದಿನೇ ಅಭಿವೃದ್ಧಿಯ ಪಥದತ್ತ ಸಾಗುತ್ತಾ ಜನರನ್ನು ಆಕರ್ಷಿಸುತ್ತಿರುವ ಬದಿಯಡ್ಕ ಪೇಟೆಯಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ಇಲ್ಲದಿರುವುದು ದೊಡ್ಡ ಕೊರತೆಯೇ ಆಗಿದೆ. ಈಗ ಇರುವ ಬಸ್‌ ನಿಲ್ದಾಣ ಶೋಚನೀಯ ಸ್ಥಿತಿಯಲ್ಲಿದ್ದು, ಯಾವುದೇ ಕ್ಷಣದಲ್ಲೂ ಕುಸಿದು ಬೀಳುವಂತಿದೆ. ಸಾವಿರಾರು ಜನರ ಸಂಗಮ ಪ್ರದೇಶವಾಗಿರುವ ಬದಿಯಡ್ಕದ ಹೃದಯ ಭಾಗದಲ್ಲಿರುವ ಬಸ್‌ ನಿಲ್ದಾಣ ಎಲ್ಲಾ ಪ್ರದೇಶಗಳ ಸಂಗಮ ಪ್ರದೇಶವಾಗಿದೆ. ಮುಳ್ಳೇರಿಯ, ಕುಂಬಳೆ, ಕಾಸರಗೋಡು, ಪುತ್ತೂರು ಕಡೆಗೆ ಹೀಗೆ ಎಲ್ಲಿಗೂ ಹೋಗಬೇಕಾದರೂ ಬದಿಯಡ್ಕಕ್ಕೆ ಬರಲೇಬೇಕು. ಬದಿಯಡ್ಕ ಪಂಚಾಯತ್‌ ವ್ಯಾಪ್ತಿಯಲ್ಲಿ ಹತ್ತು ಹಲವು ದೇವಸ್ಥಾನಗಳು, ಮಸೀದಿಗಳು, ಇಗರ್ಜಿಗಳಿದ್ದು ದೂರದೂರಿನಿಂದ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇಂತಹ ಸಂಗಮ ಸ್ಥಳಕ್ಕೊಂದು ಎಲ್ಲಾ ಸೌಕರ್ಯಗಳಿರುವ ಸುಸಜ್ಜಿತವಾದ ಬಸ್‌ ನಿಲ್ದಾಣವಿಲ್ಲ ಎನ್ನುವುದೇ ದೊಡ್ಡ ಕೊರತೆ. ಹಲವು ವರ್ಷಗಳಿಂದ ಸ್ಥಳೀಯ ಜನರು ಸುಸಜ್ಜಿತ ಬಸ್‌ ನಿಲ್ದಾಣಕ್ಕೋಸ್ಕರ ಎದುರು ನೋಡುತ್ತಲೇ ಇದ್ದಾರೆ. ಆದರೆ ಹೊಸ ಬಸ್‌ ನಿಲ್ದಾಣ ಮಾತ್ರ ಕನಸಾಗಿಯೇ ಉಳಿದಿದೆ.

ಹಲವು ವರ್ಷಗಳ ಕನಸಾಗಿರುವ ಬಸ್‌ ನಿಲ್ದಾಣಕ್ಕೆ ಕಾಯಕಲ್ಪವಾಗಬೇಕಾಗಿದೆ. ಹಳೆಯ ಕಟ್ಟಡಕ್ಕೆ ತಾಗಿಕೊಂಡಿರುವ ಕಾಂಕ್ರೀಟಿನ ಕಟ್ಟಡದಲ್ಲಿ ಪ್ರಯಾಣಿಕರಿಗೆ ಕುಳಿತುಕೊಂಡು ವಿಶ್ರಾಂತಿ ಪಡೆಯಲು ಆಸನಗಳಿದ್ದವು.  ಈ ಆಸನಗಳಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರು ಸ್ವಲ್ಪ ಹೊತ್ತು ಕುಳಿತು ಬಿಸಿಲಿನ ಬೇಗೆಯಿಂದ ದಣಿವಾರಿಸಿಕೊಳ್ಳುತ್ತಿದ್ದರು. ಆದರೆ ಈ ಕಟ್ಟಡದಲ್ಲಿ ತ್ಯಾಜ್ಯ ರಾಶಿ ಬಿದ್ದಿದ್ದು ಗಬ್ಬು ವಾಸನೆ ಕೂಡಾ ಬೀರುತ್ತಿತ್ತು. ಪ್ರಯಾಣಿಕರು ಮೂಗನ್ನು ಮುಚ್ಚಿಕೊಂಡೆ ಇಲ್ಲಿ ಇರಬೇಕಾದ ಸ್ಥಿತಿಯಿತ್ತು. ಇಲ್ಲಿ ಕೆಲವರು ಅನಗತ್ಯವಾಗಿ ಕುಳಿತು ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದರು. ಕೆಲವರಿಗಂತೂ ನಿದ್ದೆ ಮಾಡುವ ಕೇಂದ್ರವಾಗಿಯೂ ಪರಿವರ್ತನೆಗೊಂಡಿತ್ತು.

ಈ ತಂಗುದಾಣದ ಸುತ್ತಲೂ ತ್ಯಾಜ್ಯ ರಾಶಿಯೇ ತುಂಬಿದೆ. ಮಳೆಗಾಲ ಹತ್ತಿರವಾಗಿದೆ. ಒಂದು ಮಳೆ ಬಂದರೆ ಇಲ್ಲಿ ಸೊಳ್ಳೆ ಉತ್ಪತ್ತಿಯಾಗಬಹುದು. ಸೊಳ್ಳೆಗಳ ಮೂಲಕ ವಿವಿಧ ಮಾರಕ ರೋಗಗಳು  ಹರಡಲು ಈ ತ್ಯಾಜ್ಯ ರಾಶಿ ಕಾರಣವಾಗಬಹುದು. ತ್ಯಾಜ್ಯವನ್ನು ಬಸ್ಸು ನಿಲ್ದಾಣದ ಹಿಂದಿನ ಭಾಗದಲ್ಲಿ ಸುರಿದು ಅಲ್ಲಿಗೆ ಬೆಂಕಿಯನ್ನು ಕೊಟ್ಟು ಬೂದಿ ಮಾಡುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದ್ದರೂ, ಮತ್ತೆ ಮತ್ತೆ ತ್ಯಾಜ್ಯ ರಾಶಿ ಬೀಳುತ್ತಿದೆ. ಹಗಲು ಹೊತ್ತಿನಲ್ಲಿ ಆ ತ್ಯಾಜ್ಯ ರಾಶಿಯ ಮೇಲೆ ಜಾನುವಾರುಗಳು ತಿನ್ನಲು ಏನಾದರೂ ಸಿಗುವುದೋ ಎಂದು ಹುಡುಕುತ್ತಿರುವುದು ಕಂಡುಬರುತ್ತದೆ. ಪ್ಲಾಸ್ಟಿಕ್‌ಗೆ  ಬೆಂಕಿ ಹಾಕುವುದರಿಂದ ಪರಿಸರ ಮಾಲಿನ್ಯಕ್ಕೂ ಕಾರಣ ವಾಗುತ್ತಿದೆ. ಇಲ್ಲಿ ರಾಶಿ ಬೀಳುವ ತ್ಯಾಜ್ಯ ರಾಶಿ ಸಮಸ್ಯೆಗೂ ಸೂಕ್ತ ಪರಿಹಾರವಾಗಬೇಕಿದೆ.

ಇತ್ತೀಚೆಗೆ ಬದಿಯಡ್ಕದಲ್ಲಿದ್ದ ಮದ್ಯದಂಗಡಿ ಮುಳ್ಳೇರಿ ಯಕ್ಕೆ ಸ್ಥಳಾಂತರಗೊಂಡಿರುವುದರಿಂದ ಮದ್ಯಪಾನಿಗಳ ಹಾವಳಿ ಸ್ವಲ್ಪ ಕಡಿಮೆಯೇ ಆಗಿದೆ. ಇಲ್ಲವಾದಲ್ಲಿ ಬಸ್ಸು ನಿಲ್ದಾಣವು ಅವರ ದಾಂಧಲೆ ಕೇಂದ್ರವಾಗಿರುತ್ತಿತ್ತು. ಸರಿಯಾದ ಶೌಚಾಲಯದ ವ್ಯವಸ್ಥೆ ಇದ್ದರೂ ಅದನ್ನು ವ್ಯವಸ್ಥಿತ ರೀತಿಯಲ್ಲಿ ಉಪಯೋಗಿಸದಿರುವುದರಿಂದ ಅದು ಶೋಚನೀಯ ಸ್ಥಿತಿಗೆ ತಲುಪಿದೆ. ಹೀಗಾಗಿ ಬಸ್ಸು ನಿಲ್ದಾಣದ ಅನತಿ ದೂರದಲ್ಲಿ ಇತ್ತೀಚೆಗೆ ಶೌಚಾಲಯವನ್ನು ನಿರ್ಮಿಸಲಾಗಿತ್ತು. ಅದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಬಸ್ಸು ತಂಗುದಾಣದಿಂದ ದೂರವೆಂಬ ಕೂಗು ಸಾರ್ವಜನಿಕರದ್ದು. ಆ ಶೌಚಾಲಯವು ಉತ್ತಮವಾಗಿ ಕಾರ್ಯಾಚರಿಸುತ್ತಿರುವುದು ಸಂತೋಷ ದಾಯಕ ವಿಚಾರವಾಗಿದೆ.

Advertisement

ಗ್ರಾಮ ಪಂಚಾಯತ್‌ಆಡಳಿತ, ಅಧಿಕಾರಿಗಳ ನಿರಂತರ ಶ್ರಮ ಇದ್ದರೆ ಮಾತ್ರ ಹೊಸ ಬಸ್ಸು ತಂಗುದಾಣ ನಿರ್ಮಾಣವಾಗಬಹುದು. ಖಾಸಗಿ ವಲಯದ ಸಹಕಾರದೊಂದಿಗೆ ಬದಿಯಡ್ಕ ಪಂಚಾಯತ್‌ ಬಸ್ಸು ನಿಲ್ದಾಣ ನಿರ್ಮಿಸಲಾಗುವುದು ಎಂಬ ಮುಂಗಡ ಪತ್ರದಲ್ಲಿ ನೀಡಿರುವ ಭರವಸೆ ಶೀಘ್ರವೇ ಈಡೇರುವಂತಾಗಲಿ. ಆ ಮೂಲಕ ಹಲವು ವರ್ಷಗಳ ಸ್ಥಳೀಯರ ಕನಸು ನನಸಾಗಲಿ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವತ್ಛ ಭಾರತ ಸಂಕಲ್ಪದಂತೆ ಬದಿಯಡ್ಕ ಗ್ರಾಮ ಪಂಚಾಯತ್‌ ಸ್ವತ್ಛ ಬದಿಯಡ್ಕ ವಾಗಿ ನಳನಳಿಸುವಂತಾಗಲಿ ಎಂದು  ಸ್ಥಳೀಯರ ಕನಸು ಈಡೇರುವಂತಾಗಲಿ.

ಕಯ್ನಾರರ ಆಡಳಿತಾವಧಿಯಲ್ಲಿ ನಿರ್ಮಾಣ
ನಾಡೋಜ ಡಾ| ಕಯ್ನಾರ ಕಿಞ್ಞಣ್ಣ ರೈ ಅವರ ಆಡಳಿತಾವಧಿಯಲ್ಲಿ ಅಂದರೆ 70ರ ದಶಕದಲ್ಲಿ ನಿರ್ಮಾಣಗೊಂಡ ಬಸ್‌ ನಿಲ್ದಾಣ ಅತ್ಯಂತ ಶೋಚ ನೀಯ ಸ್ಥಿತಿಯಲಿದ್ದು, ಸಂಪೂರ್ಣ ಶಿಥಿಲಗೊಂಡಿದೆ. ಈ ಕಾರಣದಿಂದ ಬಸ್‌ ನಿಲ್ದಾಣ ಸಮುತ್ಛಯದಲ್ಲಿದ್ದ ಅಂಗಡಿಗಳನ್ನು ಅಧಿಕೃತರ ಸೂಚನೆಯಂತೆ ಕಳೆದ ವರ್ಷವೇ ಖಾಲಿ ಮಾಡಲಾಗಿತ್ತು. ಅನೇಕ ವರ್ಷಗಳ ಹಳೆಯ ಬಸ್‌ ನಿಲ್ದಾಣದಿಂದ ಅಂಗಡಿಗಳನ್ನು ತೆರವುಗೊಳಿಸಿದ್ದರಿಂದಾಗಿ ಸ್ಥಳೀಯರ ಮನದಲ್ಲಿ ಹೊಸ ಬಸ್‌ ನಿಲ್ದಾಣ ಶೀಘ್ರವೇ ತಲೆಯೆತ್ತಬಹುದೆಂದು ನಿರೀಕ್ಷಿಸಿದ್ದರು. ಆದರೆ ಈ ವರೆಗೂ ಅಂತಹ ಪ್ರಕ್ರಿಯೆ ನಡೆದಿಲ್ಲ. ಇದೀಗ ಪಂಚಾಯತ್‌ ಮುಂಗಡಪತ್ರದಲ್ಲಿ ಬಸ್‌ ನಿಲ್ದಾಣ ಪ್ರಸ್ತಾಪ ವಿರುವುದರಿಂದ ಮತ್ತೆ ಬಸ್‌ ನಿಲ್ದಾಣ ನಿರ್ಮಾಣ ವಾಗಬಹುದೆಂಬ ಆಶಯಕ್ಕೆ ಗರಿಮೂಡಿದೆ.

ಪ್ರದೀಪ್‌ ಬೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next